
ಮಚ್ಚಿನ: ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಬಳ್ಳಮಂಜದ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 31ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಆ.16ರಂದು ನಡೆಯಲಿದೆ.
ಪೂರ್ವಾಹ್ನ 9.30 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಅರ್ಚಕ ಅನಂತಕೃಷ್ಣ ಭಟ್ ಕುಕ್ಕಿಲ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ನಾರಾಯಣ ಪೂಜಾರಿ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಪುಟಾಣಿ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ, ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದ್ದು, ವಿಶೇಷ ಆಕರ್ಷಣೆಯಾಗಿ ಬಳ್ಳಮಂಜ ಪೇಟೆಯಲ್ಲಿ ಅಟ್ಟಿ ಗೋವಿಂದ, ಶ್ರೀ ಕೃಷ್ಣ ಲೀಲೋತ್ಸವ ಹಾಗೂ ಭವ್ಯ ಮೆರವಣಿಗೆಯೊಂದಿಗೆ ನೀರಾ ಓಕುಳಿಯಾಟ ನಡೆಯಲಿದೆ.
ಸಂಜೆ 5ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಕಾರ್ಯಕ್ರಮ ಹಾಗೂ ಮಚ್ಚಿನ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಾದ ಅಮೃತ ಕೆ., ಸಾಕೇತ್ ಡಿ. ಹಾಗೂ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯ ದಿಶಾಂತ್ ಅವರನ್ನು ಸನ್ಮಾನಿಸಲಾಗುವುದು.