ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಸೇವಾ ನಿವೃತ್ತಿ

0

ಬೆಳ್ತಂಗಡಿ ಗ್ರಾಮಾಂತರ ವೃತ್ತ ಕಚೇರಿಯ ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ೩೩ ವರ್ಷ ಸೇವೆ ಸಲ್ಲಿಸಿ ಸೆ.೩೦ರಂದು ನಿವೃತ್ತರಾಗಿದ್ದಾರೆ. ೧೯೯೨ರಲ್ಲಿ ಚೆನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದ ಇವರು ಮಂಗಳೂರು ಸಂಚಾರ ಠಾಣೆ, ಪಶ್ಚಿಮ, ಬಜ್ಪೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ೨೦೦೩ರಲ್ಲಿ ಎಸ್‌ಐ ಆಗಿ ನೇರ ನೇಮಕಾತಿಗೊಂಡು ಯಲಹಂಕ ಪೋಲಿಸ್ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದ ಇವರು ಎಸ್‌ಐಯಾಗಿ ಬೆಂಗಳೂರಿನ ವೈಯ್ಯಾಲಿ ಕಾವಲ್, ಉಪ್ಪಿನಂಗಡಿ, ದಕ್ಷಿಣ ಕನ್ನಡ ಅಬಕಾರಿ ದಳ, ವೇಣೂರು, ಪುತ್ತೂರು ಸಂಚಾರ, ಬಂಟ್ವಾಳ ನಗರ, ಸುಬ್ರಹ್ಮಣ್ಯ, ಕಾರವಾರ ಸಂಚಾರ ಠಾಣೆ ಹಾಗೂ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ಸಲ್ಲಿಸಿದ್ದರು.

೨೦೧೫ರಲ್ಲಿ ಪೊಲೀಸ್ ನಿರೀಕ್ಷಕರಾಗಿ ಪದೋನ್ನತಿ ಹೊಂದಿದ ಇವರು ಜಿಲ್ಲಾ ವಿಶೇಷ ಘಟಕ, ಬೆಳ್ತಂಗಡಿ ವೃತ್ತ, ಮೈಸೂರು ಸಂಚಾರ ಠಾಣೆ, ಉಪ್ಪಿನಂಗಡಿ, ಡಿಸಿಐಬಿ ಮಡಿಕೇರಿ, ಐಜಿಪಿ ಕಚೇರಿ ಮಂಗಳೂರು, ಡಿಸಿಆರ್‌ಬಿ ಕೊಡಗು, ಕಾರ್ಕಳ ನಗರ ಮತ್ತು ಬೆಳ್ತಂಗಡಿ ಗ್ರಾಮಾಂತರ ವೃತ್ತದಲ್ಲಿ ಕರ್ತವ್ಯ ಸಲ್ಲಿಸಿ ಇದೀಗ ಸೇವಾ ನಿವೃತ್ತಿ ಹೊಂದಿದ್ದಾರೆ. ೧೯೬೫ರ ಸೆಪ್ಟೆಂಬರ್ ೧೫ರಂದು ತುಕ್ರ ಮಡಿವಾಳ ಹಾಗೂ ಜಾನಕಿ ದಂಪತಿ ಪುತ್ರನಾಗಿ ಜನಿಸಿದ ಇವರು ಅರಣ್ಯ ಇಲಾಖೆಯಲ್ಲಿ ಕರ್ತವ್ಯ ಸಲ್ಲಿಸುತ್ತಿರುವ ಪತ್ನಿ ಕಲ್ಪನಾ ಹಾಗೂ ಉಪನ್ಯಾಸಕಿಯಾಗಿರುವ ಪುತ್ರಿ ಮೈತ್ರಿ ಮತ್ತು ವೈದ್ಯ ವೃತ್ತಿ ನಡೆಸುತ್ತಿರುವ ಪುತ್ರ ಮಿತ್ರನ್‌ರವರೊಂದಿಗೆ ಮೂಡುಬಿದಿರೆಯ ರತ್ನಾಕರವರ್ಣಿ ನಗರದಲ್ಲಿ ನೆಲೆಸಿದ್ದಾರೆ.

ಪ್ರಾಥಮಿಕ ವಿದ್ಯಾಭ್ಯಾಸವನ್ನು ಕದ್ರಿಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಗಣಪತಿ ಹೈಸ್ಕೂಲ್ ಹಂಪನಕಟ್ಟೆ, ಪಿಯುಸಿ ಶಿಕ್ಷಣವನ್ನು ಸರ್ಕಾರಿ ಕಾಲೇಜು ಮಂಗಳೂರು ಹಾಗೂ ಪದವಿ ವಿದ್ಯಾಭ್ಯಾಸವನ್ನು ಮಂಗಳೂರು ಸೈಂಟ್ ಅಲೋಶಿಯಸ್ ಈವ್ನಿಂಗ್ ಕಾಲೇಜಿನಲ್ಲಿ ಪೂರೈಸಿದ್ದರು.

ಬೆಳ್ತಂಗಡಿ ಠಾಣಾ ಇನ್ಸ್‌ಪೆಕ್ಟರ್ ಬಿ.ಜಿ. ಸುಬ್ಬಾಪುರ ಮಠ್ ಅವರು ಇದೀಗ ಗ್ರಾಮಾಂತರ ವೃತ್ತ ನಿರೀಕ್ಷಕರ ಹುದ್ದೆಯಲ್ಲಿ ಪ್ರಭಾರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here