ಸಿಯೋನ್ ಆಶ್ರಮದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಆಚರಣೆ

0

ಗಂಡಿಬಾಗಿಲು: ಸಿಯೋನ್ ಆಶ್ರಮ ಟ್ರಸ್ಟ್ 79ನೇ ಸ್ವಾತಂತ್ರ್ಯೋತ್ಸವವನ್ನು ಆ. 15ರಂದು ಆಚರಿಸಲಾಯಿತು. ಸಿಯೋನ್ ಆಶ್ರಮದ ಟ್ರಸ್ಟೀ ಮೇರಿ ಯು.ಪಿ. ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.

ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹುತಾತ್ಮರಿಗಾಗಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟೀ ಡಾ. ಯು. ಸಿ. ಪೌಲೋಸ್ ಸ್ವಾತಂತ್ರ್ಯೋತ್ಸವ ಆಚರಣೆಯ ಮಹತ್ವದ ಬಗ್ಗೆ ವಿವರಿಸಿದರು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ – ಬಲಿದಾನವನ್ನು ಸ್ಮರಿಸಬೇಕು. ಆಹಿಂಸೆಯ ತತ್ವವನ್ನು ಮುನ್ನಡೆಸಿದ ಮಹಾತ್ಮಾ ಗಾಂಧೀಜಿಯವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಂಡು ದೇಶಪ್ರೇಮ ಮೆರೆಯಬೇಕು. ಎಲ್ಲಾ ಧರ್ಮಿಯರ ಆಚಾರ-ವಿಚಾರಗಳಿಗೆ ಸಮಾನ ಗೌರವವಿದೆ. ದೇಶ ನನ್ನದೆನ್ನುವ ಭಾವನೆ ಜಾಗೃತವಾಗಬೇಕು. ಪರಸ್ಪರ ಪ್ರೀತಿ, ನಂಬಿಕೆಯಿಂದ ಒಗ್ಗಟ್ಟಿನಿಂದ ಬಾಳಬೇಕು ಎಂದರು.

ಸಂಸ್ಥೆಯ ವೈದ್ಯಾಧಿಕಾರಿ ಡಾ.ಶಿವಾನಂದ ಸ್ವಾಮಿ ಬ್ರಿಟೀಷರಿಂದ ನಮಗೆ ಸ್ವಾತಂತ್ರ್ಯ ದೊರೆತ ಪರಿಯನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಸಮಾಜದಲ್ಲಿ ಪ್ರಸ್ತುತ ನಡೆಯುತ್ತಿರುವ ಘಟನಾವಳಿಗಳನ್ನು ತಿಳಿಸುತ್ತಾ, ಇನ್ನು ಮುಂದೆ ನಾವು ಯಾವ ರೀತಿ ಐಕ್ಯತೆಯಿಂದ ಬಾಳಬೇಕು ಎಂಬುದರ ಬಗ್ಗೆ ಮನವರಿಕೆ ಮಾಡಿದರು. ನಾವೆಲ್ಲರೂ ಜವಾಬ್ದಾರಿಯುತ ನಾಗರಿಕರಾಗಿ, ಭಾರತದ ಅಭಿವೃದ್ಧಿಗಾಗಿ ಕರ್ತವ್ಯ ನಿರ್ವಹಿಸೋಣ ಎಂದರು.

ಸಂಸ್ಥೆಯ ಹಿತೈಷಿ ಜೋಸೆಫ್ ಪಿ.ಪಿ., ಸಂಸ್ಥೆಯ ಲೆಕ್ಕಾಧಿಕಾರಿ ಸೌಮ್ಯ ಯು.ಪಿ. ಸಿಯೋನ್ ಆಶ್ರಮದ ಎಲ್ಲಾ ಟ್ರಸ್ಟೀ ಸದಸ್ಯರು, ಆಡಳಿತ ಮಂಡಳಿ ಟ್ರಸ್ಟೀ ಕುಟುಂಬಸ್ಥರು, ಸಿಬ್ಬಂದಿವರ್ಗದವರು ಹಾಗೂ ಆಶ್ರಮನಿವಾಸಿಗಳು ಉಪಸ್ಥಿತರಿದ್ದರು. ದಿನವತಿಯವರು ಕಾರ್ಯಕ್ರಮ ನಿರೂಪಿಸಿದರು. ಆಶ್ರಮ ನಿವಾಸಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.

LEAVE A REPLY

Please enter your comment!
Please enter your name here