

ಕೊಕ್ಕಡ: ಶಿಬಿರದಿಂದ ವಿದ್ಯಾರ್ಥಿಗಳು ಒಳ್ಳೆಯ ವಿಚಾರಗಳನ್ನು ಪಡೆಯುವ ಮೂಲಕ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ. ಜಡತ್ವ ಹೊಂದಿದ ಕಲ್ಲನ್ನು ದೈವಿಕಲ್ಲಿನಂತೆ ರೂಪುಗೊಳಿಸುವ ಶಕ್ತಿ ಶಿಬಿರಕ್ಕಿರುತ್ತದೆ. ಮಣ್ಣಿನ ಮುದ್ದೆಯಂತಿರುವ ಮಕ್ಕಳಿಗೆ ಸಂಸ್ಕಾರಗಳ ಮೂಲಕ ರೂಪಗಳನ್ನು ಕೊಟ್ಟಾಗ ಸಮಾಜಕ್ಕೊಂದು ಉತ್ತಮ ವ್ಯಕ್ತಿಯನ್ನು ಸಂಪಾದಿಸಲು ಸಾಧ್ಯ ಎಂದು ಕೊಕ್ಕಡದ ಅಂಬಿಕಾ ಕ್ಲಿನಿಕ್ ನ ವೈದ್ಯ ಡಾಕ್ಟರ್ ಗಣೇಶ್ ಪ್ರಸಾದ ನುಡಿದರು.
ಶ್ರೀ ಮಹಾ ಗಣಪತಿ ಸೇವಾ ಟ್ರಸ್ಟ್ ಸೌತಡ್ಕ, ಶ್ರೀರಾಮ ಸೇವಾ ಟ್ರಸ್ಟ್ ಕೊಕ್ಕಡ, ಶ್ರೀರಾಮ ವಿದ್ಯಾಸಂಸ್ಥೆ ಪಟ್ಟೂರು ಇದರ ಸಹಯೋಗದಲ್ಲಿ ಶ್ರೀರಾಮ ಸೇವಾ ಮಂದಿರದಲ್ಲಿ ಎ. 14ರಂದು ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರದ ಕೊನೆಯ ದಿನದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅತಿಥಿಯಾಗಿ ಆಗಮಿಸಿದ ಕೊಕ್ಕಡ ಸಿ.ಎ ಬ್ಯಾಂಕಿನ ನಿರ್ದೇಶಕ ರವಿಚಂದ್ರ ಪುಡ್ಕೆತ್ತೂರು ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಒಳ್ಳೆಯ ಸಂಸ್ಕಾರವನ್ನು ಕಲಿಯುವುದು ಮಾತ್ರವಲ್ಲದೇ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಬಿರದಲ್ಲಿ ಒಳ್ಳೆಯ ವಿಚಾರಗಳನ್ನು ಕಲಿತು ಜೀವನದಲ್ಲಿ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಬೇಕು ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಾ ಗಣಪತಿ ಸೇವಾ ಟ್ರಸ್ಟ್ ಸದಸ್ಯೆ ಬಬಿತ ಕೊಲ್ಲಾಜೆ ವಹಿಸಿದ್ದರು. ಐದನೇ ದಿನ ಶಿಬಿರದಲ್ಲಿ 142 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಿಬಿರದ ಮೊದಲನೇ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಲೆಮಾರಿ ಕಾರ್ಯ ಪ್ರಾಂತ ಸದಸ್ಯ ಲಕ್ಷ್ಮಣ್ ದಾಸ್ ವಿದ್ಯಾರ್ಥಿಗಳಿಗೆ ಪ್ರೇರಣದಾಯಿ ಡಾ. ಬಿ. ಆರ್. ಅಂಬೇಡ್ಕರ್ ಎನ್ನುವ ವಿಷಯದ ಬಗ್ಗೆ ಮಾಹಿತಿ ನೀಡಿದರು.
ಎರಡನೇ ಅವಧಿಯಲ್ಲಿ ವಿಡಿಯೋ ಮುಖಾಂತರ ನೀತಿ ಕಥೆಗಳ ಪ್ರಾತ್ಯಕ್ಷಿಕೆಯನ್ನು ನೆಲ್ಯಾಡಿಯ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವಿಶ್ವನಾಥ ಶೆಟ್ಟಿ ನಡೆಸಿಕೊಟ್ಟರು. ಮೂರನೇ ಅವಧಿಯಲ್ಲಿ ಹವ್ಯಾಸಿ ಪತ್ರಕರ್ತ ವೃಷಾಂಕ್ ಖಾಡಿಲ್ಕರ್ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಹೇಗೆ ಬೆಳೆಸಿಕೊಳ್ಳಬೇಕು ಎನ್ನುವುದರ ಬಗ್ಗೆ ತಿಳಿಸಿಕೊಟ್ಟರು.
ವಿದ್ಯಾರ್ಥಿಗಳ ಸರಸ್ವತಿ ವಂದನೆಗಳೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶ್ವೇತಾ ಎಂ. ಪಿ. ಸ್ವಾಗತಿಸಿದರು. ಶುಭಲಕ್ಷ್ಮಿ ನಿರೂಪಿಸಿದರು. ಎಲ್ಲಾ ಶಿಕ್ಷಕರು ಸಹಕರಿಸಿದರು. ರಕ್ಷಿತಾ ವಂದಿಸಿದರು.