ಧರ್ಮಸ್ಥಳ: ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದಿನಿಂದ ಹಲವಾರು ಅಪರಾಧ ಕೃತ್ಯಗಳು ನಡೆದಿದ್ದು, ಅವುಗಳ ಮಾಹಿತಿ ನೀಡುತ್ತೇನೆಂದು ಪತ್ರ ಬರೆದು ತಲೆ ಬುರುಡೆ ತಂದಿದ್ದ ವ್ಯಕ್ತಿಯ ಪ್ರಕರಣದ ತನಿಖೆಯನ್ನು ಎಸ್ ಐಟಿಗೆ ವಹಿಸಿ ಸರ್ಕಾರ ಅದೇಶಿಸಿದೆ.
ಈ ಹಿಂದೆ ವಕೀಲರ ಮೂಲಕ ಪೊಲೀಸರನ್ನು ಸಂಪರ್ಕಿಸಿದ್ದ ವ್ಯಕ್ತಿ ಎಸ್ ಪಿ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಬೆಳ್ತಂಗಡಿ ನ್ಯಾಯಾಲಯಕ್ಕೆ ಮುಸುಕುಧಾರಿಯಾಗಿ ಹಾಜರಾದ ನಂತರ ಪ್ರಕರಣವನ್ನು ಎಸ್ ಐ ಟಿಗೆ ನೀಡಬೇಕೆಂಬ ಕೂಗು ಎದ್ದಿತ್ತು.
ಪ್ರಣವ್ ಮೊಹಾಂತಿ ತಂಡದಿಂದ ತನಿಖೆ: ಇದೀಗ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಡಾ.ಪ್ರಣವ್ ಮೊಹಾಂತಿ, ನೇಮಕಾತಿ ವಿಭಾಗದ ಉಪಪೊಲೀಸ್ ಮಹಾನಿರ್ದೇಶಕರಾದ ಎಂ ಎನ್ ಅನುಚೇತ್, ಸಿಎಆರ್ ಕೇಂದ್ರ ಸ್ಥಾನ ಬೆಂಗಳೂರು ಇದರ ಉಪ ಪೊಲೀಸ್ ಆಯುಕ್ತರಾದ ಸೌಮ್ಯಲತಾ, ಆಂತರಿಕ ಭದ್ರತಾ ವಿಭಾಗದ ಎಸ್ ಪಿ ಜಿತೇಂದ್ರ ಕುಮಾರ್ ದಯಾಮ ತಂಡದಿಂದ ತನಿಖೆ ನಡೆಯಲಿದೆ.