ಬೆಳ್ತಂಗಡಿ: ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ಉತ್ತಮ ಸಂಸ್ಕಾರದ ಜತೆ ಜೀವನ ಶಿಕ್ಷಣ ನೀಡುವಂತಹುದು. ಶ್ರೀ ಗುರುದೇವ ಕಾಲೇಜಿನ ಎನ್.ಎಸ್.ಎಸ್. ಶಿಬಿರಾರ್ಥಿಗಳು ಶಿಸ್ತು ಮತ್ತು ಸಂಸ್ಕಾರಯುತವಾಗಿ ನಡೆದುಕೊಂಡ ರೀತಿಯಲ್ಲೇ ಅವರಲ್ಲಿ ಉತ್ತಮ ವ್ಯಕ್ತಿತ್ವ ಬೆಳೆದಿದೆ ಎಂದು ಅರ್ಥವಾಗುತ್ತಿದೆ ಎಂದು ನಾರಾವಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ, ಎನ್.ಎಸ್.ಎಸ್. ಶಿಬಿರ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಉದಯ ಹೆಗ್ಡೆ ನಾರಾವಿ ಹೇಳಿದರು.
ಅವರು ನಾರಾವಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಸೆ.22 ರಿಂದ 28 ರವರೆಗೆ ನಡೆದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.
‘ವ್ಯಾಪಾರೀಕರಣವಾಗಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಸಂಸ್ಕಾರಯುತ ಬದುಕು ನೀಡುತ್ತಿರುವುದು ಶ್ರೀ ಗುರುದೇವ ಸಂಸ್ಥೆಯ ಹೆಗ್ಗಳಿಕೆಯಾಗಿದೆ. ಊರವರ ಮೆಚ್ಚುಗೆಗೆ ಪಾತ್ರವಾದ ಈ ಶಿಬಿರ ಸರ್ಕಾರಿ ಶಾಲೆಯ ಅಭಿವೃದ್ದಿಗೆ ಪೂರಕವಾಗಿದೆ’ ಎಂದರು.
ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ ಮಾತನಾಡಿ, ‘ಶಿಬಿರದಲ್ಲಿ ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆ ನೋಡಿ ಬಹಳ ಸಂತೋಷವಾಯಿತು. ಶ್ರಮದಾನದಲ್ಲಿ ತಾವು ಕೂಲಿ ಕಾರ್ಮಿಕರಿಗಿಂತ ಕಡಿಮೆ ಇಲ್ಲ ಎಂಬುದನ್ನು ಮಾಡುವ ಕೆಲಸದ ಮೂಲಕ ತೋರಿಸಿಕೊಟ್ಟಿದ್ದಾರೆ’ ಎಂದರು.
ಶಾಲಾ ಮುಖ್ಯೋಪಾಧ್ಯಾಯಿನಿ ಸುಶೀಲ ಮಾತನಾಡಿ, ‘ ಎನ್.ಎಸ್.ಎಸ್. ಈ ಶಾಲೆಗೆ ಮತ್ತು ಊರಿಗೆ ಹೊಸ ಅನುಭವ ನೀಡಿದೆ. ಶಿಬಿರಾರ್ಥಿಗಳು ಪ್ರತಿಯೊಂದು ವಿಚಾರದಲ್ಲೂ ತೊಡಗಿಸಿಕೊಂಡ ರೀತಿ ಅದ್ಭುತವಾಗಿತ್ತು. ಶಿಸ್ತು ಮತ್ತು ಸಮಯ ಪಾಲನೆಗೆ ನೀಡಿದ ಮಹತ್ವ ಶಿಬಿರಾರ್ಥಿಗಳ ಬದುಕಿನುದ್ದಕ್ಕೂ ಇರುವಂತಾಗಲಿ’ ಎಂದು ಹಾರೈಸಿದರು.
ಶಿಬಿರ ನಿರ್ವಹಣಾ ಸಮಿತಿ ಅಧ್ಯಕ್ಷ ಅಭಿಜಿತ್ ಜೈನ್ ಮಾತನಾಡಿ, ‘ಶಿಬಿರದ ಉದ್ದಕ್ಕೂ ನಾರಾವಿ ಪರಿಸರದ ಜನ ಉತ್ತಮ ಸ್ಪಂದನೆ ನೀಡಿದ್ದಾರೆ. ಶಿಬಿರಾರ್ಥಿಗಳು ಕೇವಲ ಶಾಲೆಯಲ್ಲಿ ಮಾತ್ರವಲ್ಲದೆ ನಾರಾವಿ ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಗ್ರಾಮ ಪಂಚಾಯಿತಿ ಸಹಕಾರದಲ್ಲಿ ಮಾಡಿರುವುದು ಶ್ಲಾಘನೀಯ ಕಾರ್ಯ’ ಎಂದರು.
ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ ಅಧ್ಯಕ್ಷತೆ ವಹಿಸಿದ್ದರು.
ನಾರಾವಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಮಿತ್ರಾ, ಬಿರ್ವ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಪೂಜಾರಿ ಡೊಂಕುಬೆಟ್ಟು, ನಾರಾವಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ರಾಜೇಂದ್ರ ಕುಮಾರ್, ಪ್ರೇಮಾ ಟೀಚರ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುರೇಶ್ ಪೂಜಾರಿ, ಎನ್.ಎಸ್.ಎಸ್. ಘಟಕದ ನಾಯಕ ಮಹಮ್ಮದ್ ಜುನೈದ್, ನಾಯಕಿ ಸಂಧ್ಯಾ ಇದ್ದರು.
7 ದಿನಗಳ ಕಾಲ ನಡೆದ ಶಿಬಿರದಲ್ಲಿ ಹಾವುಗಳು-ನಾವುಗಳು-ಪರಿಸರ, ಜೀವನದಲ್ಲಿ ಸೃಜನಾತ್ಮಕ ದೃಷ್ಟಿಕೋಣ, ಅರಿವು, ರಂಗಕಲೆ ಮತ್ತು ಶಿಕ್ಷಣ, ಕರಕುಶಲಕಲೆ ಮತ್ತು ಶಿಕ್ಷಣ ಹಾಗೂ ಮನೆಯಂಗಳದಲ್ಲಿ ಕೃಷಿ ಮಾಹಿತಿ ಕಾರ್ಯಕ್ರಮ ಮುಂತಾದ ವಿಚಾರಗಳಲ್ಲಿ ಸ್ನೇಕ್ ಕಿರಣ್, ಬಸಪ್ಪ ಹಲಗೇರ, ಅಶ್ವಿತಾ ಆರ್ ಹೆಗ್ಡೆ, ಸಮೀಕ್ಷಾ ಶಿರ್ಲಾಲು, ಯಶವಂತ ಬೆಳ್ತಂಗಡಿ, ವಿಶ್ವರಕ್ಷಾ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಉಪಯುಕ್ತ ಮಾಹಿತಿ ನೀಡಿದರು. ಬಜಗೋಳಿ ಏಕದಂತ ಡೆಂಟಲ್ ಕ್ಲಿನಿಕ್ ಡಾ. ಮುರಳಿ ಪ್ರಸಾದ್ ಶಿಬಿರಾರ್ಥಿಗಳಿಗೆ ಉಚಿತ ದಂತ ತಪಾಸಣೆ ನಡೆಸಿದರು.
ಕಾಲೇಜಿನ ಗಣಕವಿಜ್ಞಾನ ವಿಭಾಗದ ಉಪನ್ಯಾಸಕಿ ಶುಭಲಕ್ಷ್ಮಿ ಸ್ವಾಗತಿಸಿದರು. ಸಹ ಶಿಬಿರಾಧಿಕಾರಿಗಳಾದ ಸುಷ್ಮಾ ವರದಿಯನ್ನು, ಸೌಜನ್ಯ ವಿವಿಧ ವಿಭಾಗದಲ್ಲಿ ವಿಜೇತ ಶಿಬಿರಾರ್ಥಿಗಳ ಪಟ್ಟಿ ವಾಚಿಸಿದರು. ಇತಿಹಾಸ ವಿಭಾಗದ ಉಪನ್ಯಾಸಕ ಹರೀಶ್ ಪೂಜಾರಿ ಹಾಗೂ ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಅನನ್ಯ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾಧಿಕಾರಿ ಗಣೇಶ್ ಬಿ.ಶಿರ್ಲಾಲು ವಂದಿಸಿದರು.