
ನಿಡ್ಲೆ: ಸರ್ಕಾರಿ ಪ್ರೌಢ ಶಾಲೆಯಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ಥ್ರೋಬಾಲ್ ಪಂದ್ಯಾಟ ಆ.26ರಂದು ಯಶಸ್ವಿಯಾಗಿ ಜರುಗಿತು.
ಪಂದ್ಯಾಟದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ತಾರಕೇಸರಿ ಅವರು ನೆರವೇರಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ಯಾಮಲಾ ಅವರು ವಹಿಸಿದ್ದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಜಯ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ಶಾಲಾ ಎಸ್. ಡಿ. ಎಂ. ಸಿ ಕಾರ್ಯಾಧ್ಯಕ್ಷ
ಲಕ್ಷ್ಮಣ ಗೌಡ , ನಿವೃತ್ತ ಮುಖ್ಯ ಶಿಕ್ಷಕ ರಾಜಗುರು ಹೆಬ್ಬಾರ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕೃಷ್ಣಾನಂದ, ಸುಭಾಷ್, ಕ್ಲಸ್ಟರ್ ನೋಡಲ್ ಅಧಿಕಾರಿ ವಿಠಲ ನಾಯ್ಕ್, ಮುಖ್ಯ ಶಿಕ್ಷಕ ಶಾಂತ ಶೆಟ್ಟಿ ಉಪಸ್ಥಿತರಿದ್ದರು.
ಪಂದ್ಯಾಟಕ್ಕೆ ಎಲ್ಲ ಪೋಷಕರ, ಊರಿನವರ ಹಳೆ ವಿದ್ಯಾರ್ಥಿಗಳ ಶಿಕ್ಷಕರ ಮತ್ತು ಶಾಲಾ ವಿದ್ಯಾರ್ಥಿಗಳ ಸಹಕಾರ ಅತ್ಯುತ್ತಮವಾಗಿತ್ತು. ಬಾಲಕರ ವಿಭಾಗದಲ್ಲಿ ಸರ್ಕಾರಿ ಪ್ರೌಢಶಾಲೆ ಕರಾಯ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಯಿತು. ಸರ್ಕಾರಿ ಪ್ರೌಢಶಾಲೆ ಬೈಪಾಡಿ ದ್ವಿತೀಯ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಶ್ರೀ ಭಾರತಿ ಪ್ರೌಢಶಾಲೆ ಉರುವಾಲು ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರೆ, ಸರ್ಕಾರಿ ಪ್ರೌಢಶಾಲೆ ಕೊಯ್ಯೂರು ದ್ವಿತೀಯ ಸ್ಥಾನ ಪಡೆಯಿತು.
ತೀರ್ಪುಗಾರರಾಗಿ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರು ಸಹಕರಿಸಿದರು. ಶಿಕ್ಷಕ ಶರತ್ ಕುಮಾರ್ ತುಳುಪುಳೆ ಅವರು ಕಾರ್ಯಕ್ರಮ ನಿರೂಪಿಸಿದರು. ಶೋಲಿ ವಿ.ಜೆ. ವಂದಿಸಿದರು.