ಬೆಳ್ತಂಗಡಿ: ಅಕ್ಷರದವ್ವ ಮಾತೆ ಸಾವಿತ್ರಿ ಬಾ ಪುಲೆಯವರ 194 ನೇ ಜನ್ಮದಿನಾಚರಣೆ ಹಾಗೂ ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ಭೂಮಿಯ ಪರಿಕಲ್ಪನೆಯನ್ನು ಇಟ್ಟುಕೊಂಡು ಸಮಾಜಸೇವಾ ಮನೋಭಾವನೆಯ ಸತ್ಯ ಶೋಧಕ ವೇದಿಕೆ ಎಂಬ ನೂತನ ತಂಡದ ಉದ್ಘಾಟನೆ ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ಜ. 5 ರಂದು ಬೆಳಿಗ್ಗೆ 11.30 ಕ್ಕೆ ಸರಿಯಾಗಿ ನಡೆಯಿತು.
ಪ್ರಾರಂಭದಲ್ಲಿ ಚುನಾವಣೆ ಮೂಲಕ ನೂತನ ತಂಡದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅದರಂತೆ ಅಧ್ಯಕ್ಷ ಸುಕೇಶ್ ಕೆ. ಮಾಲಾಡಿ, ಉಪಾಧ್ಯಕ್ಷ ವಿಶ್ವನಾಥ ಕಳೆಂಜ, ಕಾರ್ಯದರ್ಶಿ ಗಿರೀಶ್ ಪಣಕಜೆ ಹಾಗೂ ಕೋಶಾಧಿಕಾರಿ ರಂಜಿತ್ ಹಾರಬೆ ಆಯ್ಕೆಯಾದರು.
ತಂಡದ ಹೆಸರು ಹಾಗೂ ಲೋಗೋ ಬಿಡುಗಡೆ ಮಾಡಲಾಯಿತು. ಎಸ್. ವಿ. ಎಸ್. ಶಾಲೆ ಬಂಟ್ವಾಳ ಶಿಕ್ಷಕಿ ಪೂರ್ಣಿಮಾ ಉದ್ಘಾಟಿಸಿ, ಹೊಸ ತಂಡವು ನಿಂತ ನೀರಾಗದೆ ಸರ್ವರಿಗೂ ಸಮಪಾಲು, ಸಮಬಾಳು ಎಂಬಂತೆ ಎಲ್ಲರ ಬದುಕಿಗೂ ಸಂಪರ್ಕ ಸೇತುವೆ ಆಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಾಗರೀಕ ಸೇವಾ ಟ್ರಸ್ಟ್ ನ ಅಧ್ಯಕ್ಷ ಸೋಮನಾಥ ನಾಯಕ್ ವೇದಿಕೆಯ ಯುವ ಕಾರ್ಯಕರ್ತರು ಶೋಷಣೆಗೊಳಗಾದ ದಲಿತರಿಗೆ ಸರಕಾರದಿಂದ ಭೂಮಿ ಕೊಡಿಸುವ ನಿಟ್ಟಿನಲ್ಲಿ ಹೋರಾಟ ನಿರಂತರವಾಗಿರಲಿ ಭೂಮಿ ಇಲ್ಲದ ಅರ್ಹ ಕುಟುಂಬಗಳಿಗೆ ಭೂಮಿ ದೊರಕಿಸಿಕೊಡವಲ್ಲಿ ತಮ್ಮ ಪ್ರಯತ್ನ ಇರಲಿ, ನಿಮ್ಮೊಂದಿಗೆ ನಾಗರೀಕ ಸೇವಾ ಟ್ರಸ್ಟ್ ಸದಾ ಇರುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿದ್ದ ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯಶೇಖರ್ ಕುಕ್ಕೇಡಿ ಮಾತನಾಡುತ್ತಾ ಹೊಸ ತಂಡದ ಹೆಸರಿನ ಬಗ್ಗೆ ನನಗೂ ಕುತೂಹಲವಿತ್ತು. ಚಳುವಳಿಯ ಭಾಗದ ಹೆಸರನ್ನೆ ತೆಗೆದುಕೊಂಡು ಹೊಸ ಹೆಜ್ಜೆಯನ್ನು ಇಟ್ಟ ಈ ಯುವ ತಂಡಕ್ಕೆ ಶುಭವಾಗಲೀ ಎಂದು ಹಾರೈಸಿದರು. ಪುತ್ತೂರು ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ವೆಂಕಪ್ಪ ಪಿ. ಎಸ್. ರವರು ಸಹೋದರತೆ ಸಮಾನತೆ ಧ್ಯೇಯದೊಂದಿಗೆ ಚಳುವಳಿ ನಿರಂತರವಾಗಲಿ ಹಾರೈಸಿದರು. ಈ ನಡುವೆ ಸಾವಿತ್ರಿ ಬಾ ಪುಲೆ ಜನ್ಮದಿನಾಚರಣೆಯ ಅಂಗವಾಗಿ ಬೆಳ್ತಂಗಡಿ ತಾಲೂಕಿನ ಶಿಕ್ಷಕಿಯರನ್ನು ಅಭಿನಂದಿಸಲಾಯಿತು. ಬೆಳಿಗ್ಗೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಾಡಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಯೋಗಿನಿ ಮಚ್ಚಿನ ನಿರೂಪಿಸಿ, ಸತೀಶ್ ಉಜಿರೆ ಸ್ವಾಗತಿಸಿ, ಗಿರೀಶ್ ಪಣಕಜೆ ಧನ್ಯವಾದವಿತ್ತರು.