ಫೆ.12-16: ಮರೋಡಿ ಕ್ಷೇತ್ರ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ

0

ಮರೋಡಿ: ಆಲಡೆ ಕ್ಷೇತ್ರ ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆಗೆ ವೈದಿಕ ವಿಧಿವಿಧಾನಗಳೊಂದಿಗೆ ಫೆ.12ರಂದು ವಿಧ್ಯುಕ್ತ ಚಾಲನೆ ನೀಡಲಾಯಿತು. ಫೆ.16ರವರೆಗೆ ಜಾತ್ರೋತ್ಸವ ವೈಭವದಿಂದ ನಡೆಯಲಿದೆ.

ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಬಾಲಕೃಷ್ಣ ಪಾಂಗಣ್ಣಾಯ ಅವರ ಮಾರ್ಗದರ್ಶನದಲ್ಲಿ, ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್‌ ಅವರ ನೇತೃತ್ವದಲ್ಲಿ ಫೆ.12ರಂದು ವಾಸ್ತುರಾಕ್ಷೋಘ್ನ ಹೋಮ, ಪ್ರಾಕಾರ ಬಲಿ ನಡೆಯಿತು.

ಕುತ್ಲೂರು ಗ್ರಾಮದ ಎಂ. ಎಸ್. ರಾಜು ಅವರ ಪುತ್ರ ರವಿಕಿರಣ್‌ ಮತ್ತು ವರಲಕ್ಷ್ಮಿ ಕುಟುಂಬಸ್ಥರು ದೇವಸ್ಥಾನದ ಬಲಿ ಉತ್ಸವದ ಬೆಳ್ಳಿಯ ಕವಚವನ್ನು ದೇವರಿಗೆ ಸಮರ್ಪಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ, ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಜಯಂತ ಕೋಟ್ಯಾನ್‌ ಉಪಸ್ಥಿತರಿದ್ದರು.

ಗುರುವಾರ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಧ್ವಜಾರೋಹಣ ಭಕ್ತರ ಸಮ್ಮುಖದಲ್ಲಿ ನಡೆಯಿತು. ಆಡಳಿತ ಮಂಡಳಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.

ಸಂಜೆ ದೊಡ್ಡ ರಂಗಪೂಜೆ, ಭಜನಾ ಕಾರ್ಯಕ್ರಮ, ಬಲಿ ಉತ್ಸವ, ವ್ಯಾಘ್ರಚಾಮುಂಡಿ ಸಹಿತ ರಕ್ತೇಶ್ವರಿ, ಮೈಸಂದಾಯ ದೈವಗಳಿಗೆ ಗಗ್ಗರ ಸೇವೆ, ಸಾಂಸ್ಕೃತಿಕ ವೇದಿಕೆಯಲ್ಲಿ ಸ್ಥಳೀಯ ಪ್ರತಿಭೆಗಳಿಂದ ಮನರಂಜನಾ ಕಾರ್ಯಕ್ರಮ, ನಮ್ಮ ಕಲಾವಿದೆರ್‌ ಬೆದ್ರ ತಂಡದ ಉಮೇಶ್‌ ಮಿಚಾರ್‌ ಬಳಗದಿಂದ ತೆಲಿಕೆದ ಗೊಂಚಿಲ್‌ ಕಾರ್ಯಕ್ರಮ ನಡೆಯಲಿದೆ.

ಫೆ.14ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ ನಡೆಯಲಿದೆ. ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅಧ್ಯಕ್ಷತೆ ವಹಿಸುವರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್‌, ಮರೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರತ್ನಾಕರ ಬುಣ್ಣಾನ್‌, ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಜಯಂತ ಕೋಟ್ಯಾನ್‌ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಂಜೆ ಆಶ್ಲೇಷ ಬಲಿ ನಡೆಯಲಿದೆ. ಸಂಜೆ ಶ್ರೀಭೂತಬಲಿ, ಕವಾಟ ಬಂಧನ, ಪಟ್ಟದ ಪಂಜುರ್ಲಿ ಮತ್ತು ಕಲ್ಕುಡ ದೈವಗಳ ಕೋಲ, ಸಾಂಸ್ಕತಿಕ ವೇದಿಕೆಯಲ್ಲಿ ಸ್ಥಳೀಯ ಪ್ರತಿಭೆಗಳಿಂದ ತುಳುನಾಡ ಪೊರ್ಲು ಕಾರ್ಯಕ್ರಮ ನಡೆಯಲಿದೆ.

ಫೆ.15ರಂದು ಬೆಳಿಗ್ಗೆ ಕವಾಟ ಉದ್ಘಾಟನೆ, ಕಲಶಾಭಿಷೇಕ, ತುಲಾಭಾರ ಸೇವೆ, ಚೂರ್ಣೋತ್ಸವ, ದರ್ಶನ ಬಲಿ ಬಟ್ಟಲುಕಾಣಿಕೆ, ಪಲ್ಲಪೂಜೆ, ಮಹಾಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಯಾತ್ರಾ ಹೋ, ಬಲಿ ಉತ್ಸವ, ಸಿರಿಗಳ ಜಾತ್ರೆ, ಕುಮಾರದರ್ಶನ, ಕೊಡಮಣಿತ್ತಾಯ ದೈವದ ನೇಮೋತ್ಸವ, ದೈವದೇವರ ಭೇಟಿ, ಧ್ವಜವರೋಹಣ, ಸಾಂಸ್ಕೃತಿಕ ವೇದಿಕೆಯಲ್ಲಿ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ, ಕಲ್ಲಡ್ಕ ವಿಠಲ ನಾಯಕ್‌ ಅವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ. ಫೆ.16ರಂದು ಸಂಪ್ರೋಕ್ಷಣೆ, ಮಂತ್ರಾಕ್ಷತೆಯೊಂದಿಗೆ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ.

LEAVE A REPLY

Please enter your comment!
Please enter your name here