ಬಂದಾರು: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ 17 ವರ್ಷ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇದೀಗ ವರ್ಗಾವಣೆಗೊಂಡಿರುವ ರಾಜ್ಯಮಟ್ಟದ ‘ಅಕ್ಷರ ಸಿರಿ’ ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪ್ರಶಾಂತ್ ಸುವರ್ಣರಿಗೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಭಾವನಾತ್ಮಕ ಬೀಳ್ಕೊಡುಗೆ ಸಮಾರಂಭ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಡಿ. 15 ರಂದು ಜರಗಿತು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಉಮೇಶ್ ಗೌಡ ಅಧ್ಯಕ್ಷತೆಯಲ್ಲಿ ನೆರವೇರಿದ ಸಮಾರಂಭವನ್ನು ಗ್ರಾಮಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಕಂಡಿಗ ಉದ್ಘಾಟಿಸಿ ಮಾತನಾಡಿ ಶಾಲಾ ವಿದ್ಯಾರ್ಥಿಗಳ ಕ್ರೀಡಾ ಸಾಧನೆ, ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್ ಹಾಗೂ ಶಿಕ್ಷಕ ವೃಂದದ ಶ್ರಮವನ್ನು ನೆನಪಿಸಿಕೊಂಡು ಶ್ಲಾಘಿಸಿ ಶುಭ ಹಾರೈಸಿದರು.
ದೈ. ಶಿ. ಶಿಕ್ಷಕರಾಗಿ 17 ವರ್ಷಗಳ ಸುಧೀರ್ಘ ಸೇವಾವಧಿಯುದ್ದಕ್ಕೂ ವಿದ್ಯಾರ್ಥಿಗಳನ್ನು ಕಷ್ಟಪಟ್ಟು ತರಬೇತಿಗೊಳಿಸಿ ಆತ್ಮಸ್ಥೈರ್ಯ ತುಂಬಿ ಸಂಕಷ್ಟಗಳ ಮಧ್ಯೆ ರಾಜ್ಯ, ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಪ್ರಶಾಂತ್ ಅವರನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘ ಹಾಗೂ ಶಿಕ್ಷಕ ವೃಂದದ ವತಿಯಿಂದ ಶಾಲು ಹೊದಿಸಿ, ಪೇಟಾ ಇಟ್ಟು, ಉಂಗುರ ತೊಡಿಸಿ ಅಭಿನಂದಿಸಿ ಸನ್ಮಾನಿಸಿ ಭಾವನಾತ್ಮಕವಾಗಿ ಬೀಳ್ಕೊಡಲಾಯಿತು.
ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಶಾಂತ್ ಸುವರ್ಣ ಮಾತನಾಡಿ ತಮ್ಮ ಸೇವಾವಧಿಯಲ್ಲಿ ವಿದ್ಯಾರ್ಥಿಗಳನ್ನು ಹಂತ ಹಂತವಾಗಿ ಸತತವಾಗಿ ತರಬೇತುಗೊಳಿಸುವಲ್ಲಿ ಆರ್ಥಿಕವಾಗಿ ಬೆಂಬಲವಾಗಿ ನಿಂತ ದಾನಿಗಳನ್ನು, ಪೋಷಕರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.
ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಉದಯ ಕುಮಾರ್ ಬಿ. ಕೆ. ಮಾತನಾಡಿ ಪ್ರಶಾಂತ್ ಸುವರ್ಣ ಅವರ ಸರಳ ಸಜ್ಜನಿಕೆಯ ಸ್ನೇಹಮಯಿ ವ್ಯಕ್ತಿತ್ವವನ್ನು ಪ್ರಸ್ತಾಪಿಸುತ್ತಾ ವಿದ್ಯಾರ್ಥಿಗಳನ್ನು ಕ್ರೀಡಾ ಸಾಧನೆಗೆ ತರಬೇತಿಗೊಳಿಸಿದ ರೀತಿ, ಅವರ ವೃತ್ತಿ ಶ್ರದ್ಧೆಯ ಬಗ್ಗೆ ಕೊಂಡಾಡಿ ಅವರನ್ನು ಶಾಲೆಯಿಂದ ಬೀಳ್ಕೊಡುತ್ತೇವೆ ಆದರೆ ಹೃದಯದಿಂದ ಬೀಳ್ಕೊಡಲು ಸಾಧ್ಯವಿಲ್ಲ ಎಂದರು.
ಪದ್ಮುಂಜ ಸಹಕಾರ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಎಸ್. ಡಿ. ಎಂ.ಸಿ ಮಾಜಿ ಅಧ್ಯಕ್ಷ ಉದಯ ಭಟ್ ಕೊಳಬೆ, ಮುಂಡಾಜೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಗುಣಪಾಲ್, ಶಿಕ್ಷಕ ಅನಂತ್ ಮಾತನಾಡಿ ಪ್ರಶಾಂತ್ ಸುವರ್ಣ ಅವರೊಂದಿಗಿನ ಕ್ರೀಡಾ ಒಡನಾಟವನ್ನು ಮೆಲುಕು ಹಾಕಿ ಶುಭಹಾರೈಸಿದರು.
ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ವಿಶ್ವನಾಥ ಎಂ. ಯು. ಮಾತನಾಡಿ ಪ್ರಶಾಂತ್ ಅವರು ಒಂದು ಹಿಂದುಳಿದ ಗ್ರಾಮೀಣ ಶಾಲೆಯನ್ನು ತಾಲೂಕು, ಜಿಲ್ಲೆ ವಿಭಾಗ, ರಾಜ್ಯ ಮಾತ್ರ ರಾಷ್ಟ್ರಮಟ್ಟದಲ್ಲಿ ಗುರುತಿಸುವಷ್ಟರಮಟ್ಟಿಗೆ ಪರಿಶ್ರಮ, ಪರಾಕ್ರಮದಿಂದ ವಿದ್ಯಾರ್ಥಿಗಳನ್ನು ಪ್ರತಿದಿನ ಕಠಿಣ ತರಬೇತಿಗೊಳಿಸಿ ತಂಡವನ್ನು ಸಮರ್ಥವಾಗಿ ಕ್ರೀಡಾಂಗಣದಲ್ಲಿ ಸಮರ್ಥವಾಗಿ ಧೈರ್ಯವಾಗಿ ಸವಾಲು ಎದುರಿಸುವಲ್ಲಿ ಸಜ್ಜುಗೊಳಿಸಿ ಸಾಧನೆಯೊಂದಿ ಕೀರ್ತಿ ತರವಲ್ಲಿ ಅಪಾರ ಪರಿಶ್ರಮಪಟ್ಟಿದ್ದಾರೆ. ಇಂದು ಬಂದಾರು ಶಾಲೆ ಇಡೀ ರಾಜ್ಯದಲ್ಲೇ ಗುರುತಿಸುವಂತಿದ್ದರೆ ಇದರ ಹಿಂದೆ ವಿದ್ಯಾರ್ಥಿಗಳ ಜೊತೆ ಇವರ ಪರಿಶ್ರಮವಿದ್ದು ಇವರಿಗೆ ಚಿರ ಋಣಿಗಳಾಗಿದ್ದೇವೆ ಎಂದು ಶುಭ ಹಾರೈಸಿದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ಬಾಸ್ ಬಟ್ಲಡ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳನ್ನು ರಾಷ್ಟ್ರಮಟ್ಟದಲ್ಲಿ ಮಿಂಚುವಂತೆ ಮಾಡಿ ಶಾಲೆಯ ಕೀರ್ತಿಯನ್ನು ಎತ್ತರಕ್ಕೇರಿಸಿ ಊರವರ ಹೆಮ್ಮೆಗೆ ಪಾತ್ರರಾಗಿರುವ ಬಗ್ಗೆ ಪ್ರಶಾಂತ್ ಮತ್ತು ವಿದ್ಯಾರ್ಥಿಗಳ ಕ್ರೀಡಾ ಸಾಧನೆಯನ್ನು ನೆನಪಿಸಿ ಅಭಿನಂದಿಸಿ ಊರ ವಿದ್ಯಾಭಿಮಾನಿಗಳ ತನು ಮನ ಧನಗಳ ಸಂಪೂರ್ಣ ಸಹಕಾರವನ್ನು ಸ್ಮರಿಸಿದರು.
ಈ ಸಂದರ್ಭ ಮೆಸ್ಕಾಂ ಪವರ್ ಮ್ಯಾನ್ ಆಗಿದ್ದು ಭಡ್ತಿಯೊಂದಿಗೆ ವರ್ಗಾವಣೆಗೊಂಡ ಸಂದೀಪ್ ಅವರ ಸ್ಥಳೀಯ ನಿಷ್ಠೆಯ ಸೇವಾವಧಿಗೆ ಕೃತಜ್ಞತಾ ಪೂರ್ವಕವಾಗಿ ಸನ್ಮಾನಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಸುಂದರ ಗೌಡ, ಸ್ಥಳೀಯ ಅರಣ್ಯ ರಕ್ಷಕ ಜಗದೀಶ್, ಛಾಯಗ್ರಾಹಕ ಚಂದ್ರಶೇಖರ್ ಅವರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪಾವತಿ, ಸದಸ್ಯ ಚೇತನ್, ಸಿ. ಎ. ಬ್ಯಾಂಕ್ ಉಪಾಧ್ಯಕ್ಷ ಅಶೋಕ್ ಪಾಂಜಾಳ, ಎಸ್. ಡಿ. ಎಂ. ಸಿ ಮಾಜಿ ಅಧ್ಯಕ್ಷ ಶ್ರೀಲತಾ, ಜಾರಪ್ಪ ಗೌಡ, ಎಸ್. ಕೆ. ಡಿ. ಆರ್. ಡಿ. ಪಿ ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷೆ ವಿಜಯ ಬರೆಮೇಲು ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಮಂಜುಶ್ರೀ, ವಿನುತಾ, ಚಂದ್ರಕಲಾ ರೇಷ್ಮಾ, ರೇಖಾ ಎಂ., ದೀಪಿಕಾ, ವಿನುತಾ ಪಿ ವಿವಿಧ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾರ್ಗದರ್ಶನ ನೀಡಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ಮೋಹನ್ ವೈ.ಇ. ಕಾರ್ಯಕ್ರಮ ನಿರೂಪಿಸಿ, ವಿಶ್ವನಾಥ್ ಯಂ.ಯು. ವಂದಿಸಿದರು.