

ಉಜಿರೆ: ಯಾವುದೇ ವಿದ್ಯಾಸಂಸ್ಥೆಯ ಏಳಿಗೆಯಲ್ಲಿ ವಿದ್ಯಾರ್ಥಿ ಸಂಘದ ಪಾತ್ರ ಹಿರಿದಾಗಿದೆ. ವಿದ್ಯಾರ್ಥಿ ಸಂಘವು ವಿದ್ಯಾರ್ಥಿಗಳ ಹಾಗೂ ವಿದ್ಯಾಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಲಿಲ್ಲಿ ಪಿ. ವಿ., ಉಪನ್ಯಾಸಕರು, ಸರಕಾರಿ ಪದವಿ ಪೂರ್ವ ಕಾಲೇಜು ನಡ ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯದ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಇವರು ಪದಾಧಿಕಾರಿಗಳಿಗೆ ಪ್ರತಿಜ್ಞೆಯನ್ನು ಬೋಧಿಸಿ ನಾಯಕ ಹಾಗೂ ನಾಯಕತ್ವದ ಗುಣಗಳನ್ನು ತಿಳಿಸಿಕೊಟ್ಟರು. ಭಾವೀ ಶಿಕ್ಷಕರಾಗುವ ಪ್ರಶಿಕ್ಷಣಾರ್ಥಿಗಳ ಕುರಿತು ಮಾತನಾಡಿ ಸದೃಢ ದೇಶದ ರಚನೆಗೆ ಸಮರ್ಥ ಗುರುವಿನ ಬಲ ಬೇಕಾಗಿದೆ. ಕಳಂಕರಹಿತ ಅತ್ಯುತ್ತಮ ವೃತ್ತಿ ಇದಾಗಿದೆ. ಆದುದರಿಂದ ಮಣ್ಣಿನ ಮುದ್ದೆಯಂತಿರುವ ವಿದ್ಯಾರ್ಥಿಯೊಳಗಿನ ಪ್ರತಿಭೆಯನ್ನು ಸಮಾಜದಲ್ಲಿ ಕಂಗೊಳಿಸುವಂತೆ ಮಾಡುವುದು ಪ್ರತಿಯೊಬ್ಬ ಶಿಕ್ಷಕರ ಕರ್ತವ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕಿ ಅನುಷ ಡಿ. ಜೆ. ಇವರು ಕಾರ್ಯಕ್ರಮದ ಕುರಿತು ಮಾತನಾಡಿ ಸಮಾಜದ ಕಲ್ಯಾಣಕ್ಕೆ ನಾಯಕರ ಅಗತ್ಯತೆ ಇದೆ. ನಾಯಕತ್ವ ಭಾವವನ್ನು ಎಲ್ಲಾ ಪ್ರಶಿಕ್ಷಣಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಹಾಗಿದ್ದರೆ ಮಾತ್ರ ಉತ್ತಮ ಶಿಕ್ಷಕರಾಗಿ ಹೊರಹೊಮ್ಮಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ವಿದ್ಯಾರ್ಥಿ ಸಂಘದ ಸಂಯೋಜಕ ತಿರುಮಲೇಶ್ ರಾವ್ ಎನ್. ಕೆ. ಇವರು ನಾಯಕತ್ವವು ಒಂದು ಅದ್ಭುತ ಗುಣವಾಗಿದೆ. ಹಲವು ಅನುಭವಗಳನ್ನು ನಾಯಕತ್ವವು ನೀಡುತ್ತದೆ. ವಿದ್ಯಾರ್ಥಿ ಸಂಘದ ನಾಯಕರು ಹಲವು ಕಾರ್ಯಕ್ರಮ ಸಂಯೋಜನೆಯಲ್ಲಿ ಮಧ್ಯವರ್ತಿಗಳೆಂದರೆ ತಪ್ಪಾಗದು ಹಾಗೂ 2024-25ನೇ ಸಾಲಿನ ಕಾರ್ಯಯೋಜನೆಗಳ ಜವಾಬ್ದಾರಿ ವಿದ್ಯಾರ್ಥಿ ಪದಾಧಿಕಾರಿಗಳ ಮೇಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘದ ನಾಯಕಿ ವೀಕ್ಷದೀಪ ಆರ್. ಎಸ್. ಹಾಗೂ ಕಾರ್ಯದರ್ಶಿ ದೀಕ್ಷಿತ್ ಎಂ. ಇವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಸಂತೋಷ್ ಸಲ್ಡಾನ, ಉಪನ್ಯಾಸಕರಾದ ವಿದ್ಯಾಶ್ರೀ ಪಿ. ಮಂಜು ಆರ್., ಪ್ರಿಯದರ್ಶಿನಿ ಜಿ. ಭಟ್., ಆದ್ಯಾ ಹಾಗೂ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಾದ ಸಂತೋಷ್ ಟಿ. ಯು. ಸ್ವಾಗತಿಸಿ, ಫಾತಿಮಾತ್ ರಾಫಿಯಾ ಕಾರ್ಯಕ್ರಮವನ್ನು ನಿರ್ವಹಿಸಿದರು. ವಿಶ್ಮಿತಾ ಅತಿಥಿಗಳನ್ನು ಪರಿಚಯಿಸಿ, ವಿಶಾಲ ವಂದಿಸಿದರು.