ಉಜಿರೆ: ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದಿಂದ ಸಿಯೋನ್ ಆಶ್ರಮದಲ್ಲಿ ಒಂದು ದಿನ-ಆರ್ಥಿಕ ನೆರವು ಹಸ್ತಾಂತರ

0

ಉಜಿರೆ: ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದಿಂದ ಆಹಾರ ದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಅ.12ರಂದು ಗಂಡಿ ಬಾಗಿಲು ಸಿಯೋನ್ ಆಶ್ರಮದಲ್ಲಿ ನಡೆಯಿತು.

ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದಿಂದ ಸಿಯೋನ್ ಆಶ್ರಮದಲ್ಲಿ ಅನ್ನದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಯಿತು.

ಈ ವಿಶೇಷ ಕಾರ್ಯಕ್ರಮದಲ್ಲಿ ಸಂಘದ ಗೌರವಾನ್ವಿತ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್, ಉಪಾಧ್ಯಕ್ಷ ಅನಿಲ್ ಪ್ರಕಾಶ್ ಡಿಸೋಜ, ನಿರ್ದೇಶಕರಾದ ಗೀತಾ ಫೆಲ್ಸಿಯಾನ ಡಿಸೋಜ, ಫೆಲಿಕ್ಸ್ ಡಿಸೋಜ, ರೋಶನ್ ರೋಡ್ರಿಗಸ್ ಮತ್ತು ವಲೆರಿಯನ್ ಕ್ರಾಸ್ತಾ ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿ ಆಶ್ರಮವಾಸಿಯವರೊಂದಿಗೆ ಸಂತೋಷವನ್ನು ಹಂಚಿಕೊಂಡರು.

ಡಾ. ಯು.ಸಿ. ಪೌಲೋಸ್, ಸಿಯೋನ್ ಆಶ್ರಮದ ಅಧ್ಯಕ್ಷರು, ಆಶ್ರಮದ ನಿತ್ಯ ಚಟುವಟಿಕೆಗಳು, ಖರ್ಚುಗಳ ವಿವರ ಹಾಗೂ ಆಶ್ರಮದಲ್ಲಿ ಆಶ್ರಯ ಪಡೆದಿರುವ ಜನರ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು. ಅವರು ಸಂಘದ ಇಂತಹ ಧರ್ಮಪರ ಸೇವೆಯನ್ನು ಪ್ರಶಂಸಿಸಿ, “ಇದು ದೇವರ ಕೆಲಸ” ಎಂದು ಹೊಗಳಿದರು.

ಸಂಘದ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್ ಆಶ್ರಮವಾಸಿಗಳನ್ನು ಉದ್ದೇಶಿಸಿ ಮಾತನಾಡುತ್ತ “ಸಿಯೋನ್ ಆಶ್ರಮ ಸಮಾಜದ ನಿರ್ಗತಿಕರು, ಅಸ್ವಸ್ಥರು ಮತ್ತು ಶೋಷಿತ ವರ್ಗದ ಜನರಿಗಾಗಿ ಮಾಡುತ್ತಿರುವ ಸೇವೆ ಎಲ್ಲರಿಗೂ ಪ್ರೇರಣೆಯಾಗಬೇಕು. ದೇವರು ನಮ್ಮೆಲ್ಲರನ್ನು ವಿಭಿನ್ನವಾಗಿ ಸ್ರಷ್ಟಿಸಿದ್ದಾರೆ. ಇಂದು ಈ ದಿನ ನಿಮ್ಮೊಂದಿಗೆ ಕಳೆಯಲು ಬಹಳ ಸಂತೋಷವಾಗುತ್ತಿದೆ. ಇದರ ಮುಖ್ಯಸ್ತ ಮಾನ್ಯ ಯು. ಸಿ. ಪೌಲೋಸ್ ಆಧುನಿಕ ಕಾಲದ ದೇವರ ಪ್ರವಾದಿಯಾಗಿ ನಿಮ್ಮ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಸಂತೋಷದ ವಿಷಯ ಎಂದು ಹೇಳಿದರು.

ಸಂಘದ ವತಿಯಿಂದ ರೂ. 50,000/- ಮೊತ್ತದ ಚೆಕ್ ಅನ್ನು ಆಶ್ರಮಕ್ಕೆ ಅಧ್ಯಕ್ಷರು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಸಂಘದ ಸಿಬ್ಬಂದಿಯವರು ವಿವಿದ ನ್ರತ್ಯಗಳ ಮೂಲಕ ಆಶ್ರಮವಾಸಿಗಳನ್ನು ಹುರಿದುಂಬಿಸಿದರು.ನಿವಾಸಿಗಳಿಗಾಗಿ ವಿವಿಧ ಮನರಂಜಿತ ಆಟಗಳನ್ನು ನಡೆಸಲಾಯಿತು.ವಿಜೇತರಿಗೆ ಅಧ್ಯಕ್ಷರು ಬಹುಮಾನ ವಿತರಿಸಿದರು. ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬಂಧಿ ಎಲ್ಲಾ ವಾರ್ಡುಗಳಿಗೆ ಭೇಟಿ ನೀಡಿ ಅವರ ಜೊತೆ ಖುಷಿಯುಳ್ಳ ಹಾಗೂ ಭಾವುಕ ಕ್ಷಣಗಳನ್ನು ಹಂಚಿಕೊಂಡರು.

ರಿತೇಶ್, ಸಿಯೋನ್ ಆಶ್ರಮದ ಮ್ಯಾನೇಜರ್, ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗೆ ಆಶ್ರಮದ ಸ್ಥಿತಿಗತಿಯ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು. ಆಶ್ರಮವು ಹೇಗೆ ಬೆಳೆದು ಬಂದಿದೆ ಎಂಬುದನ್ನು ವಿವರಿಸಿ, ಸಂಸ್ಥೆಯ ಭವಿಷ್ಯದ ದೃಷ್ಟಿಕೋಣವನ್ನು ಪ್ರಸ್ತುತಪಡಿಸಿದರು. ವಿಲ್ಸನ್ ನೆಲ್ಸನ್ ಮೋನಿಸ್, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here