ಬೆಳ್ತಂಗಡಿ: ನರ್ಸಿಂಗ್ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ವಿದ್ಯಾಭ್ಯಾಸ ಹಾಗೂ ಉದ್ಯೋಗಾವಕಾಶವನ್ನು ಒದಗಿಸುತ್ತಿರುವ ಹಳೇಕೋಟೆಯಲ್ಲಿರುವ ಕಲ್ಪತರು ಸ್ಕೂಲ್ ಆಫ್ ನರ್ಸಿಂಗ್ ಸ್ಕೂಲಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳು ತಮ್ಮ ನರ್ಸಿಂಗ್ ಕಲಿಕೆ ಮತ್ತು ಸೇವೆಯನ್ನು ಆರಂಭಿಸುವುದರ ಅಂಗವಾಗಿ ಲ್ಯಾಂಪ್ ಲೈಟಿಂಗ್ & ಓಥ್ ಟೇಕಿಂಗ್ ಕಾರ್ಯಕ್ರಮವನ್ನು ಜೂ.23ರಂದು ಆಚರಿಸಲಾಯಿತು.

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಯಿ ಅವರು ಸಮಾಜಕ್ಕೆ ಉಪಕಾರ ಮಾಡುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸುವ ಉದಾತ್ತ ವೃತ್ತಿಯಾಗಿರುವ ನರ್ಸಿಂಗ್ ವೃತ್ತಿ ಜೀವನದ ಮೊದಲ ಕಲಿಕಾ ಹಂತದ ಉದ್ಘಾಟನೆಯನ್ನು ದೀಪ ಪ್ರಜ್ವಲಿಸಿ ನೆರವೇರಿಸಿದರು.
ಲಾರೆನ್ಸ್ ಮುಕ್ಕುಯಿ ಅವರು ಮಾತನಾಡುತ್ತಾ, “ನೀವು ಇಂದು ಈ ದೀಪವನ್ನು ಹೊತ್ತಿಸಿರುವುದಷ್ಟೆ ಅಲ್ಲ, ರೋಗಿಗಳಿಗಾಗಿ ಪ್ರೀತಿಯ ದೀಪವನ್ನೂ ಬೆಳಗಿಸಲು ಕರೆ ಹೊಂದಿದವರು. ಈ ಸೇವೆಗೆ ಸಮರ್ಪಿತ ಮನಸ್ಸು ಅತ್ಯಗತ್ಯ. ಈ ದೀಪ ನಿಮ್ಮ ಜೀವನದ ದಿಕ್ಕನ್ನು ತೋರಿಸುವ ಬೆಳಕು ಆಗಲಿ” ಎಂದು ಆಶೀರ್ವದಿಸಿದರು.

ಕಾರ್ಯಕ್ರಮದಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯರು ವಿದ್ಯೆಯ ದೀಪ ಬೆಳಗಿಸಿ ನರ್ಸಿಂಗ್ ಸೇವೆಗೆ ತಮ್ಮ ಪ್ರತಿಜ್ಞಾ ವಿಧಿಯನ್ನು ವಾಚಿಸಿದರು. ವಿದ್ಯಾರ್ಥಿಗಳಿಗೆ ಪೋಷಕರು, ಬಂಧುಮಿತ್ರರು ಹಾಗೂ ಶಿಕ್ಷಕರು ಹಾರೈಕೆ ಸಲ್ಲಿಸಿದರು.

ಪ್ರಮಾಣ ವಚನ ಸ್ವೀಕಾರವನ್ನು ಪ್ರಾಂಶುಪಾಲೆ ಚಂದ್ರಿಕಾ ಅವರು ವಾಚಿಸಿದರು. ಕಾರ್ಯಕ್ರಮದಲ್ಲಿ ಕಲ್ಪತರು ಸ್ಕೂಲ್ ಆಫ್ ನರ್ಸಿಂಗ್ನ ಚೇರ್ಮ್ಯಾನ್ ಜೋಸೆಫ್ ವಲಿಯಪರಾಂಬಿಲ್, ಉಪ ಪ್ರಾಂಶುಪಾಲ ಜೆನ್ನಿ, ತಾಲೂಕು ಆರೋಗ್ಯಾಧಿಕಾರಿ ಡಾ. ಸಂಜಾತ್, ಉಜಿರೆಯ ಎಸ್ಡಿಎಂ ಹಾಸ್ಪಿಟಲ್ನ ನರ್ಸಿಂಗ್ ಅಧೀಕ್ಷಕಿ ಶೆರ್ಲಿ, ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾ ಆಗ್ನೇಸ್ ಚಾಕ್ಕೊ, ಲಾಯಿಲದ ಜ್ಯೋತಿ ಆಸ್ಪತ್ರೆಯ ವ್ಯವಸ್ಥಾಪಕ ಟ್ರಸ್ಟಿ ಮೆರಿಟ್ ಎಸ್.ಡಿ., ಕಲ್ಪತರು ಸ್ಕೂಲ್ ಆಫ್ ನರ್ಸಿಂಗ್ನ ಆಡಳಿತಾಧಿಕಾರಿ ಸಿಲ್ಜನ್ ಜಾರ್ಜ್, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಕಲ್ಪತರು ಸ್ಕೂಲ್ ಆಫ್ ನರ್ಸಿಂಗ್ನ ಚೇರ್ಮ್ಯಾನ್ ಜೋಸೆಫ್ ವಲಿಯಪರಾಂಬಿಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ನರ್ಸಿಂಗ್ ಬೋಧಕಿ ದಿವ್ಯಾ ಧನ್ಯವಾದ ಸಮರ್ಪಿಸಿದರು.