ಸಿರಿ ಕೇಂದ್ರ ಕಛೇರಿಗೆ ಡಿ. ವೀರೇಂದ್ರ ಹೆಗ್ಗಡೆ ದಂಪತಿ ಭೇಟಿ

0

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಸಂಸ್ಥಾಪಕರು ಹಾಗೂ ಸಿರಿ ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಸಿರಿ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರಾಗಿರುವ ಹೇಮಾವತಿ ವೀ. ಹೆಗ್ಗಡೆಯವರು ಸೆ. 25ರಂದು ಬೆಳ್ತಂಗಡಿಯಲ್ಲಿ ಕಾರ್ಯಾಚರಿಸುತ್ತಿರುವ ಸಿರಿ ಕೇಂದ್ರ ಕಛೇರಿಗೆ ಭೇಟಿ ನೀಡಿದರು.

ಸಿರಿ ಸಂಸ್ಥೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಹೆಗ್ಗಡೆ ದಂಪತಿಗಳು, ಇಲ್ಲಿ ನಡೆಯುತ್ತಿರುವ ವಿವಿಧ ಉತ್ಪನ್ನಗಳ ಉತ್ಪಾದನಾ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.

ನವರಾತ್ರಿ ಹಬ್ಬದ ಈ ವಿಶೇಷ ಸಂದರ್ಭದಲ್ಲಿ ಸಿಬ್ಬಂದಿಗಳನ್ನುದ್ದೇಶಿಸಿ ಮಾತನಾಡಿದ ಅವರು ನವರಾತ್ರಿಯು ಶಕ್ತಿ, ಬುದ್ಧಿವಂತಿಕೆ, ಧೈರ್ಯ, ಭಕ್ತಿ ಮತ್ತು ರಕ್ಷಣೆಯಂತಹ ವಿಭಿನ್ನ ಗುಣಗಳ ಸ್ವರೂಪವಾಗಿರುವ ನವದುರ್ಗೆಯರ ಪೂಜೆಗೆ ಸಮರ್ಪಿತವಾಗಿದೆ. ಸಿರಿಯಲ್ಲಿ ದುಡಿಯುವ ಮಹಿಳೆಯರು ಕೂಡಾ ಸಿರಿಯ ಶಕ್ತಿ ಸ್ವರೂಪಿಣಿಯರಾಗಿದ್ದು, ಎಲ್ಲರೂ ಶ್ರದ್ಧೆ, ಪ್ರಾಮಾಣಿಕತೆಯಿಂದ ದುಡಿದು ಸಿರಿ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಿ, ಮುನ್ನಡೆಸುವ ಮೂಲಕ ಇನ್ನೂ ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರಿಗೆ ಉದ್ಯೋಗ ದೊರೆತು ನೆಮ್ಮದಿಯ ಜೀವನ ನಡೆಸುವಂತಾಗಲಿ. ಎಲ್ಲರಿಗೂ ನವದುರ್ಗೆಯರ ಆಶೀರ್ವಾದವಿರಲಿ ಎಂದು ಶುಭ ಹಾರೈಸಿದರು.

ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೆಶಕರಾದ ಕೆ.ಎನ್ ಜನಾರ್ಧನರವರು ಹೆಗ್ಗಡೆ ದಂಪತಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಎಲ್ಲಾ ಸಿರಿ ಸಿಬ್ಬಂದಿಗಳ ಪರವಾಗಿ ಗೌರವಾರ್ಪಣೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಿರಿ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರಾದ ರಾಜೇಶ್ ಪೈ, ಸಿರಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಮಹಾವೀರ ಅಜ್ರಿ, ಸಿರಿ ಸಂಸ್ಥೆಯ ಆಡಳಿತ ಮತ್ತು ಲೆಕ್ಕಪತ್ರ ವಿಭಾಗದ ಮುಖ್ಯ ನಿರ್ವಹಣಾಧಿಕಾರಿ ಪ್ರಸನ್ನ, ಮಾರುಕಟ್ಟೆ ವಿಭಾಗ ಮತ್ತು ವಿವಿಧ ಉತ್ಪಾದನಾ ವಿಭಾಗಗಳ ಮೇಲಾಧಿಕಾರಿಗಳು, ಮೇಲ್ವಿಚಾರಕರು, ಗೋದಾಮು ಪ್ರಬಂಧಕರು ಹಾಗೂ ಸಿರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here