ಕೊಕ್ಕಡ: ಫಲಿತಾಂಶದ ಕುರಿತು ಹೈಕೋರ್ಟ್ ಆದೇಶ ಪ್ರಕಟವಾದ ಹಿನ್ನೆಲೆಯಲ್ಲಿ ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧಿಕಾರ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಪಾಲಾಗಿದೆ. ಮುಂದಿನ 5 ವರ್ಷಗಳ ಆಡಳಿತ ಮಂಡಳಿಯ ನೂತನ 12 ನಿರ್ದೇಶಕರ ಆಯ್ಕೆಗಾಗಿ ಜ. 27ರಂದು ನಡೆದ ಚುನಾವಣೆಯ ಮತ ಎಣಿಕೆ ನಡೆದಿದ್ದರೂ ಅಧಿಕೃತ ಫಲಿತಾಂಶ ಪ್ರಕಟವಾಗಿರಲಿಲ್ಲ. ಫಲಿತಾಂಶದ ಬಗ್ಗೆ ಇದೀಗ ಹೈಕೋರ್ಟಿನ ಅಂತಿಮ ತೀರ್ಪು ಪ್ರಕಟಗೊಂಡಿದ್ದು, ಸಹಕಾರ ಭಾರತಿಗೆ ಅಧಿಕಾರದ ಭಾಗ್ಯ ದೊರೆತಿದೆ.
ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿಯ 12 ಅಭ್ಯರ್ಥಿಗಳು ಜಯಭೇರಿ ಸಾಧಿಸಿದ್ದರು. ಆದರೆ ಸಹಕಾರಿ ಸಂಘದ 2 ಮಹಾಸಭೆಗೆ ಗೈರು ಹಾಜರಾದ ಸಂಘದ ಸದಸ್ಯರಿಗೆ ಸಹಕಾರಿ ಸಂಘದ ನಿಯಮದಂತೆ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಇಲ್ಲ ಎಂಬ ಹಿನ್ನೆಲೆಯಲ್ಲಿ, ಮತದಾನದ ಅವಕಾಶ ಕಳೆದುಕೊಂಡ ಸಂಘದ ಸದಸ್ಯರು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳು ಸಹಕಾರಿ ಸಂಘದ ಚುನಾವಣೆಯ ಫಲಿತಾಂಶವನ್ನು ಘೋಷಣೆ ಮಾಡದೆ ತಡೆ ಹಿಡಿದಿದ್ದರು.
ಇದೀಗ ಈ ವಿಚಾರದಲ್ಲಿ ಹೈಕೋರ್ಟ್ ಅಂತಿಮ ಆದೇಶ ನೀಡಿದ್ದು ಇದರಿಂದಾಗಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ನಿರ್ದೇಶಕರಿಗೆ ಅಧಿಕಾರ ದೊರೆತಿದೆ.
ನಿರ್ದೆಶಕರಾಗಿ ಆಯ್ಕೆಯಾದವರು: ಸಾಮಾನ್ಯ ಕ್ಷೇತ್ರದಿಂದ ಕುಶಾಲಪ್ಪ ಗೌಡ ಪೂವಾಜೆ, ವಿಠಲ ಭಂಡಾರಿ, ಶ್ರೀನಾಥ್ ಬಿ, ಪದ್ಮನಾಭ ಕೆ, ಉದಯ ಎ, ಮಹಾಬಲ ಶೆಟ್ಟಿ
ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಸುನಿಲ್, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ರವಿಚಂದ್ರ ಪಿ., ಸಾಲಗಾರರ ಮಹಿಳಾ ಮೀಸಲು ಕ್ಷೇತ್ರದಿಂದ ಪ್ರೇಮಾವತಿ, ಅಶ್ವಿನಿ, ಪ. ಪಂಗಡ ಕ್ಷೇತ್ರದಿಂದ ವಿಶ್ವನಾಥ, ಪ. ಜಾತಿ ಕ್ಷೇತ್ರದಿಂದ ಮುತ್ತಪ್ಪ ಜಯ ಗಳಿಸಿದ್ದಾರೆ.