ಕೊಕ್ಕಡ: ಗ್ರಾಮ ವ್ಯಾಪ್ತಿಯ ಸೌತಡ್ಕದಲ್ಲಿ ಜು.17ರಂದು ಸಂಭವಿಸಿದ ಆನೆ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬಳಿಕ ಅರಣ್ಯ ಇಲಾಖೆ ಗಂಭೀರವಾಗಿ ಕ್ರಮ ಕೈಗೊಂಡಿದ್ದು, ಸ್ಥಳದಲ್ಲಿಯೇ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ನಿಯೋಜಿಸಿ 24ಗಂಟೆಯ ಪರಿವೀಕ್ಷಣೆಯ ಕಾರ್ಯ ನಡೆಸುತ್ತಿದೆ.
ಅರಣ್ಯದತ್ತ ತೆರಳಿದ ಆನೆಗಳ ನಡೆ-ನುಡಿಗಳನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು, ಅವುಗಳನ್ನು ಅರಣ್ಯದೊಳಗೆ ಹಿಮ್ಮೆಟ್ಟಿಸುವ ಜವಾಬ್ದಾರಿಯನ್ನೂ ಕೈಗೊಂಡಿದ್ದು, ಯಾವುದೇ ಮತ್ತೊಂದು ದುರ್ಘಟನೆ ನಡೆಯದಂತೆ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಈ ಮಧ್ಯೆ, ಕೆಲವು ಅಸಾಮಾಜಿಕ ಶಕ್ತಿಗಳು ಸೌತಡ್ಕ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಳ್ಳು ಸುದ್ದಿ ಹರಡಲು ಮುಂದಾಗಿದ್ದು, ಸಾರ್ವಜನಿಕರಲ್ಲಿ ಗೊಂದಲ ಹಾಗೂ ಭಯವನ್ನು ಮೂಡಿಸುತ್ತಿರುವುದಾಗಿ ಅರಣ್ಯ ಇಲಾಖೆ ಹೇಳಿದೆ.
ಸಾರ್ವಜನಿಕರು ಯಾವುದೇ ಕಾರಣಕ್ಕೂ ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ, ಅಧಿಕೃತ ಮಾಹಿತಿಗಾಗಿ ಅರಣ್ಯ ಇಲಾಖೆಯು ರಚಿಸಿರುವ ವಾಟ್ಸಾಪ್ ಗ್ರೂಪಿಗೆ ಆಧಾರ ವಹಿಸಬೇಕೆಂದು ಮನವಿ ಮಾಡಿದೆ. ಈ ಗ್ರೂಪ್ ಮೂಲಕ ಇಲಾಖೆ ಅಧಿಕಾರಿಗಳು ನಿತ್ಯದ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಈ ತುರ್ತು ಕ್ರಮಗಳನ್ನು ಸಾರ್ವಜನಿಕರು ಸಹಕರಿಸುವ ಮೂಲಕ ಪರಿಸ್ಥಿತಿಯನ್ನು ಶಾಂತವಾಗಿ ನಿರ್ವಹಿಸಲು ಸಹಕಾರ ನೀಡಬೇಕೆಂದು ಇಲಾಖೆಯ ಹಿರಿಯ ಅಧಿಕಾರಿಗಳು ಮಾಧ್ಯಮಗಳ ಮೂಲಕ ವಿನಂತಿಸಿದ್ದಾರೆ.