

ರಾಘವ ಶರ್ಮ ನಿಡ್ಲೆ
ಬೆಳ್ತಂಗಡಿ ತಾಲೂಕಿನ ಕೊಕ್ಕಡಕ್ಕೆ ಸನಿಹದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಹರಕೆ ಮೂಲಕ ಸಮರ್ಪಿತವಾದ, ಕೋಟಿಗಟ್ಟಲೆ ಮೌಲ್ಯದ ಗಂಟೆಗಳ ವಿಲೇವಾರಿ ನಡೆಯದಿರುವುದು, ದೇವಾಲಯದ ಒಟ್ಟಾರೆ ಮೂಲಸೌಕರ್ಯ ಅಭಿವೃದ್ಧಿಗೆ ತೊಡಕಾಗಿ ಪರಿಣಮಿಸಿದೆ.
ಸುಮಾರು ೫೦-೫೫ ಟನ್ಗಳಷ್ಟು ಗಂಟೆಗಳು ದೇಗುಲದ ಸ್ಟಾಕ್ ರೂಮ್ನಲ್ಲಿ ರಾಶಿ ಬಿದ್ದಿವೆ ಎನ್ನಲಾಗಿದೆ. ಸರ್ಕಾರ ಈಗಲೂ ತ್ವರಿತ ಕ್ರಮಕ್ಕೆ ಮುಂದಾಗದಿದ್ದಲ್ಲಿ ಗಂಟೆಗಳಿಗೆ ಮತ್ತಷ್ಟು ತುಕ್ಕು ಹಿಡಿದು ಅತಿ ಕಡಿಮೆ ಬೆಲೆಗೆ ವಿಲೇವಾರಿಯಾದೀತು ಎಂದು ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದೈದು ವರ್ಷಗಳಿಂದ ವಿವಿಧ ಕಾರಣಗಳಿಗಾಗಿ ದೇಗುಲದ ಆಡಳಿತಾಧಿಕಾರಿ, ಜಿಲ್ಲಾಧಿಕಾರಿ ಕಚೇರಿ ಹಾಗೂ ವ್ಯವಸ್ಥಾಪನಾ ಸಮಿತಿಗೆ ಗಂಟೆಗಳನ್ನು ಮಾರಾಟದ ಮೂಲಕ ವಿಲೇವಾರಿ ಮಾಡಲು ಸಾಧ್ಯವಾಗಿಲ್ಲ. ೫೫ ಟನ್ ಗಂಟೆಗಳ ಅಂದಾಜು ಬೆಲೆ ರೂ. ೨.೫ ಕೋಟಿಗಿಂತಲೂ ಅಧಿಕ ಆಗಬಹುದು ಎಂದು ಲೆಕ್ಕ ಹಾಕಲಾಗಿದೆ. ಈ ಹಣ ಸಿಕ್ಕಲ್ಲಿ ದೇಗುಲದ ಸಮಗ್ರ ಅಭಿವೃದ್ಧಿ ಖಂಡಿತ ಸಾಧ್ಯ ಎಂದು ಭಕ್ತರು ನಂಬಿದ್ದಾರೆ.
೨೦೨೪ರ ಫೆಬ್ರವರಿ ೩ಕ್ಕೆ ಹರೀಶ್ ರಾವ್ ಮುಂಡ್ರುಪ್ಪಾಡಿ ಅವರ ಅಧ್ಯಕ್ಷತೆಯ ವ್ಯವಸ್ಥಾಪನಾ ಸಮಿತಿ ಅವಧಿ ಪೂರ್ಣಗೊಂಡಿತ್ತು. ಒಂದು ವರ್ಷ ಪೂರ್ಣಗೊಂಡರೂ ಸರ್ಕಾರ ಹೊಸ ವ್ಯವಸ್ಥಾಪನಾ ಸಮಿತಿ ರಚನೆ ಮಾಡಿಲ್ಲ. “ಹಳೆ ಸಮಿತಿ ಅವಧಿ ಮುಗಿದ ವೇಳೆ ೪೬-೪೭ ಟನ್ ಸ್ಟಾಕ್ ಇತ್ತು. ಇದು ೧ ವರ್ಷದಲ್ಲಿ ೫೫ ಟನ್ಗೆ ಏರಿಕೆಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಹಿಂದಿನ ವ್ಯವಸ್ಥಾಪನಾ ಸಮಿತಿ ಅಧಿಕಾರದಲ್ಲಿದ್ದಾಗ
ಗಂಟೆ ವಿಲೇವಾರಿಗೆ ೨ ಬಾರಿ ಇ-ಟೆಂಡರ್ ಕರೆಯಲಾಗಿತ್ತು. ೨೫ ಟನ್ ಗಂಟೆ ವಿಲೇವಾರಿಗೆ ಜಿಲ್ಲಾಧಿಕಾರಿ ಅನುಮತಿ ನೀಡಿದ್ದರು. ಇ-ಟೆಂಡರ್ ಪ್ರಕ್ರಿಯೆ ಜಿಲ್ಲಾಧಿಕಾರಿ ಕಚೇರಿ ಮೂಲಕ ನಡೆಯುವುದರಿಂದ ಆಗ ಸರ್ವರ್ ಸಮಸ್ಯೆ ಎದುರಾಗಿತ್ತು ಎಂದು ಬಿಡ್ಡರ್ಗಳು ಹೇಳಿದ್ದರು. ಅಲ್ಲದೆ, ಟೆಂಡರ್ ಕರೆದಾಗ ೨ ಬಾರಿಯೂ ಒಬ್ಬೊಬ್ಬರೇ ಭಾಗಿಯಾದ ಕಾರಣ ಅದು ಪೂರ್ಣಗೊಳ್ಳಲಿಲ್ಲ” ಎಂದು ಹರೀಶ್ ರಾವ್ ಮಾಹಿತಿ ಹಂಚಿಕೊಂಡಿದ್ದಾರೆ. ಗಂಟೆ ಖರೀದಿ ಮಾಡಲು ಈಗಲೂ ಗುಜರಾತ್, ಉಡುಪಿ ಮೂಲದ ಆಸಕ್ತರಿಂದ ಫೋನ್ ಕರೆಗಳು ಬರುತ್ತಿರುತ್ತವೆ ಎಂದು ಹರೀಶ್ ರಾವ್ ತಿಳಿಸಿದ್ದಾರೆ.
ಯಾರು ಅರ್ಹರು?: ಅಂದಾಜು ರೂ ೨.೫ ಕೋಟಿ ಮೌಲ್ಯದ ಗಂಟೆ ವಿಲೇವಾರಿ ನಡೆಯಬೇಕಿರುವುದರಿಂದ, ತಮ್ಮ ಉದ್ಯಮದಲ್ಲಿ ಕನಿಷ್ಠ ರೂ ೧ ಕೋಟಿ ಟರ್ನ್ಓವರ್ ನಡೆಸುವ ವ್ಯಕ್ತಿಗಳಿಗಷ್ಟೇ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹರಾಗಿದ್ದಾರೆ.
ಸಂಗ್ರಹಕ್ಕೆ ಸ್ಥಳದ ಕೊರತೆ: ಹರಕೆ ಗಂಟೆಗಳ ಸಮರ್ಪಣೆ ನಿತ್ಯವೂ ನಡೆಯುವುದರಿಂದ ಗಂಟೆಗಳ ಪ್ರಮಾಣ ಹೆಚ್ಚಿಗೆಯಾಗಿದ್ದು, ಸಂಗ್ರಹ ಕೊಠಡಿಯಲ್ಲಿ ಸ್ಥಳಾವಕಾಶದ ಸಮಸ್ಯೆ ಎದುರಾಗಿದೆ. ಮಳೆಗಾಲದಲ್ಲಂತೂ ಕೋಣೆಗೆ ನೀರು ನುಗ್ಗುವುದರಿಂದ ನಂತರ ಗಂಟೆಗಳಿಗೆ ತುಕ್ಕು ಹಿಡಿಯುತ್ತಿದೆ. ಹೀಗಾಗಿ, ಈ ಗಂಟೆಗಳ ವಿಲೇವಾರಿ ಆಗದಿದ್ದಲ್ಲಿ ಅವುಗಳ ಮೌಲ್ಯ ಮತ್ತಷ್ಟು ಕಡಿಮೆಯಾಗಬಹುದು ಎನ್ನಲಾಗಿದೆ.
ಹಣ ಬಂದರೆ ಅಭಿವೃದ್ಧಿ: ಗಂಟೆ ವಿಲೇವಾರಿಯಿಂದ ಸಿಕ್ಕ ಹಣದಲ್ಲಿ ಹೊಸ ಸ್ಟಾಕ್ ರೂಮ್ ಮತ್ತು ಪ್ರಸಾದ ಕೊಠಡಿ ನಿರ್ಮಾಣ ಮಾಡಬೇಕೆಂದು ಹರೀಶ್ ರಾವ್ ಮತ್ತು ತಂಡ ಯೋಜಿಸಿತ್ತು. ಇದಕ್ಕಾಗಿ ರೂ. ೧.೨ ಕೋಟಿ ವೆಚ್ಚದ ಪ್ರಸ್ತಾವನೆಯನ್ನೂ ನೀಡಲಾಗಿತ್ತು. ಈಗಿನ ವ್ಯವಸ್ಥೆಯಲ್ಲಿ ಪ್ರಸಾದವನ್ನು ಕೆಳ ಮಹಡಿಯಿಂದ ಮೇಲಕ್ಕೆ ಎತ್ತಿಕೊಂಡು ಬರುತ್ತಾರೆ. ಇದರ ಬದಲಿಗೆ ಗಾಡಿಯಲ್ಲಿ ದೇವಸ್ಥಾನದ ಅಂಗಣಕ್ಕೆ ಪ್ರಸಾದ ತರುವ ವ್ಯವಸ್ಥೆ ಮಾಡಬೇಕೆಂದಿದ್ದೆವು. ಭೋಜನ ಗೃಹದಲ್ಲಿ ಮೇಲ್ಭಾಗದಲ್ಲಿ ಟೇಬಲ್ನಲ್ಲಿ ಕುಳಿತು ಊಟಕ್ಕೆ ವ್ಯವಸ್ಥೆ ಮಾಡುವ ಕಟ್ಟಡ ನಿರ್ಮಾಣಕ್ಕೆ ಪ್ಲಾನ್ ಇತ್ತು ಎಂದು ಹರೀಶ್ ರಾವ್ ಹೇಳುತ್ತಾರೆ.
ಖಾಯಂ ಸಿಬ್ಬಂದಿ ನೇಮಕಕ್ಕೆ ಒತ್ತಾಯ: ದೇವಸ್ಥಾನಕ್ಕೆ ಖಾಯಂ ಸಿಬ್ಬಂದಿ ನೇಮಕ ಮಾಡಿಕೊಳ್ಳುತ್ತಿಲ್ಲ. ಗುತ್ತಿಗೆ ಆಧಾರದಲ್ಲಿ ಕಾರ್ಮಿಕರು, ಸಿಬ್ಬಂದಿ ಸಿಗುತ್ತಿಲ್ಲ. ಇದು ಅಧಿಕಾರಿಗಳಿಗೆ, ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ. ಕೆಲವೊಮ್ಮೆ ಕಸ ಗುಡಿಸಲು ಜನ ಸಿಗುವುದಿಲ್ಲ. ನಿಗದಿತ ವೇತನ ಫಿಕ್ಸ್ ಮಾಡಿದರಷ್ಟೇ ಜನ ಕೆಲಸಕ್ಕೆ ಬರುತ್ತಾರೆ. ಹೀಗಾಗಿ, ಧಾರ್ಮಿಕ ದತ್ತಿ ಇಲಾಖೆ ಮಧ್ಯಪ್ರವೇಶಿಸಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು ಎಂದು ಸುದ್ದಿ ಬಿಡುಗಡೆ ಜತೆ ಮಾತನಾಡಿದ ಸಮಿತಿ ಮಾಜಿ ಸದಸ್ಯರೊಬ್ಬರು ಒತ್ತಾಯಿಸುತ್ತಾರೆ.
೧ ಕೆಜಿ ಗಂಟೆ ಮೌಲ್ಯವೆಷ್ಟು?
ಹಿಂದಿನ ಹರಾಜಿನಲ್ಲಿ ೧ ಕಿಲೋ ಗಂಟೆಯನ್ನು ರೂ. ೩೧೭ಕ್ಕೆ ಮಾರಾಟ ಮಾಡಲಾಗಿತ್ತು. ನಂತರ, ಟೆಂಡರ್ ಕರೆದಿದ್ದಾಗ ರೂ. ೪೨೫ಕ್ಕೆ ನೀಡಲು ಓರ್ವ ಉದ್ಯಮಿ ಒಪ್ಪಿದ್ದರು. ಆದರೆ, ಅದು ಪೂರ್ಣಗೊಳ್ಳಲಿಲ್ಲ. ಹೊಸ ಟೆಂಡರ್ ಕರೆದರೆ ರೂ.೫೦೦ ನಿಗದಿ ಮಾಡಬಹುದು. ಅದು ನಿಗದಿಯಾದರೆ ೫೦ ಟನ್ ಗಂಟೆಯ ಒಟ್ಟು ಬೆಲೆ ರೂ. ೨,೫೦,೦೦,೦೦೦ ಆಗಲಿದೆ. ಗಂಟೆಗಳ ಮೂಲ ಬೆಲೆ ಕೆಜಿಗೆ ರೂ. ೮೨೫ ಎಂದು ಮಾಜಿ ಸದಸ್ಯರೊಬ್ಬರು ಹೇಳಿದ್ದಾರೆ.
ಬಿಡ್ಡರ್ಗಳು ಬರಲಿಲ್ಲ
ಈ ಹಿಂದೆ ೨ ಬಾರಿ ಟೆಂಡರ್ ಕರೆದಿದ್ದೆವು. ಆದರೆ ಬಿಡ್ಡರ್ಗಳು ಯಾರೂ ಮುಂದೆ ಬಂದಿರಲಿಲ್ಲ. ಗಂಟೆಗಳನ್ನು ಹರಾಜು ಹಾಕಬೇಕು ಎನ್ನುವುದು ನಮ್ಮ ಆಶಯವೂ ಹೌದು. ಇದಕ್ಕಾಗಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮತ್ತೊಮ್ಮೆ ಪತ್ರ ಮುಖೇನ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದ ಅನುಮತಿಗಾಗಿ ಕಾಯುತ್ತಿzವೆ. ಹಿಂದಿನ ೨ ಬಾರಿ ತಾಂತ್ರಿಕ ತೊಂದರೆಗಳು ಬಂದಿರಲಿಲ್ಲ. ಬಿಡ್ಡರ್ಗಳು ಇಲ್ಲದ ಕಾರಣ ಪ್ರಕ್ರಿಯೆ ಪೂರ್ಣಗೊಂಡಿರಲಿಲ್ಲ. ಹೊಸ ವ್ಯವಸ್ಥಾಪನಾ ಸಮಿತಿ ಯಾವಾಗ ರಚನೆಯಾಗುತ್ತದೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಸರ್ಕಾರ ನಿರ್ಧರಿಸಬೇಕು.
-ಕೆ.ವಿ. ಶ್ರೀನಿವಾಸ, ಮುಖ್ಯಕಾರ್ಯನಿರ್ವಹಣಾಧಿಕಾರಿ, ಸೌತಡ್ಕ ದೇವಸ್ಥಾನ,
ಬೇಕಾಬಿಟ್ಟಿ ಬಿದ್ದಿರುವ ಗಂಟೆಗಳು
“ಗಂಟೆಗಳು ಯಾವುದೇ ವ್ಯವಸ್ಥೆಯಿಲ್ಲದೆ ರಾಶಿರಾಶಿ ಬಿದ್ದಿವೆ. ಮೂರು ವರ್ಷ ಅಧಿಕಾರದಲ್ಲಿದ್ದಾಗ ಹಿಂದಿನ ಸಮಿತಿಯವರು ಏನಾದರೂ ವ್ಯವಸ್ಥೆ ಮಾಡಬಹುದಿತ್ತು. ಸಮಿತಿಯವರಿಗೆ ಆಗುವುದಿಲ್ಲ ಎಂದರೆ ಅಧಿಕಾರಿಗಳ ಕೈಯಿಂದ ಮಾಡಿಸಬಹುದಿತ್ತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ ಸಹಿ ಹಾಕಲು ಮಾತ್ರ ಅಧಿಕಾರ. ವಿಲೇವಾರಿಯ ಪೂರ್ಣ ಜವಾಬ್ದಾರಿ ಅಧಿಕಾರಿಗಳಿಗೆ ಮಾತ್ರ ಇರುವುದು. ದೇವರಿಗೆ ಭಕ್ತಿಯಿಂದ ಬರುವ ಗಂಟೆ ಬೇಕಾಬಿಟ್ಟಿ ಬಿದ್ದಿರುವುದು ವಿಪರ್ಯಾಸ”
- ವಿಶ್ವನಾಥ ಪೂಜಾರಿ ಕೊಲ್ಲಾಜೆ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ
ಕಳಪೆ ಗುಣಮಟ್ಟದ ಗಂಟೆ
ಸೌತಡ್ಕ ದೇವಸ್ಥಾನದಲ್ಲಿ ಟ್ರಸ್ಟ್ವೊಂದಿದ್ದು, ಅದರ ವ್ಯಾಪ್ತಿಯಲ್ಲಿರುವ ಅಂಗಡಿಯಲ್ಲಿ ಮಾರಾಟವಾಗುವ ಗಂಟೆಗಳು ಕಳಪೆ ಗುಣಮಟ್ಟದ್ದಾಗಿವೆ. ಅದರಲ್ಲಿ ಹಿತ್ತಾಳೆ ಅಂಶ ಕಡಿಮೆ. ಭಕ್ತರು ಅಲ್ಲಿಂದ ಖರೀದಿಸುತ್ತಾರೆ. ಮೂರು ವ?ದಿಂದ ಟೆಂಡರ್ ಕರೆದರೂ ಗುಣಮಟ್ಟ ಕಳಪೆಯಾದ್ದರಿಂದ ಯಾರೂ ಬಿಡ್ ಮಾಡಲು ಮುಂದಾಗುತ್ತಿಲ್ಲ ಎಂದು ಗುತ್ತಿಗೆದಾರರೇ ಹೇಳಿದ್ದಾರೆ.
ಸುಬ್ರಮಣ್ಯ ಶಬರಾಯ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ
ಪೂರ್ಣ ಪ್ರಯತ್ನ
“ಹಳೆ ಸಮಿತಿ ಅವಧಿ ಮುಗಿದ ವೇಳೆ ೪೬-೪೭ ಟನ್ ಸ್ಟಾಕ್ ಇತ್ತು. ಇದು ೧ ವರ್ಷದಲ್ಲಿ ೫೦-೫೫ ಟನ್ಗೆ ಏರಿಕೆಯಾಗಿರಬಹುದು. ಗಂಟೆ ವಿಲೇವಾರಿಗೆ ನಾವು ಪೂರ್ಣ ಪ್ರಯತ್ನ ಮಾಡಿzವೆ. ೨ ಬಾರಿ ಟೆಂಡರ್ ಪ್ರಕ್ರಿಯೆ ಕೂಡ ಆರಂಭ ಕೂಡ ಆಗಿತ್ತು”
ಹರೀಶ್ ರಾವ್ ಮುಂಡ್ರುಪ್ಪಾಡಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ
“ದೊಡ್ಡ ಮೊತ್ತದ ಬೃಹತ್ ಪ್ರಮಾಣದ ಗಂಟೆ ಹರಾಜು ಪ್ರಕ್ರಿಯೆ ನಡೆಯಬೇಕಿರುವುದರಿಂದ ಅದು ಉನ್ನತ ಶ್ರೇಣಿಯ ಅಧಿಕಾರಿಗಳ ಸಮ್ಮುಖ ಮತ್ತು ವಿಡಿಯೋ ರೆಕಾರ್ಡಿಂಗ್ ಮೂಲಕವೇ ಆಗಬೇಕು”
– ಪ್ರಶಾಂತ್ ಪೂವಾಜೆ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ