
ಮಚ್ಚಿನ: ಇತಿಹಾಸ ಪ್ರಸಿದ್ಧ ಮಹತೋಭಾರ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಷಂಪ್ರತಿಯಂತೆ ಜರಗುವ ಬ್ರಹ್ಮಕಲಶ ವಾರ್ಷಿಕ ದಿನಾಚರಣೆ ಮತ್ತು ವಾರ್ಷಿಕ ಮೇಷ ಜಾತ್ರಾ ಮಹೋತ್ಸವ ಏ. 23ರಿಂದ ಮೇ. 2ರವರೆಗೆ ಜರಗಲಿದೆ.
ಏ. 23ರಂದು ಪೂ.ಗಂ 9ರಿಂದ ಸೀಯಾಳಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ ಗಂಟೆ 6.30ರಿಂದ ಧ್ವಜಾರೋಹಣ, ಮಹಾಪೂಜೆ, ಉತ್ಸವ, ವಸಂತ ಸೇವೆ, ಏ. 24ರಂದು ಮಹಾಪೂಜೆ, ಏಕಾದಶಿ, ರಾತ್ರಿ ಗಂಟೆ 7ರಿಂದ ಮಹಾಪೂಜೆ, ಉತ್ಸವ ಏ. 25ರಂದು ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಾಯಂಕಾಲ ಗಂಟೆ 4ರಿಂದ ಶ್ರೀ ದೇವಳದಿಂದ ಭಂಡಾರ ಹೊರಟು ಪಿಲಿಚಾಮುಂಡಿ ದೈವದ ನೇಮ, ಸಂಜೆ ಗಂಟೆ 6.30ರಿಂದ ಮಹಾಪೂಜೆ, ಉತ್ಸವ, ಏ. 26ರಂದು ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಸಾಯಂಕಾಲ ಗಂಟೆ 6ರಿಂದ ಕೊಪ್ಪರಿಗೆ ಏರಿಸುವುದು, ಬಯ್ಯದ ಬಲಿ ಪ್ರಾರಂಭ, ವಸಂತ ಸೇವೆ, ಏ.27ರಂದು ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ ಗಂಟೆ 7ರಿಂದ ಕೆರೆ ಆಯನ, ಉತ್ಸವ, ಮಹಾಪೂಜೆ. ಏ.28ರಂದು ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಾಯಂಕಾಲ ಗಂಟೆ 4ರಿಂದ ಉತ್ಸವ, ಮೂಡುಕಟ್ಟೆ ಸವಾರಿ, ವಸಂತ ಸೇವೆ, ಮಹಾಪೂಜೆ.

ಏ. 29ರಂದು ಬ್ರಹ್ಮಕಲಶ ದಿನಾಚರಣೆ ನಡೆಯಲಿದೆ: ಏ. 29ರಂದು ಪೂರ್ವಾಹ್ನ ಗಂಟೆ ೭ರಿಂದ ಬ್ರಹ್ಮಕಲಶ ದಿನಾಚರಣೆ ಪ್ರಯುಕ್ತ ಗಣಯಾಗ, ಏಕದಶಾರುದ್ರಾಬಿಷೇಕ, ಪವಮಾನ ಹೋಮ, ಆಶ್ಲೇಷ ಬಲಿ, ಶ್ರೀ ಅನಂತೇಶ್ವರ ಸ್ವಾಮಿಗೆ ವಿಶೇಷ ಕಲಶಾಭಿಷೇಕ, ಶ್ರೀ ಗಣಪತಿ ದೇವರಿಗೆ ಕಟಾಹ ಅಪೂಪ ನೈವೇದ್ಯ ಸಮರ್ಪಣೆ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಸಾಯಂಕಾಲ ಗಂಟೆ 7ರಿಂದ ಚಂದ್ರ ಮಂಡಲೋತ್ಸವ, ವಸಂತ ಸೇವೆ, ಮಹಾಪೂಜೆ.
ಏ. 30ರಂದು ಮಹಾರಥೋತ್ಸವ: ಏ. 30ರಂದು ಪೂರ್ವಾಹ್ನ ಗಂಟೆ 7ರಿಂದ ದರ್ಶನ ಬಲಿ, ಸಾಯಂಕಾಲ ಗಂಟೆ 6ರಿಂದ ಮಹಾರಥೋತ್ಸವ, ಮಹಾಪೂಜೆ, ಶ್ರೀಭೂತ ಬಲಿ, ಮೇ. 1ರಂದು ಪ್ರಾತಃಕಾಲ ಕವಾಟೋದ್ಘಾಟನೆ, ವಸಂತ ಸೇವೆ, ಮಧ್ಯಾಹ್ನ 11ರಿಂದ ತುಲಾಭಾರ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ, ಸಾಯಂಕಾಲ ಗಂಟೆ 4ರಿಂದ ಅವಭೃತ, ರಾತ್ರಿ 8ರಿಂದ ಧ್ವಜಾವರೋಹಣ, ಮಹಾಪೂಜೆ, ಮೇ 2ರಂದು ಮಹಾಸಂಪ್ರೋಕ್ಷಣೆ, ತುಲಾಭಾರ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಆನುವಂಶಿಕ ಆಡಳಿತ ಮೊಕ್ತೇಸರ ಡಾ. ಹರ್ಷ ಸಂಪಿಗೆತ್ತಾಯ ತಿಳಿಸಿದ್ದಾರೆ.
3ಕೋಟಿ ರೂ ವೆಚ್ಚದಲ್ಲಿ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಕೆಲಸ: ಶ್ರೀ ಕ್ಷೇತ್ರದ ಸವಾಂಗೀಣ ಪ್ರಗತಿಯ ದೃಷ್ಠಿಕೋನದಿಂದ ದೇವತಾನುಗ್ರಹ ಮತ್ತು ಭಕ್ತಾದಿಗಳ ಸಹಕಾರದಿಂದ ನಾವು ಈಗಾಗಲೇ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದು ಕ್ಷೇತ್ರದ ಹಿರಿಮೆಗೆ ಕಲಶಪ್ರಾಯವಾಗಿರುತ್ತದೆ. ಪ್ರಕೃತ ಈಶ್ವರ ದೇವರ ಗರ್ಭಗ್ರಹದ ನವೀಕರಣ, ನೂತನ ಧ್ವಜಸ್ಥಂಭ, ಬ್ರಹ್ಮರಥ ಮೊದಲಾದ ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಆರೂಢ ಪ್ರಶ್ನಾ ಚಿಂತನೆಯನ್ನು ಶ್ರೀ ದೇವಳದ ತಂತ್ರಿಗಳ ನೇತೃತ್ವದಲ್ಲಿ ನಡೆಸಿದ್ದು ಶ್ರೀ ಸ್ವಾಮಿಯ ಸಂಪೂರ್ಣ ಅನುಗ್ರಹ ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ವಾಸ್ತು ತಜ್ಞರ ಹಾಗು ತಂತ್ರಿಗಳ ಮಾರ್ಗದರ್ಶನದಂತೆ ನಕ್ಷೆ ಹಾಗು ಅಂದಾಜು ಪಟ್ಟಿ ತಯಾರಿಸಿದ್ದೇವೆ. ವಾಸ್ತು ವಿನ್ಯಾಸದಿಂದೊಡಗೂಡಿ ಕಲಾತ್ಮಕವಾಗಿ ಮೂಡಿ ಬರಲಿರುವ ಈ ಅಭಿವೃದ್ಧಿ ಕಾಮಗಾರಿಯನ್ನು ಶ್ರೀ ಕ್ಷೇತ್ರದ ಊರ-ಪರಊರ ಭಕ್ತಾದಿಗಳು, ಅಭಿಮಾನಿಗಳು ಹಾಗು ಹಿತೈಷಿಗಳ ಸಹಕಾರದ ನಿರೀಕ್ಷೆಯಲ್ಲಿ 2025ರ ವಾರ್ಷಿಕ ಷಷ್ಠಿ ಕಳೆದ ನಂತರ ಈಶ್ವರ ದೇವರ ಗುಡಿಯ ಸಂಕೋಚವನ್ನು ಧಾರ್ಮಿಕ ವಿದಿವಿಧಾನಗಳೊಂದಿಗೆ ಶ್ರೀ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಿ ನೂತನ ಶೀಲಾಮಯ ಗರ್ಭಗುಡಿಯನ್ನು ನಿರ್ಮಿಸುವ ಕಾರ್ಯಕ್ಕೆ ನಾಂದಿ ಹಾಡಲಿದ್ದೇವೆ. ಈಗಾಗಲೇ ಕೆತ್ತನೆ ಮಾಡಿದ ಶಿಲೆ ಕಲ್ಲುಗಳನ್ನು ದೇವಾಲಯದ ಪರಿಸರದಲ್ಲಿ ದಾಸ್ತಾನು ಇರಿಸಿದ್ದೇವೆ. ನೂತನ ಧ್ವಜಸ್ಥಂಭ ಹಾಗು ಬ್ರಹ್ಮರಥದ ನಿರ್ಮಾಣದ ಕಾಮಗಾರಿಯನ್ನು ನುರಿತ ಕೆಲಸಗಾರರಿಗೆ ವಹಿಸಿಕೊಡಲಾಗಿದೆ. ಈ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು 2026ನೇ ಮಾರ್ಚ್ ತಿಂಗಳಿನೊಳಗೆ ಪೂರೈಸಿ ಬ್ರಹ್ಮಕಲಶವನ್ನು ನಡೆಸುವುದಾಗಿ ಯೋಚಿಸಿದ್ದೇವೆ. ಈ ಬಗ್ಗೆ ನುರಿತ ಅಭಿಯಂತರರು ವಾಸ್ತು ಶಾಸ್ತ್ರಜ್ಞರು ಹಾಗು ತಂತ್ರಿಗಳ ಮಾರ್ಗದರ್ಶನದ ಪ್ರಕಾರ ರೂ. 3ಕೋಟಿಗಳಷ್ಟು ಖರ್ಚು ತಗಲಬಹುದೆಂದು ಅಂದಾಜಿಸಿದ್ದೇವೆ. ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಹಿಂದಿನಿಂದಲೂ ಊರ ಪರವೂರ ಭಕ್ತಾದಿಗಳು ನೀಡಿರುವ ಸಹಕಾರ ಹಾಗೂ ಗ್ರಾಮಸ್ಥರ ಶ್ರಮದಾನಂತಹ ನಿಸ್ವಾರ್ಥ ಸೇವೆಗಳಿಂದ ಈ ಜೀರ್ಣೋದ್ಧಾರದ ಕೆಲಸ ಯಶಸ್ವಿಯಾಗಿ ದೇವರ ಅನುಗ್ರಹದಿಂದ ನಡೆಯುವ ಭರವಸೆ ಹೊಂದಿದ್ದೇವೆ. -ಡಾ. ಎಂ.ಹರ್ಷ ಸಂಪಿಗೆತ್ತಾಯ, ಆನುವಂಶಿಯ ಆಡಳಿತ ಮೊಕ್ತೇಸರರು