ರಾಜ್ಯ ಬಜೆಟ್ ನಲ್ಲಿ ಪುತ್ತೂರು ಮೆಡಿಕಲ್ ಕಾಲೇಜು ಘೋಷಣೆ ಸ್ವಾಗತಾರ್ಹ: ಎಸ್.ಡಿ.ಪಿ.ಐ – ಆದರೆ ಕರಾವಳಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಬಜೆಟ್ ನಲ್ಲಿ ಕಡೆಗಣಿಸಲಾಗಿದೆ : ಅನ್ವರ್ ಸಾದತ್

0

ಬೆಳ್ತಂಗಡಿ: ಮಂಗಳೂರು ಮಾರ್ಚ್ 09: ವಿಧಾನ ಮಂಡಲದಲ್ಲಿ ಮಂಡನೆಯಾದ ರಾಜ್ಯ ಬಜೆಟ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಹೊಸ ಮೆಡಿಕಲ್ ಕಾಲೇಜನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿರುವುದು ಜಿಲ್ಲೆಯ ಜನತೆಯ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ. ಖಾಸಗಿ ಕಾಲೇಜುಗಳ ಲಾಬಿ ಜೋರಾಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಸ್ವಾಗತಾರ್ಹ. ಈ ಮೂಲಕ ಜಿಲ್ಲೆಯ ಜನತೆಯ ಹಕ್ಕೊತ್ತಾಯಕ್ಕೆ ಸರಕಾರ ಮನ್ನಣೆ ನೀಡಿದೆ. ಆದರೆ ಜಿಲ್ಲೆಯ ಇತರ ಕ್ಷೇತ್ರಗಳನ್ನು ರಾಜ್ಯ ಬಜೆಟ್ ನಲ್ಲಿ ಎಂದಿನಂತೆ ಕಡೆಗಣಿಸಲಾಗಿದೆ. ಎಲ್ಲಾ ಬಜೆಟ್ ನಲ್ಲೂ ದಕ್ಷಿಣ ಕನ್ನಡ ಜಿಲ್ಲೆಗೆ ಸರಕಾರ ಅನುಸರಿಸುತ್ತಿರುವ ಮಲತಾಯಿ ದೋರಣೆ ಈ ಬಜೆಟ್ ನಲ್ಲೂ ಮುಂದುವರೆದಿದೆ ಎಂದು ಎಸ್.ಡಿ.ಪಿ.ಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಸೇರಿದಂತೆ ಕರಾವಳಿಯನ್ನು ಪ್ರವಾಸೋದ್ಯಮವಾಗಿ ಅಭಿವೃದ್ಧಿ ಪಡಿಸುವಂತೆ, ಅಡಿಕೆ ಬೆಲೆ, ಕಾನೂನು ಕಾಲೇಜು, ಹಾಗೂ ಪ್ರಮುಖವಾಗಿ ಪುತ್ತೂರು ಜಿಲ್ಲೆ ಘೋಷಣೆಯ ಬಗ್ಗೆಯೂ ಎಸ್‌ಡಿಪಿಐ ಹಕ್ಕೊತ್ತಾಯ ಹಾಗೂ ಮನವಿಗಳನ್ನು ಸಲ್ಲಿಸಿತ್ತು. ಇದು ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಬೇಡಿಕೆಯೂ ಆಗಿತ್ತು. ಆದರೆ ಅವುಗಳನ್ನು ನಿರಾಕರಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ನಿರಾಸೆ ಹುಟ್ಟಿಸಿದೆ. ಇತ್ತೀಚಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಕಾರ್ಕಳದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಹಾಗೂ ಎರಡು ದಿನಗಳ ಹಿಂದೆ ಅಧಿವೇಶನದ ಚರ್ಚೆಯಲ್ಲೂ ಪ್ರವಾಸೋದ್ಯಮ ಕುರಿತು ಚರ್ಚೆ ಮಾಡಿದ್ದರು. ಹಾಗಾಗಿ ಕರಾವಳಿಯ ಜನತೆ ಈ ಬಾರಿಯ ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ಸರಕಾರ ಹಣ ಮೀಸಲಿಡಲಿದೆ ಎಂದೇ ಭಾವಿಸಿದ್ದರು.ಆದರೆ ಇದು ಸುಳ್ಳಾಗಿದೆ ಎಂದಿದ್ದಾರೆ. ಬೌಗೋಳಿಕ ದೃಷ್ಟಿಯಿಂದ ಪುತ್ತೂರನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂಬ ಪ್ರಮುಖ ಬೇಡಿಕೆಯನ್ನು ಕೂಡ ಈ ಬಜೆಟ್ ನಲ್ಲಿ ಕಡೆಗಣಿಸಲಾಗಿದೆ.

ಅದೇ ರೀತಿ ಕರಾವಳಿ ಜನತೆಯ ಜೀವನಾಡಿಯಾದ ಅಡಿಕೆಗೆ ಎಲೆಚುಕ್ಕಿ,ಹಳದಿ ರೋಗ ಹಾಗೂ ಹವಾಮಾನದ ವೈಪರೀತ್ಯದಿಂದ ವರ್ಷ ಹೋದಂತೆ ಫಸಲು ಕಡಿಮೆಯಾಗುತ್ತಿದೆ. ಖರ್ಚು ವೆಚ್ಚಗಳು ಅಧಿಕವಾಗುತ್ತಿದೆ ಹಾಗಾಗಿ ಅಡಿಕೆಗೆ ಬೆಂಬಲ ನೀಡಬೇಕೆಂಬ ಬೇಡಿಕೆಯನ್ನು ಬಜೆಟ್ ನಲ್ಲಿ ಕಡೆಗಣಿಸಲಾಗಿದೆ‌. ಈಗಾಗಲೇ ಪುತ್ತೂರಿಗೆ ಘೋಷಣೆಯಾದ ಮೆಡಿಕಲ್ ಕಾಲೇಜಿನ ಪ್ರಕ್ರಿಯೆಯನ್ನು ವಿಳಂಬ ಮಾಡದೆ ಕೂಡಲೇ ಕಾರ್ಯರೂಪಕ್ಕೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here