ಬೆಳ್ತಂಗಡಿ: ಭಾರತದ ಅತಿ ದೊಡ್ಡ ಕಾರ್ಮಿಕ ಸಂಘಟನೆಯಾದ ಭಾರತೀಯ ಮಜ್ದೂರು ಸಂಘ (BMS) ನ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಪ್ರೈವೇಟ್ ಟೆಲಿಕಾಂ ಮಜ್ದೂರು ಸಂಘ (BPTMS) ಕರ್ನಾಟಕ ಘಟಕ ಅ. 13ರಂದು ಬೆಂಗಳೂರಿನ ಜಿಯೋ ಕಾರ್ಪೊರೇಟ್ ಕಚೇರಿ ಎದುರು ಮಹಾ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ಈ ಧರಣಿ ಟೆಲಿಕಾಂ ವಲಯದ ಸಾವಿರಾರು ಕಾರ್ಮಿಕರ ಬದುಕು, ಹಕ್ಕುಗಳು ಮತ್ತು ಮಾನವೀಯ ಗೌರವವನ್ನು ಕಾಪಾಡುವ ಹೋರಾಟವಾಗಿದೆ. ದಿನರಾತ್ರಿ 24 ಗಂಟೆ ದುಡಿಯುವ ಕಾರ್ಮಿಕರಿಗೆ ಕೇವಲ 8 ಗಂಟೆಗಳ ವೇತನ ನೀಡುವ ಮಧ್ಯವರ್ತಿ ಕಂಪನಿಗಳ ಶೋಷಣೆಯು ಮಾನವೀಯ ಮೌಲ್ಯಗಳ ಮೇಲಿನ ನೇರ ಹಲ್ಲೆಯಾಗಿದೆ. ಜಿಯೋ ಮತ್ತು ಇಂಡಸ್ ಟವರ್ಸ್ ಕಂಪನಿಗಳಲ್ಲಿ ಸುಮಾರು 2000ಕ್ಕೂ ಹೆಚ್ಚು ಕಾರ್ಮಿಕರು ದೀರ್ಘಕಾಲದಿಂದ ವೇತನ ಕತ್ತರಿಕೆ, ಒತ್ತಡ, ಕೆಲಸದಿಂದ ವಜಾಗೊಳಿಸುವಿಕೆ ಮುಂತಾದ ದಬ್ಬಾಳಿಕೆಗಳನ್ನು ಎದುರಿಸುತ್ತಿದ್ದಾರೆ.
ಈ ಅನ್ಯಾಯದ ವಿರುದ್ಧ ಕಾರ್ಮಿಕರ ಪರವಾಗಿ BPTMS ಶಾಂತಿಯುತವಾದ ಮತ್ತು ಕಾನೂನುಬದ್ಧ ಹೋರಾಟಕ್ಕೆ ಮುಂದಾಗಿದೆ. ಇದು ಕೇವಲ ಕರ್ನಾಟಕದ ಧ್ವನಿಯಲ್ಲ — ಭಾರತದ ಎಲ್ಲಾ ಕಾರ್ಮಿಕರ ಏಕತೆಯ ಘೋಷಣೆ. ದಕ್ಷಿಣ ಕನ್ನಡ ಜಿಲ್ಲೆಯ ಭಾರತೀಯ ಮಜ್ದೂರು ಸಂಘ (BMS) ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸುತ್ತದೆ. ಜಿಲ್ಲೆಯ ಎಲ್ಲ ಟೆಲಿಕಾಂ ಮತ್ತು ನೆಟ್ವರ್ಕ್ ಕಾರ್ಮಿಕರು, ಹಾಗೂ ಶ್ರಮಿಕ ವರ್ಗದ ಪ್ರತಿನಿಧಿಗಳು ಅ.13ರ ಧರಣಿಯಲ್ಲಿ ಭಾಗವಹಿಸಿ ತಮ್ಮ ಹಕ್ಕುಗಳ ಪರ ಧ್ವನಿ ಎತ್ತಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಸಂಘಟನೆ ಸದಾ ಶ್ರಮಿಕರ ಹಕ್ಕುಗಳ ಪರ ನಿಂತಿದೆ. ಕಾರ್ಮಿಕರ ಶೋಷಣೆಯನ್ನು ಸಹಿಸುವುದಿಲ್ಲ ಎಂಬ ಹೋರಾಟದ ನಿಲುವು ನಮ್ಮ ಅಡಿಗಲ್ಲಾಗಿದೆ. ಕಾರ್ಮಿಕರ ಹಕ್ಕುಗಳನ್ನು ತುಳಿಯುವವರ ವಿರುದ್ಧ ದಕ್ಷಿಣ ಕನ್ನಡದ ಶಕ್ತಿ, ಏಕತೆ ಮತ್ತುಸಂಘಟನಾ ಶಿಸ್ತಿನ ಮೂಲಕ
ಉತ್ತರ ನೀಡುವುದು ನಮ್ಮ ಕರ್ತವ್ಯ,” ಎಂದು ಭಾರತೀಯ ಮಜ್ದೂರು ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು. ಹೇಳಿದರು.
ಅವರು ಮುಂದುವರೆದು, ಇಂದಿನ ಟೆಲಿಕಾಂ ಕಾರ್ಮಿಕರು ರಾಷ್ಟ್ರ ನಿರ್ಮಾಣದ ಅಪ್ರತಿಮ ಶಕ್ತಿ. ಅವರ ಬೆವರಿಲ್ಲದೆ ‘ಡಿಜಿಟಲ್ ಇಂಡಿಯಾ’ ಸಾಧ್ಯವಲ್ಲ. ಅವರ ಶ್ರಮಕ್ಕೆ ಗೌರವ ನೀಡದೆ ಲಾಭದ ಲಾಲಸೆಯಲ್ಲಿ ಬದುಕುವ ಕಂಪನಿಗಳ ವಿರುದ್ಧ ನಾವೆಲ್ಲರೂ ಒಂದಾಗಿ ನಿಲ್ಲಬೇಕಾದ ಸಮಯ ಬಂದಿದೆ,” ಎಂದು ಕರೆ ನೀಡಿದರು.