
ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಇವರ ಸಹಯೋಗದೊಂದಿಗೆ ಎನ್ ಎಸ್ ಎಸ್ ಸ್ವಯಂ ಸೇವಕರಿಗೆ ಮುಂಡತ್ತೋಡಿ ಶಾರದಾ ಇವರ ಗದ್ದೆಯಲ್ಲಿ ಕೆಸರಡೊಂಜಿ ದಿನ ಕ್ರೀಡಾಕೂಟ ನಡೆಯಿತು.
ಕ್ರೀಡಾಕೂಟವನ್ನು ರೋಟರಿ ಕ್ಲಬ್ ಬೆಳ್ತಂಗಡಿ ಇದರ ಕಾರ್ಯದರ್ಶಿ ಡಾ|ದಯಾಕರ್ ಎಮ್. ಎಮ್. ಗದ್ದೆಗೆ ಪೂಜೆ ಮಾಡಿ ಹಾಲು ಹಾಕಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು “ತುಳುನಾಡಿನ ಸಾಂಸ್ಕೃತಿಕ ಪರಂಪರೆಯಲ್ಲಿ ಗದ್ದೆಯ ಕೆಲಸಕ್ಕೆ ಮಹತ್ವ ಇದೆ. ಪಾಡ್ದನ, ಸಂಧಿಗಳು ಹಾಡುತ್ತ ನಮ್ಮ ಹಿರಿಯರು ತುಳು ಸಂಸ್ಕೃತಿಯನ್ನು ಬೆಳೆಸಿದ್ದಾರೆ. ಕೆಸರು ಚರ್ಮ ರೋಗ ನಿಯಂತ್ರಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ “ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ “ನಮ್ಮ ತುಳುನಾಡ ಸಂಸ್ಕೃತಿಯನ್ನು ಉಳಿಸುವಲ್ಲಿ ಕೆಸರುಡೊಂಜಿ ದಿನ ಕ್ರೀಡಾಕೂಟವು ಬಹಳ ಮಹತ್ತರವಾದುದು. ಬದಲಾಗುತ್ತಿರುವ ಯುವ ಜನಾಂಗಕ್ಕೆಇಂತಹ ಕ್ರೀಡಾಕೂಟಗಳ ಮೂಲಕ ನಮ್ಮ ಸಂಸ್ಕೃತಿಯ ಅರಿವು ಮೂಡಿಸಲು ಸಾಧ್ಯ”ಎಂದು ಹೇಳಿದರು. ಗದ್ದೆಯ ಮಾಲಕಿ ಶಾರದಾ ಇವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಉಪಪ್ರಾಂಶುಪಾಲ ಡಾ.ರಾಜೇಶ್ ಬಿ, ಗ್ರಾಮ ಪಂಚಾಯತ್ ಸದಸ್ಯ ದೇವರಾಜ್ ಪೂಜಾರಿ, ಕನ್ನಡ ಉಪನ್ಯಾಸಕ ಡಾ.ಮಹಾವೀರ್ ಜೈನ್, ಯೋಜನಾಧಿಕಾರಿ ವಿಶ್ವನಾಥ್ ಎಸ್. ಸಹ ಯೋಜನಾಧಿಕಾರಿ ಶೋಭಾ ಪಿ. ಉಪಸ್ಥಿತರಿದ್ದರು.
ಸ್ವಯಂ ಸೇವಕರಿಗೆ ಕೆಸರು ಗದ್ದೆ ಓಟ, ಹಾಳೆ ಓಟ, ವಾಲಿಬಾಲ್, ಥ್ರೋ ಬಾಲ್, ಕಂಬ ಸುತ್ತುವ ಓಟ,ಹಗ್ಗ ಜಗ್ಗಾಟ,ನಿಧಿ ಶೋಧ ಮುಂತಾದ ಸ್ಪರ್ಧೆಗಳನ್ನು ನಡೆಸಲಾಯಿತು. ನಾಯಕಿ ರಾಶಿಕ ಕಾರ್ಯಕ್ರಮ ನಿರೂಪಿಸಿ, ಧನ್ಯ ಸ್ವಾಗತಿಸಿ,ಮೇಧಾ ಮೇಧಾ ವಂದಿಸಿದರು.