ಶಿಬಾಜೆ: ಅರಂಪಾದೆ ಎಂಬಲ್ಲಿ ಕಳೆದ ಹಲವು ವರ್ಷಗಳಿಂದ ವಾಸವಿದ್ದ ಒ. ಪಿ. ಜಾರ್ಜ್ ಅವರ ರಬ್ಬರ್ ಕೃಷಿ ತೋಟವನ್ನು ಅರಣ್ಯ ಇಲಾಖೆಯವರು ತೆರವುಗೊಳಿಸಲಾದ ಹಿನ್ನೆಲೆಯಲ್ಲಿ ಅ.6ರಂದು ಶಾಸಕ ಹರೀಶ್ ಪೂಂಜ ಅವರು ಪ್ರದೇಶಕ್ಕೆ ಭೇಟಿ ನೀಡಿ ಮನೆಯವರಿಗೆ ಸಮಾಧಾನದ ಮಾತುಗಳನ್ನು ಆಡಿದರು.

ಶಿಬಾಜೆ ಗ್ರಾಮದಲ್ಲಿ 184ಸರ್ವೇ ನಂಬರ್ ನಲ್ಲಿ ಸುಮಾರು 80ಕ್ಕೂ ಹೆಚ್ಚಿನ ಕುಟುಂಬ ವಾಸವಿದ್ದು ಇದರಲ್ಲಿ ಹೆಚ್ಚಿನವರು ಜೀವನಕ್ಕೆ ಇದೇ ಭೂಮಿಯನ್ನು ನಂಬಿಕೊಂಡು ಇಲ್ಲಿ ಕೃಷಿ ಮಾಡಿ ಜೀವನ ಮಾಡುತ್ತಿದ್ದಾರೆ. ಏಕಾ ಏಕಿ ಅರಣ್ಯ ಇಲಾಖೆಯವರು ತೆರವುಗೊಳಿಸಿ ಎಂದು ಹೇಳಿದರೆ ಜೀವನವೇ ಬುಡ ಮೇಲಾಗುತ್ತದೆ. ಇದರಿಂದ ದೊಡ್ಡ ಸಮಸ್ಯೆಗಳೇ ಉದ್ಭವ ಆಗುತ್ತದೆ ಎಂದು ಶಾಸಕರ ಬಳಿ ಸ್ಥಳೀಯರು ಕಷ್ಟ ತೋಡಿ ಕೊಂಡರು.

ಶಾಸಕರು ಮಾತನಾಡಿ ಎಲ್ಲಾ 184ಸರ್ವೇ ನಂಬರ್ ನಲ್ಲಿ ವಾಸ ಮಾಡುವವರ ಜೊತೆ ನಾನಿದ್ದೇನೆ. ಎಲ್ಲರು ಒಟ್ಟಾಗಿ ತಮ್ಮಲ್ಲಿರುವ ದಾಖಲೆಗಳನ್ನು ನೀಡಿ ಹೈಕೋರ್ಟಿನಲ್ಲಿ ಇಂಜಕ್ಷನ್ ಆದೇಶ ಪಡೆಯುವ ಎಂದು ಹೇಳಿದರು. ಗ್ರಾ. ಪಂ. ನಿಕಟಪೂರ್ವಧ್ಯಕ್ಷ ರತೀಶ್ ಬಿ., ನಿಕಟಪೂರ್ವ ಉಪಾಧ್ಯಕ್ಷ ಉಪಾಧ್ಯಕ್ಷ ವಿನಯಚಂದ್ರ ಟಿ., ಶಿಶಿಲ ಗ್ರಾ. ಪಂ. ನಿಕಟಪೂರ್ವಧ್ಯಕ್ಷ ಸಂದೀಪ್, ಇನ್ನಿತರರು ಉಪಸ್ಥಿತರಿದ್ದರು.