ಉಜಿರೆ: ಶ್ರೀ ಧಮರ್ಸ್ಥಳ ಮಂಜುನಾಥೇಶ್ವರ ಬಿ.ಎಡ್. ಹಾಗೂ ಡಿ.ಇಡ್. ಕಾಲೇಜು ಜಂಟಿಯಾಗಿ 2025 ಶೈಕ್ಷಣಿಕ ವರ್ಷದ ಪೌರತ್ವ ತರಬೇತಿ ಶಿಬಿರವನ್ನು ರತ್ನಮಾನಸ ವಿದ್ಯಾರ್ಥಿ ನಿಲಯ ಉಜಿರೆಯಲ್ಲಿ ಆಯೋಜಿಸಿದ್ದು, ಈ ಶಿಬಿರವನ್ನು ಉದ್ಘಾಟಿಸಿದ ಶ್ರೀ ಜಗದೀಶ್ ಪ್ರಸಾದ್, ಸಿವಿಲ್ ಇಂಜಿನಿಯರ್ ಇವರು ಮಾತನಾಡಿ ಮನುಷ್ಯನು ಬೇರೆ ಬೇರೆ ಸ್ಥರಗಳಲ್ಲಿ ತರಬೇತಿ ಪಡೆಯುತ್ತಾನೆ. ಇಂತಹ ಪೌರತ್ವ ತರಬೇತಿಗಳು ಮಾನವನ ಜೀವನ ರೂಪಿಸಲು ಸಹಕಾರಿಯಾಗುತ್ತವೆ. ಸಾವಿರ ವಿದ್ಯಾರ್ಥಿಗಳ ಜೀವನ ರೂಪಿಸುವ ಶಕ್ತಿ ನಿಮ್ಮಂತಹ ಶಿಕ್ಷಕರಲ್ಲಿದೆ. ಮಕ್ಕಳ ತಪ್ಪುಗಳನ್ನು ತಿದ್ದಿ ಕಷ್ಟಗಳನ್ನು ಎದುರಿಸಲು ನಗುಮೊಗದಿ ತಿಳಿಹೇಳುವುದು ಕೂಡ ಒಂದು ಕಲೆ ಎಂದು ಹೇಳಿದರು.
ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ ಪ್ರೊ. ಶಶಿಶೇಖರ ಎನ್ ಕಾಕತ್ಕರ್, ಶೈಕ್ಷಣಿಕ ಸಂಯೋಜಕರು, ಶ್ರೀ ಧ. ಮಂ. ಶಿಕ್ಷಣ ಸಂಸ್ಥೆ ಉಜಿರೆ ಇವರು ಮಾತನಾಡುತ್ತಾ ಭಾವೈಕ್ಯತೆ, ಸಹಬಾಳ್ವೆ, ಕರ್ತವ್ಯ ನಿರ್ವಹಣೆ, ಮಾತುಗಾರಿಕೆ ಮತ್ತು ಹೊಂದಾಣಿಕೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಹಾಗೂ ಎಲ್ಲವ ಕಲಿತ ಮಾನವನನ್ನು, ಮಾನವೀಯ ಮೌಲ್ಯಗಳೊಂದಿಗೆ ಬಾಳಲು ಕಲಿಸುವ ಶಿಬಿರಗಳು ಎಲ್ಲರಿಗೂ ಸ್ಫೂರ್ತಿ. ಶಿಕ್ಷಕ ವೃತ್ತಿ ಎನ್ನುವುದು ಪವಿತ್ರವಾದದ್ದು. ಬೋಧನೆ, ಪ್ರೇರಣೆ, ಮೌಲ್ಯಗಳು ಹಾಗೂ ಮಾರ್ಗದರ್ಶನವನ್ನು ನೀಡುವುದು ಶಿಕ್ಷಕನಾದವನ ಆದ್ಯ ಕರ್ತವ್ಯ ಎಂದು ಹೇಳಿದರು.
ಶ್ರೀ ಧ. ಮಂ. ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಸಂತೋಷ್ ಆಲ್ಬರ್ಟ್ ಸಲ್ಡಾನ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿ ಮಂಜು ಆರ್. ರತ್ನಮಾನಸದ ನಿಲಯಪಾಲಕರಾದ ಯತೀಶ್ ಕೆ. ಬಳಂಜ ಅವರು ಶಿಬಿರಕ್ಕೆ ಶುಭ ಹಾರೈಸಿದರು. ಬಿ.ಎಡ್. ಕಾಲೇಜಿನ ವಿದ್ಯಾರ್ಥಿ ನಾಯಕಿ ವೀಕ್ಷಾದೀಪ, ಡಿ.ಎಡ್. ಕಾಲೇಜಿನ ವಿದ್ಯಾರ್ಥಿ ನಾಯಕಿ ರಂಝಿಯಾ ಬಾನು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದ್ವಿತೀಯ ಬಿ.ಇಡಿ. ಪ್ರಶಿಕ್ಷಣಾರ್ಥಿ ವೀಕ್ಷಾದೀಪ ಸ್ವಾಗತಿಸಿ, ಪ್ರಥಮ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಾದ ಸಾಯಿಧೃತಿ ವಂದಿಸಿ, ವರ್ಷಾ ಅತಿಥಿ ಪರಿಚಯಿಸಿದರು. ದ್ವಿತೀಯ ಬಿ.ಇಡಿ. ಪ್ರಶಿಕ್ಷಣಾರ್ಥಿ ರಶ್ಮಿ ಕೆ.ಪಿ ಕಾರ್ಯಕ್ರಮವನ್ನು ನಿರೂಪಿಸಿದರು.