ಮೂಡುಬಿದಿರೆ: ಎಕ್ಸಲೆಂಟ್ ನಲ್ಲಿ ಮಾದಕ ವ್ಯಸನ ವಿರೋಧಿ ಕಾರ್ಯಕ್ರಮ

0

ಬೆಳ್ತಂಗಡಿ: ಎಕ್ಸಲೆಂಟ್ ಮೂಡುಬಿದಿರೆಯ ರಾಷ್ಟ್ರೀಯ ಸೇವಾ ಯೋಜನೆ, ಕಾಲೇಜಿನ ಮಾದ್ಯ ವ್ಯಸನ ವಿರೋಧಿ ಸಮಿತಿ ಹಾಗೂ ಮೂಡುಬಿದಿರೆ ಆರಕ್ಷಕ ಠಾಣೆಯ ಸಹಯೋಗದೊಂದಿಗೆ ಮಾದಕ ವ್ಯಸನದಿಂದ ಆಗುವ ದುಷ್ಪರಿಣಾಮ ಹಾಗೂ ಕಾನೂನು ಅರಿವು ನೀಡುವ ಮಾದಕ ವ್ಯಸನ ವಿರೋಧಿ ಕಾರ್ಯಕ್ರಮ ಎಕ್ಸಲೆಂಟ್‌ ಮೂಡುಬಿದಿರೆಯ ರಾಜಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಕಾನೂನಿನ ಅರಿವು ನೀಡಿದ ಮೂಡುಬಿದಿರೆ ಆರಕ್ಷಕ ಠಾಣೆಯ ಪಿಎಸ್‌ಐ ಪ್ರತಿಭಾ ಅವರು ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ ಭಾರತದಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕಾಗಿ ಜಾರಿಗೆ ತರಲಾದ ಒಂದು ಕಾಯ್ದೆ. ಈ ಕಾಯ್ದೆಯು ಮಾದಕ ವಸ್ತುಗಳ ಉತ್ಪಾದನೆ, ತಯಾರಿಕೆ, ಸಂಗ್ರಹಣೆ, ಸಾಗಣೆ, ಮಾರಾಟ, ಖರೀದಿ ಮತ್ತು ಬಳಕೆಯನ್ನು ನಿಷೇಧಿಸುತ್ತದೆ. ಮದ್ಯ, ಶುಗರ್, ವೈದ್ಯರ ಅನುಮತಿ ಇಲ್ಲದ ರಾಸಾಯನಿಕ ಔಷಧಗಳು ಇತ್ಯಾದಿ ಸೇವನೆಯು ದೇಶದಾದ್ಯಂತ ಯುವಜನರಲ್ಲಿ ಬೆಳೆಯುವ ಭೀತಿಯಾಗಿದೆ. ಇದರಿಂದ ಯುವಶಕ್ತಿ ತನ್ನ ಬಲವನ್ನು ಕಳಕೊಂಡಿದೆ. ಹದಿಹರೆಯದವರು ಮಾತ್ರವಲ್ಲ ಕೆಲವು ಸಂದರ್ಭಗಳಲ್ಲಿ ಹದಿಹರೆಯದ ಪೂರ್ವದ ಮಕ್ಕಳು ಇದಕ್ಕೆ ಬಲಿಯಾಗುತ್ತಾರೆ. ದೇಶದಲ್ಲಿ ಬಹಳಷ್ಟು ಜನರು ಸಹವಾಸ ದೋಷದಿಂದ, ಅನ್ಯ ಕಾರಣಗಳಿಂದ ಮಾದಕ ದ್ರವ್ಯ ಉಪಯೋಗಿಸುತ್ತಾರೆ. ಇದು ದೇಹದ ಹಾಗೂ ಮನಸ್ಸಿನ ಮೇಲೆ ಪರಿಣಾಮ ಬೀರಿ ಆರೋಗ್ಯವನ್ನು ಹಾಳು ಮಾಡುತ್ತದೆ. ಒಮ್ಮೆ ಅಪರಾಧ ಲೋಕದಲ್ಲಿ ಗುರುತಿಸಿ ಆದರೆ ನಿಮ್ಮ ಬಂಗಾರದಂತಹ ಭವಿಷ್ಯ, ಮನೆಯವರ ಸಾಮಾಜಿಕ ಸ್ಥಾಮಮಾನ ಹಾಳಾಗುತ್ತದೆ ಎಂದರು. ಬಳಿಕ ಸೈಬರ್ ಅಪರಾಧಗಳ ಬಗ್ಗೆ, ಸಾಮಾಜಿಕ ಮಾಧ್ಯಮಗಳಿಂದ ಆಗುವ ತೊಂದರೆಗಳು, ವಿದ್ಯಾರ್ಥಿಗಳು ವಹಿಸಬೇಕಾದ ಎಚ್ಚರಿಕೆಗಳ ಕುರಿತು ವಿವರಣಾತ್ಮಕ ಮಾಹಿತಿ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುವ ಮಾದಕ ದ್ರವ್ಯದ ಜಾಲವನ್ನು ಮಟ್ಟಹಾಕುವ ನಿಟ್ಟಿನಲ್ಲಿ ಪೋಲೀಸ್ ಇಲಾಖೆಯ ಪ್ರಯತ್ನ ಶ್ಲಾಘನೀಯ. ಪ್ರತಿಯೊಂದು ಮಗುವಿನ ಬೆಳವಣಿಗೆ ಆರೋಗ್ಯದಾಯಕವಾಗಿರಬೇಕು. ಎತ್ತರಕ್ಕೆ ಏರಬೇಕು ಎಂಬುವುದು ಪ್ರತೀ ಹೆತ್ತವರ ಕನಸು. ಆ ಕನಸನ್ನು ಇಂತಹ ಮಾದಕ ದ್ರವ್ಯಗಳು ಪುಡಿಮಾಡಕೂಡದು. ನಾವು ಒಳ್ಳೆಯ ಅಭ್ಯಾಸಗಳಿಗೆ ವ್ಯಸನಿಗಳೋಣ. ಮಾನವೀಯ ಸಂಬಂಧ, ಶ್ರೇಷ್ಠ ಅಭ್ಯಾಸಗಳು, ದೇಶದ ಕುರಿತಾಗಿ ಗೌರವ ಬೆಳೆಸಿಕೊಳ್ಳಿ. ಸತ್ಯದ ದಾರಿಯಲ್ಲಿ ಮುಂದುವರಿಯಿರಿ. ಒಳ್ಳೆಯದನ್ನು ಬೆಂಬಲಿಸುತ್ತಾ ಇಂತಹ ಒಳ್ಳೆಯ ಕಾರ್ಯಕ್ರಮ ನಡೆಸುವರೇ ಎಕ್ಸಲೆಂಟ್ ಸಂಸ್ಥೆಗೆ ಅವಕಾಶ ಸಿಕ್ಕಿದ್ದಕ್ಕೆ ಸಂತೋಷ ಪಡುತ್ತಾ, ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆದು ಮಾದಕ ವ್ಯಸನ ಮುಕ್ತ ಶ್ರೇಷ್ಠ ಭಾರತ ನಿರ್ಮಾಣವಾಗಲಿ ಎಂದರು. ವಿದ್ಯಾರ್ಥಿ ನಿತಿನ್ ಮಾದಕ ವ್ಯಸನ ವಿರೋಧಿ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿಗಳಾದ ರಶ್ಮಿತಾ ಶೆಟ್ಟಿ ಹಾಗೂ ಸಂಜನ್ ಕೋಟೆ ಮಾದಕ ವ್ಯಸನದ ಕುರಿತು ಮಾತಾನಾಡಿದರು.

ವಿದ್ಯಾರ್ಥಿಗಳಿಂದ ಮಾದಕ ವ್ಯಸನ ಮುಕ್ತ ಸಮಾಜ ಎಂಬ ಪ್ರಹಸನ ನಡೆಯಿತು. ವೇದಿಕೆಯಲ್ಲಿ ಕಾಲೇಜಿನ ಮಾದಕ ವ್ಯಸನ ವಿರೋಧಿ ಸಮಿತಿಯ ಮುಖ್ಯಸ್ಥ ಪ್ರದೀಪ್ ಕೆ.ಪಿ. ಉಪಸ್ಥಿತರಿದ್ದರು. ಕಾರ್ತಿಕ್ ಹೆಚ್. ನಿರೂಪಿಸಿ, ಕಾರ್ತಿಕ್ ಅಗಡಿ ವಂದಿಸಿದರು.

LEAVE A REPLY

Please enter your comment!
Please enter your name here