
ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟಿಡೊಂಜಿ ದಿನವನ್ನು ಆಚರಿಸಲಾಯಿತು. ಶಾಲೆ ತುಳುನಾಡಿನ ವೈಭವವನ್ನು ಹೆಸರಿಸುವಂತೆ ಅಲಂಕಾರಗೊಳಿಸಲಾಗಿತ್ತು. ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ದಿವಾಕರ ಕೆ.( ದಿವಾ ಕೊಕ್ಕಡ ) ಆಗಮಿಸಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತದನಂತರ ಮಾತನಾಡಿದ ಅವರು ತುಳುನಾಡಿನ ನಾಡು ನುಡಿ ಸಂಸ್ಕೃತಿ ಆಚಾರ ವಿಚಾರ ಅದರ ಹಿಂದಿರುವ ವೈಜ್ಞಾನಿಕ ತತ್ವಗಳನ್ನು ಆಧಾರ ಸಹಿತ ವಿವರಿಸಿದರು. ಹಲವಾರು ತುಳು ಪದ್ಯಗಳನ್ನು ಹಾಡಿ ತುಳು ಜನಪದ ಹಾಡುಗಳನ್ನು ಹಾಡಿ ತುಳುನಾಡಿನ ಜನ ಜೀವನವನ್ನು ವಿವರಿಸಿದರು. ಶಾಲಾ ಸಂಚಾಲಕ ಆಟಿ ತಿಂಗಳ ತಿಂಡಿ ತಿನಿಸುಗಳ ಮಹತ್ವದ ಬಗೆಗೆ ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ. ಶಾಲೆಯಲ್ಲಿ ಆಟಿ ದಿನಾಚರಣೆಯ ಅಗತ್ಯತೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು.
ಶಾಲೆಯಲ್ಲಿ ಔಷಧೀಯ ಸಸ್ಯಗಳ ಪ್ರದರ್ಶನ, ಆಟಿ ತಿಂಗಳಲ್ಲಿ ಆಡುವಂತಹ ಆಟಗಳು,ತುಳು ಭಾಷೆಗಳ ಪುಸ್ತಕಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಬಿತ್ತಿ ಪತ್ರಿಕೆ ಸಂಘವು ಆಟಿಗೆ ಸಂಬಂಧಿಸಿದಂತಹ ಬಿತ್ತಿ ಪತ್ರಿಕೆಯ ತಯಾರಿಯ ಸ್ಪರ್ಧೆಯನ್ನು ಏರ್ಪಡಿಸಿದ್ದು ಅದರಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿಗಳು ತುಳು ಗಾದೆ ಒಗಟು ನೃತ್ಯ ಹಾಡು, ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿ ಎಲ್ಲರನ್ನೂ ಮನರಂಜಿಸಿದರು. ಶಾಲಾ ವಿದ್ಯಾರ್ಥಿಗಳಾದ ತನ್ಮಯ್ ಹಾಗೂ ಅಮೀತ್ ಅವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಹಾಗೂ ಶಿಕ್ಷಕೇತರ ವೃಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.