ಶಸ್ತ್ರಸಜ್ಜಿತ ನಕ್ಸಲರ ತಂಡ ಪತ್ತೆ: ಕುತ್ಲೂರು, ನಾರಾವಿಯಲ್ಲಿ ಎಎನ್‌ಎಫ್ ಹೈ ಅಲರ್ಟ್! – ಕೂಂಬಿಂಗ್ ಚುರುಕು ಪೊಲೀಸರ ಸಾಥ್ ಶ್ವಾನದಳ, ಡ್ರೋನ್ ನೆರವು

0

ಬೆಳ್ತಂಗಡಿ ಮತ್ತು ಕಾರ್ಕಳ ತಾಲೂಕಿನ ಗಡಿ ಭಾಗವಾದ ಈದು ಸಮೀಪದ ಬೊಳ್ಳೆಟ್ಟುವಿನಲ್ಲಿ ನಕ್ಸಲ್ ಚಟುವಟಿಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ದಳ ಕೂಂಬಿಂಗ್ ಕಾರ್ಯಾಚರಣೆ ಮತ್ತಷ್ಟು ಬಿಗುಗೊಳಿಸಿದೆ. ಕುತ್ಲೂರು, ನಾರಾವಿ ಪರಿಸರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು ನಕ್ಸಲ್ ನಿಗ್ರಹ ಪಡೆಯ ಕಾರ್ಯಾಚರಣೆಗೆ ಪೊಲೀಸರು ಕೈ ಜೋಡಿಸಿದ್ದಾರೆ. ರಾಜ್ಯದ ಮೊದಲ ನಕ್ಸಲ್ ಎನ್‌ಕೌಂಟರ್ ನಡೆದ ಪಶ್ಚಿಮಘಟ್ಟದ ತಪ್ಪಲಿನ ಈದು ಗ್ರಾಮದ ಬೊಲ್ಲೊಟ್ಟುವಿನಿಂದ ಒಂದು ಕಿಲೋ ಮೀಟರ್ ದೂರದ ಮುಸ್ಲಿಂ ಕಾಲೋನಿ ಬಳಿಯಿರುವ ಬಂಡೆಕಲ್ಲು ಬಳಿ ನಾಲ್ವರು ಶಸ್ತ್ರಸಜ್ಜಿತ ಯುವಕರ ತಂಡ ಹಾಡಹಗಲೇ ಕಾಣಿಸಿಕೊಂಡ ಬಗ್ಗೆ ಸುದ್ದಿಗಳು ಗ್ರಾಮದ ಜನರಲ್ಲಿ ಹರಿದಾಡುತ್ತಿದ್ದಂತೆಯೇ ಪೊಲೀಸ್ ಇಲಾಖೆ ಹಾಗೂ ಎಎನ್‌ಎಫ್ ತನಿಖೆ ಚುರುಕುಗೊಳಿಸಿದೆ. ಸುಮಾರು ೩೦ರಿಂದ ೪೦ ವರ್ಷ ವಯಸ್ಸಿನ ಯುವಕರು ನಕ್ಸಲರ ತಂಡದಲ್ಲಿದ್ದು ಹಾಡಹಗಲೇ ಕಾಣ ಸಿಕ್ಕಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಯಲಾಗುತ್ತಿದ್ದಂತೆಯೇ ಜನರು ಆತಂಕಕ್ಕೊಳಗಾಗಿದ್ದಾರೆ. ಕಾಡುತ್ಪತ್ತಿ ಸಂಗ್ರಹಕ್ಕೆ ತೆರಳಿದ್ದವರಿಗೆ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂಬ ವಿಚಾರ ಪ್ರಚಾರ ಆಗುತ್ತಿದ್ದಂತೆಯೇ ನಕ್ಸಲ್ ನಿಗ್ರಹ ಪಡೆ ಮತ್ತು ಪೊಲೀಸ್ ಇಲಾಖೆ ಸ್ಥಳೀಯ ನಿವಾಸಿಗಳು ಹಾಗೂ ಕಾಡಂಚಿನ ಸಮೀಪ ವಾಸವಿರುವವರ ಬಳಿ ಮಾಹಿತಿ ಪಡೆಯುವ ಪ್ರಯತ್ನ ನಡೆಸಿದೆ. ನಕ್ಸಲ್ ನಿಗ್ರಹದಳ ಶ್ವಾನದಳ ಹಾಗೂ ಡ್ರೋನ್ ನೆರವಿನಿಂದ ಕಾರ್ಕಳ ಹಾಗೂ ಬೆಳ್ತಂಗಡಿ ತಾಲೂಕಿನ ಪೊಲೀಸರ ಜತೆ ಕಾರ್ಯಾಚರಣೆ ನಡೆಸುತ್ತಿದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳ ವೇಳೆ ರಾಮಪತ್ರೆ ಕಾಯಿ ಕೊಯ್ಯುವ ಸಮಯವಾಗಿದ್ದು ಪಶ್ಚಿಮಘಟ್ಟಗಳ ಸಾಲಿನ ಕುದುರೆಮುಖ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರ ಗಮನ ಬೇರೆಡೆಗೆ ಸೆಳೆದು ಕಾಡುತ್ಪತ್ತಿ ಸಂಗ್ರಹಿಸುವ ಸಲುವಾಗಿ ನಕ್ಸಲ್ ಚಟುವಟಿಕೆಗಳ ಕುರಿತು ಅಪಪ್ರಚಾರ ನಡೆಸಿರುವ ಸಾಧ್ಯತೆಯೂ ಇದೆ ಎಂಬ ಸಂಶಯ ಪೊಲೀಸರಿಂದ ವ್ಯಕ್ತವಾಗಿದೆ. ಈದು ಗ್ರಾಮದಲ್ಲಿ ನಕ್ಸಲ್ ಹೆಜ್ಜೆ ಗುರುತು ಪತ್ತೆ ಕಾಡಿಚ್ಚಿನಂತೆ ಹರಡಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಪೊಲೀಸರು ಹಾಗೂ ಎಎನ್‌ಎಫ್ ಅಧಿಕಾರಿಗಳು ಸತತ ಕಾರ್ಯಾಚರಣೆ ನಡೆಸುತ್ತಿದ್ದು ಸಾರ್ವಜನಿಕರು ಅನವಶ್ಯಕ ಆತಂಕಕ್ಕೊಳಗಾಗುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ. ಈ ಮಧ್ಯೆ ಧರ್ಮಸ್ಥಳ ಗ್ರಾಮದ ನಿವಾಸಿಯೋರ್ವರನ್ನು ಭೇಟಿಯಾಗಲು ಬಂದಿದ್ದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಈರ್ವರು ಶಂಕಿತ ನಕ್ಸಲರನ್ನು ಪೊಲೀಸ್ ಇಲಾಖೆ ಮತ್ತು ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಕಸ್ತೂರಿ ರಂಗನ್ ವರದಿಯ ವಿರುದ್ಧ ಜನರ ಹೋರಾಟ ತೀವ್ರಗೊಳ್ಳುತ್ತಿರುವಂತೆಯೇ ದಶಕಗಳ ಬಳಿಕ ಮಲೆನಾಡಿನಲ್ಲಿ ನಕ್ಸಲರ ಸದ್ದು ಮತ್ತೆ ಹೆಚ್ಚಾಗಿದೆ ಎಂಬ ಸುದ್ದಿಯ ನಡುವೆಯೇ ಇದೀಗ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನಿವಾಸಿಯೋರ್ವರನ್ನು ನಕ್ಸಲರು ಭೇಟಿಯಾಗಿದ್ದಾರೆ ಎಂಬ ಮಾಹಿತಿ ಜನರನ್ನು ಬೆಚ್ಚಿ ಬೀಳಿಸಿದೆ. ನಕ್ಸಲ್ ಪರ ಚಿಂತನೆ ಹೊಂದಿರುವ ಧರ್ಮಸ್ಥಳ ನಿವಾಸಿಯನ್ನು ಶಂಕಿತ ನಕ್ಸಲರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಗುಪ್ತಚರ ಇಲಾಖೆ ವರದಿ ನೀಡಿದ ಬೆನ್ನಲ್ಲಿಯೇ ಕಾರ್ಯಾಚರಣೆಗೆ ಇಳಿದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಠಾಣಾ ಪೊಲೀಸರು ಹಾಗೂ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿಗಳು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಈರ್ವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯ ಉಡುಪಿ ಜಿಲ್ಲೆಯ ಕಾರ್ಕಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಡಿ ಭಾಗದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂಬ ವಿಚಾರ ಪ್ರಚಾರ ಆದ ಕೂಡಲೇ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಮತ್ತು ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳು ವಿವಿಧೆಡೆ ಕೂಂಬಿಂಗ್ ನಡೆಸಿದ್ದು ಶೃಂಗೇರಿ ತಾಲೂಕಿನ ನೆಮ್ಮಾರ್ ಸಮೀಪದ ಬುಕಡಿಬೈಲಿನಲ್ಲಿ ನಕ್ಸಲರ ಬಗ್ಗೆ ಸಹಾನುಭೂತಿ ಹೊಂದಿರುವ ಇಬ್ಬರನ್ನು ಶೃಂಗೇರಿ ಠಾಣೆಗೆ ಕರೆದೊಯ್ದು ವಿಚಾರಣೆಗೊಳಪಡಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಮಲೆನಾಡಿನ ಸಮಸ್ಯೆಗಳು ನಕ್ಸಲರನ್ನು ಸ್ವಾಗತಿಸಿತ್ತು!: ಕಳೆದ ಲೋಕಸಭಾ ಚುನಾವಣೆಯ ವೇಳೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಐನೆಕಿದುವಿನ ಮನೆಯೊಂದಕ್ಕೆ ನಾಲ್ವರು ನಕ್ಸಲರು ಭೇಟಿ ನೀಡಿದ್ದ ವೇಳೆ ಪೊಲೀಸರು ಮತ್ತು ಎನ್‌ಎನ್‌ಎಫ್‌ಗೆ ಮಾಹಿತಿ ಹೋಗಿತ್ತು. ತುರ್ತು ಕಾರ್ಯಾಚರಣೆ ನಡೆಸಿದರೂ ನಕ್ಸಲರನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ದಶಕದ ಹಿಂದೆ ನಕ್ಸಲರಿಗೆ ಮಲೆನಾಡಿನ ಸಮಸ್ಯೆಗಳೇ ರತ್ನಗಂಬಳಿ ಹಾಸಿ ಸ್ವಾಗತಿಸಿದ್ದವು. ರಾಜ್ಯದ ಪಶ್ಚಿಮಘಟ್ಟ ಶ್ರೇಣಿಯಲ್ಲಿ ನಕ್ಸಲರಿದ್ದಾರೆ ಎಂಬುದು ಗೊತ್ತಾಗಿದ್ದು ೨೦೦೨ರ ಆಸುಪಾಸಿನಲ್ಲಿ. ಅಲ್ಲಿಂದಾಚೆಗೆ ಇಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಿ ನಕ್ಸಲರು ಪ್ರಥಮ ಹಂತದಲ್ಲಿ ಅನುಕಂಪ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ ಒಕ್ಕಲೆಬ್ಬಿಸುವುದು, ಜಲ ವಿದ್ಯುತ್ ಯೋಜನೆ, ಎತ್ತಿನಹೊಳೆ ಯೋಜನೆ, ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆ, ಪರಿಸರ ಅತೀ ಸೂಕ್ಷ್ಮ ವಲಯದ ಪರಿಸರ ಗಾಡ್ಗೀಳ್ ವರದಿ, ಕಸ್ತೂರಿರಂಗನ್ ವರದಿ, ಪುಷ್ಪಗಿರಿ ವನ್ಯಜೀವಿ ವಿರುದ್ಧದ ಅಪಸ್ವರ-ವಿರೋಧಗಳು ಇದಕ್ಕೆ ನೆಲೆಯಾಗಿದ್ದವು. ಇದೀಗ ನಕ್ಸಲರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನಗಳು ನಡೆಯುತ್ತಿದೆ. ಶಸ್ತ್ರ ತ್ಯಜಿಸಿ ಬರುವವರಿಗೆ ವಿವಿಧ ಕೆಟಗರಿಯಿಡಿ ೭.೫ ಲಕ್ಷ ರೂ.ವರೆಗೂ ಪ್ಯಾಕೇಜ್ ನೀಡಲಾಗುತ್ತಿದೆ.
ಸುಬ್ರಹ್ಮಣ್ಯದಿಂದ ಬಂದಿದ್ದರೇ?: ಸುಮಾರು ಆರು ತಿಂಗಳ ಹಿಂದೆ ಕೊಡಗು-ದಕ್ಷಿಣ ಕನ್ನಡ ಗಡಿಯ ಮೂಲಕ ಸುಬ್ರಹ್ಮಣ್ಯ ಅರಣ್ಯ ಪ್ರದೇಶದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದರು. ೨-೩ ಬಾರಿ ಇಲ್ಲಿನ ಪ್ರದೇಶದಲ್ಲಿ ಬೇರೆ ಬೇರೆ ೨ ಮನೆಗಳಿಗೆ ಭೇಟಿ ನೀಡಿದ್ದರು. ಈಗ ಮತ್ತೆ ಅದೇ ತಂಡ ಈದು ಭಾಗಕ್ಕೆ ಆಗಮಿಸಿದೆಯೇ ಎಂಬ ಸಂಶಯ ಇದೆ. ಸುಬ್ರಹ್ಮಣ್ಯ ಕೈಕಂಬದಿಂದ ಬಿಸಿಲೆ, ಶಿಶಿಲ, ನಾರಾವಿ ಕಾಡಿನ ಮೂಲಕ ಈದು ಸಂಪರ್ಕ ಸಾಧ್ಯವಿದೆ.
ಚುನಾವಣೆ ವೇಳೆ ಪ್ರತ್ಯಕ್ಷರಾಗಿದ್ದರು: ಕಳೆದ ಬಾರಿ ಸಾರ್ವತ್ರಿಕ ಲೋಕಸಭೆ ಚುನಾವಣೆ ಘೋಷಣೆ ಸಂದರ್ಭ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿಭಾಗದ ಪಶ್ಚಿಮಘಟ್ಟ ತಪ್ಪಲಿನಲ್ಲಿ ೪ರಿಂದ ೬ ಮಂದಿ ನಕ್ಸಲರ ಚಲನವಲನ ಕಾಣಿಸಿಕೊಂಡಿತ್ತು. ಬಳಿಕ ಬಿಗಿ ಭದ್ರತೆ, ಶೋಧ ಕಾರ್ಯಾಚರಣೆಯ ಕಾರಣ ಈ ಭಾಗದಿಂದ ಸುರಕ್ಷಿತ ಕಡೆಗೆ ತೆರಳಿರಬಹುದು ಎಂದು ಶಂಕಿಸಲಾಗಿತ್ತು. ಮೂಲಗಳ ಪ್ರಕಾರ ಶಂಕಿತ ನಕ್ಸಲರ ಪೈಕಿ ವಿಕ್ರಂಗೌಡ, ಲತಾ, ದಿಶಾ ಹಾಗೂ ಸಂತೋಷ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿತ್ತು. ಇದರಲ್ಲಿ ದಿಶಾ ಹಾಗೂ ಸಂತೋಷ್ ತಮಿಳುನಾಡಿನವರೆನ್ನಲಾಗುತ್ತಿದೆ. ಉಡುಪಿ ಜಿಲ್ಲೆ ಹೆಬ್ರಿ ಮೂಲದ ಕೂಡ್ಲು ನಾಡಾಲು ನಿವಾಸಿ ವಿಕ್ರಂಗೌಡ ಅಲಿಯಾಸ್ ಶ್ರೀಕಾಂತ್ ಕೇರಳದ ವಯನಾಡ್, ಕಲ್ಲಿಕೋಟೆಯಲ್ಲಿ ಸಕ್ರಿಯವಾಗಿರುವ ಕಬಿನಿ ದಳದ ಮುಖ್ಯಸ್ಥೆ ಲತಾ ಅಲಿಯಾಸ್ ಲೋಕಮ್ಮ ಅಲಿಯಾಸ್ ಶ್ಯಾಮಲಾ ಸಹಿತ ೬ ಮಂದಿ ನಕ್ಸಲರು ಶರಣಾಗತಿ ಬಯಸಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಅವರ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ.
ಶಿಶಿಲ, ಶಿಬಾಜೆಯಲ್ಲಿ ಕೂಂಬಿಂಗ್ ನಡೆಸಲಾಗಿತ್ತು: ಬೆಳ್ತಂಗಡಿ ತಾಲೂಕಿನ ಕುತ್ಲೂರು, ನಾರಾವಿ ಮುಂತಾದ ಪ್ರದೇಶದಲ್ಲಿ ನಕ್ಸಲರ ಚಲನವಲನ ಈ ಹಿಂದೆ ಕಂಡು ಬಂದಿತ್ತು. ಗಡಿಭಾಗವಾದ ಕಾರ್ಕಳ ತಾಲೂಕಿನ ಈದು ಪ್ರದೇಶದಲ್ಲಿ ನಕ್ಸಲರ ಚಟುವಟಿಕೆ ಹೆಚ್ಚಿತ್ತು. ಎನ್‌ಕೌಂಟರ್ ಮೂಲಕ ನಕ್ಸಲರನ್ನು ಮಟ್ಟ ಹಾಕಲಾಗಿತ್ತು.
ಮೂಲಭೂತ ಸೌಕರ್ಯಗಳನ್ನು ಪಡೆಯುವುದಕ್ಕಾಗಿ ನಾಡಿನಲ್ಲಿದ್ದ ವಿದ್ಯಾವಂತರೂ ಕಾಡಿನತ್ತ ಹೆಜ್ಜೆ ಹಾಕಿ ಕ್ರಾಂತಿಕಾರಿ ಹೋರಾಟಕ್ಕೆ ಮುಂದಾಗಿದ್ದಾರೆ, ಪ್ರಮುಖ ನಕ್ಸಲ್ ನಾಯಕರೊಂದಿಗೆ ಬೆಳ್ತಂಗಡಿ ತಾಲೂಕಿನ ಕೆಲವು ಯುವಕರು ಕಾನೂನು ಬಾಹಿರ ಕೃತ್ಯದಲ್ಲಿ ಕೈ ಜೋಡಿಸಿದ್ದಾರೆ ಎಂದು ಇಲಾಖೆ ಮಾಹಿತಿ ಸಂಗ್ರಹ ನಡೆಸಿತ್ತು.
೨೦೨೦೪ರ ಲೋಕಸಭಾ ಚುನಾವಣೆಯ ವೇಳೆ ಶಿಶಿಲ ಗ್ರಾಮದ ಕಲ್ಲಾಜೆ ಮತ್ತು ಶಿಬಾಜೆ ಗ್ರಾಮದ ಅಜಿರಡ್ಕದಲ್ಲಿ ನಕ್ಸಲರ ಪತ್ತೆಗಾಗಿ ನಕ್ಸಲ್ ನಿಗ್ರಹ ಪಡೆ ಕೂಂಬಿಗ್ ನಡೆಸಿತ್ತು. ಚುನಾವಣೆ ವೇಳೆ ಸುಳ್ಯ ತಾಲೂಕಿನಲ್ಲಿ ಕಂಡು ಬಂದಿದ್ದ ನಕ್ಸಲರು ಶಿರಾಡಿ, ಉದನೆ ಕಾಡಿನ ಮೂಲಕ ಬೆಳ್ತಂಗಡಿಗೆ ಬರುತ್ತಾರೆ ಎಂಬ ಶಂಕೆಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ, ನಕ್ಸಲರು ಪತ್ತೆಯಾಗಿರಲಿಲ್ಲ.
ಕೆಲವೆಡೆ ನಕ್ಸಲರಿಗೆ ಊರವರ ಬೆಂಬಲ ಕೊಡುತ್ತಾರೆ ಎಂಬ ಶಂಕೆ ಇಲಾಖೆಯದ್ದಾಗಿದೆ. ಇದಕ್ಕಾಗಿಯೇ ಎಎನ್‌ಎಫ್ ತೀವ್ರ ಶೋಧಕ್ಕೆ ಮುಂದಾಗಿದೆ.
ಎಸ್‌ಪಿ ನೇತೃತ್ವದಲ್ಲಿ ಶೋಧ: ನಕ್ಸಲರ ಇರುವಿಕೆ ಕಾಣಿಸಿಕೊಂಡ ವಿಚಾರ ಪ್ರಚಾರ ಆಗುತ್ತಿದ್ದಂತೆಯೇ ಎಎನ್‌ಎಫ್‌ನ ಎಸ್‌ಪಿ ಜಿತೀಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ನಾಲ್ಕು ತಂಡಗಳಿಂದ ಶೋಧ ನಡೆಯುತ್ತಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದ ಬೇರೆ ಬೇರೆ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆದಿದೆ.
ಒಂದು ತಂಡ ಸ್ಥಳೀಯ ಮನೆಗಳಿಗೂ ಭೇಟಿ ನೀಡಿ ಸ್ಥಳೀಯರ ವಿಚಾರಣೆ ಪ್ರಕ್ರಿಯೆಯನ್ನೂ ನಡೆಸಿದೆ. ನಕ್ಸಲರ ಓಡಾಟ ಶಂಕೆಯ ಸುದ್ದಿ ಹರಿದಾಡುತ್ತಿದ್ದಂತೆಯೇ ಉಡುಪಿ-ದ.ಕ. ಜಿಲ್ಲೆ ಗಡಿ ಭಾಗದ ಪಶ್ಚಿಮ ಘಟ್ಟ ತಪ್ಪಲು ಪ್ರದೇಶ ಗ್ರಾಮಗಳ ನಿವಾಸಿಗಳಲ್ಲಿ ಆತಂಕ ಉಂಟಾಗಿದೆ.

ನಕ್ಸಲ್ ನಾಯಕಿ ಮುಂಡಗಾರು ಲತಾ ನೇತೃತ್ವದಲ್ಲಿ ಸಭೆ ಲೋಕಮ್ಮ ಅಲಿಯಾಸ್ ಶ್ಯಾಮಲ ಪತ್ತೆಗೆ ಬಹುಮಾನ: ಮಲೆನಾಡು ಭಾಗದಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಚುರುಕುಗೊಂಡಿರುವುದು ಸುದ್ದಿಯಾಗುತ್ತಿರುವಂತೆಯೇ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಮುಂಡಗಾರು ಗ್ರಾಮದಲ್ಲಿ ನಕ್ಸಲರಿಗೆ ಸಂಬಂಧಿಸಿದ ಮೂರು ಬಂದೂಕುಗಳು ಪತ್ತೆಯಾಗಿದೆ. ಪಶ್ಚಿಮ ಘಟ್ಟದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ನಕ್ಸಲ್ ನಾಯಕಿ ಮುಂಡಗಾರು ಲತಾ ನೇತೃತ್ವದಲ್ಲಿ ಶೃಂಗೇರಿ ಹಾಗೂ ಕೊಪ್ಪದಲ್ಲಿ ಸಭೆ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ಹಾಗೂ ಪೊಲೀಸರು ಕೂಂಬಿಂಗ್ ಮಾಡುತ್ತಿರಬೇಕಾದರೆ ಸ್ಥಳೀಯ ವ್ಯಕ್ತಿಯೊಬ್ಬರ ಮನೆಯಲ್ಲಿ ಮೂರು ಬಂದೂಕು ಲಭಿಸಿದ್ದು ಹೆಚ್ಚಿನ ಅಲರ್ಟ್ ಘೋಷಿಸಲಾಗಿದೆ. ಆ ಮೂಲಕ ದಶಕದ ಬಳಿಕ ಮಲೆನಾಡಿನಲ್ಲಿ ನಕ್ಸಲರು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಮೂಲಗಳ ಪ್ರಕಾರ ಮಲೆನಾಡಿನಲ್ಲಿ ಸಕ್ರಿಯರಾಗಿದ್ದ ನಕ್ಸಲ್ ನಾಯಕಿ ಮುಂಡಗಾರು ಲತಾ ನೇತೃತ್ವದಲ್ಲಿ ಸಭೆ ನಡೆದಿರುವ ಬಗ್ಗೆಯೂ ಪೊಲೀಸರಿಗೆ ಸುಳಿವು ಲಭಿಸಿರುವುದಾಗಿ ವರದಿಯಾಗಿದೆ. ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್, ಸಿಐಡಿ ಎಡಿಜಿಪಿ ಪ್ರಣಬ್ ಮೊಹಂತಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜತೆಗೆ ಎಲ್ಲೆಡೆ ವ್ಯಾಪಕ ಹೈಅಲರ್ಟ್ ಘೋಷಿಸಲಾಗಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಕ್ಸಲರು ಸಭೆ ನಡೆಸಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಡೆ, ಪರಿಸರ ಅತೀ ಸೂಕ್ಷ್ಮ ವಲಯದ ಪರಿಸರ ಗಾಡ್ಗೀಳ್ ವರದಿ, ಕಸ್ತೂರಿರಂಗನ್ ವರದಿ, ಪುಷ್ಪಗಿರಿ ವನ್ಯಜೀವಿ ವಿರುದ್ಧದ ಅಪಸ್ವರ-ವಿರೋಧಗಳು ಇದಕ್ಕೆ ನೆಲೆಯಾಗಿದ್ದವು. ಇದೀಗ ನಕ್ಸಲರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನಗಳು ನಡೆಯುತ್ತಿದೆ.
ಶಸ್ತ್ರ ತ್ಯಜಿಸಿ ಬರುವವರಿಗೆ ವಿವಿಧ ಕೆಟಗರಿಯಿಡಿ ೭.೫ ಲಕ್ಷ ರೂ.ವರೆಗೂ ಪ್ಯಾಕೇಜ್ ನೀಡಲಾಗುತ್ತಿದೆ.
ಮುಂಡಗಾರು ಲತಾ ಯಾರು: ನಕ್ಸಲ್ ನಾಯಕಿ ಮುಂಡಗಾರು ಲತಾ ಕೊಪ್ಪ ತಾಲೂಕಿನವಳು. ೨೦೨೧ರಲ್ಲಿ ಬಿ.ಜಿ. ಕೃಷ್ಣಮೂರ್ತಿ ಹಾಗೂ ಪ್ರಭಾಳನ್ನು ಬಂಧಿಸಿದ ಬಳಿಕ ಮುಂಚೂಣಿಗೆ ಬಂದಿರುವ ಹೆಸರು ಮುಂಡಗಾರುನ ಲತಾ. ಕೊಪ್ಪ ತಾಲೂಕಿನ ಬುಕ್ಕಡಿ ಬೈಲಿನ ಮುಂಡಗಾರು ಲತಾಳನ್ನು ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಲೋಕಮ್ಮ ಅಲಿಯಾಸ್ ಶ್ಯಾಮಲ ಹೆಸರಿನಲ್ಲಿ ಮಲೆನಾಡಿನ ಭಾಗಗಳಲ್ಲಿ ಲತಾ ಗುರುತಿಸಿಕೊಂಡಿದ್ದಳು. ಪೊಲೀಸರು ರಿಲೀಸ್ ಮಾಡಿರುವ ಮೋಸ್ಟ್ ವಾಂಟೆಂಡ್ ಲಿಸ್ಟ್‌ನಲ್ಲಿಯೂ ಲತಾ ಕೂಡ ಒಬ್ಬಳು. ಇವಳ ಜಾಡು ಪತ್ತೆ ಮಾಡಿಕೊಟ್ಟವರಿಗೆ ಸರ್ಕಾರ ಐದು ಲಕ್ಷ ಬಹುಮಾನ ಘೋಷಿಸಿದೆ. ಲತಾ ಮಲೆನಾಡಿನಲ್ಲಿ ಬಂದೂಕು ಹೆಗಲಿಗೇರಿಸಿಕೊಂಡು ಕ್ರಾಂತಿಯ ಹಾದಿ ಹಿಡಿದಾಗ ಜನರು ಬೆಚ್ಚಿ ಬಿದ್ದಿದ್ದರು. ಪೊಲೀಸರು ಲತಾ ಬಗ್ಗೆ ಮೋಸ್ಟ್ ವಾಂಟೆಡ್ ಕರಪತ್ರ ಬಹಿರಂಗಗೊಳಿಸಿದ್ದರು. ಅಲ್ಲಿಂದ ಇಲ್ಲಿವರೆಗೂ ಭೂಗತವಾಗಿಯೇ ಇರುವ ಲತಾ ಈ ಹಿಂದೆ ಬಿಜಿಕೆ ತಂಡದಲ್ಲಿ ಗುರುತಿಸಿಕೊಂಡಿದ್ದಳು. ಕಳೆದ ವರ್ಷ ಡಿಸೆಂಬರ್ ವೇಳೆಗೆ ಕೇರಳದ ಗಡಿಭಾಗದಲ್ಲಿ ನಕ್ಸಲರು ಅಡಗಿದ ತಂಗುದಾಣದ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಈ ಕ್ಯಾಂಪ್‌ನಲ್ಲಿ ಮುಂಡಗಾರು ಲತಾ ಕೂಡ ಇದ್ದಳು ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಮುಂಡಗಾರು ಲತಾ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿತ್ತು. ಲತಾ ಸತ್ತಿದ್ದಾಳೆ ಎನ್ನುವ ಬ್ಯಾನರ್ ಹಾಕಲಾಗಿತ್ತು. ಆದರೆ ಪೈರಿಂಗ್ ಸಂದರ್ಭದಲ್ಲಿ ಮುಂಡಗಾರು ಲತಾ ತಪ್ಪಿಸಿಕೊಂಡಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಆಕೆ ಅಲ್ಲಿಂದ ತಪ್ಪಿಸಿಕೊಂಡು ಮಂಗಳೂರು ಕಡೆಗೆ ಹೊರಟಿದ್ದ ರೈಲು ಹತ್ತಿದ್ದಳು. ಹೀಗೆ ಮಂಗಳೂರು ರೈಲು ಹತ್ತಿದ್ದ ಲತಾ ನಂತರದಲ್ಲಿ ಎಲ್ಲಿಗೆ ಹೋದಳು ಎನ್ನುವ ಬಗ್ಗೆ ನಕ್ಸಲ್ ನಿಗ್ರಹ ಪಡೆ ತಂಡದವರಿಗಾಗಲಿ ಅಥವಾ ಪೊಲೀಸರಿಗಾಗಲಿ ಇಲ್ಲಿವರೆಗೆ ಯಾವುದೇ ಮಾಹಿತಿ ಇಲ್ಲ. ಹೀಗಿರುವಾಗ ಚಿಕ್ಕಮಗಳೂರಿನ ತಮ್ಮ ಊರಿನ ಕೊಪ್ಪದಲ್ಲಿ ನಟೋರಿಯಸ್ ಲತಾ ಮುಂಡಗಾರು ಪ್ರತ್ಯಕ್ಷವಾಗಿರುವುದು ಹಾಗೂ ಗ್ರಾಮಸ್ಥರೊಂದಿಗೆ ಸಭೆಗಳನ್ನು ನಡೆಸಿದ್ದಾಳೆ ಎನ್ನುವುದು ಗಂಭೀರ ವಿಚಾರವಾಗಿದೆ. ಆ ಮೂಲಕ ಲತಾ ಮುಂಡಗಾರು ಕೇರಳದ ಫೈರಿಂಗ್‌ನಲ್ಲಿ ಸತ್ತಿಲ್ಲ ಎನ್ನುವುದಕ್ಕೆ ಮತ್ತೊಂದು ಪುರಾವೆ ಕೂಡ ಸಿಕ್ಕಂತಾಗಿದೆ. ಲತಾ ಮುಂಡಗಾರು ಚಲನವಲನದ ಹಿನ್ನಲೆಯಲ್ಲಿ ನಕ್ಸಲ್ ನಿಗ್ರಹ ಪಡೆಯು ಚಿಕ್ಕಮಗಳೂರು ಸೇರಿದಂತೆ ಪಶ್ಚಿಮ ಘಟ್ಟದಲ್ಲಿ ತನ್ನ ಕೂಂಬಿಂಗ್ ಕಾರ್ಯಾಚರಣೆಯನ್ನು ಚುರುಕುಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕದಲ್ಲಿ ಒಂದು ಕಾಲದಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚು ಸಕ್ರಿಯವಾಗಿದ್ದ ಜಿಲ್ಲೆ ಅಂದರೆ ಅದು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ. ರಾಜ್ಯದ ನಕ್ಸಲ್ ಇತಿಹಾಸದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ನಕ್ಸಲ್ ನಾಯಕ ಸಾಕೇತ್ ರಾಜನ್ ಮೆಣಸಿನಹಾಡ್ಯದಲ್ಲಿ ೨೦೦೫ರ ಫೆ.೬ರಂದು ನಡೆದಿದ್ದ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದ. ಅದಕ್ಕೂ ಮೊದಲು ೨೦೦೩ರ ನವೆಂಬರ್‌ನಲ್ಲಿ ಕಾರ್ಕಳದ ಈದು ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲರಾದ ಹಾಜಿಮಾ ಮತ್ತು ಪಾರ್ವತಿ ಮೃತಪಟ್ಟಿದ್ದರು. ಹೀಗೆ ಈ ಎರಡು ಪ್ರಮುಖ ಎನ್‌ಕೌಂಟರ್ ಮೂಲಕ ಮಲೆನಾಡಿನಲ್ಲಿ ತಲೆಯೆತ್ತಿದ್ದ ನಕ್ಸಲ್ ಚಟುವಟಿಕೆಗಳನ್ನು ಪೊಲೀಸರು ಮಟ್ಟ ಹಾಕಿದ್ದರು. ಆ ನಂತರದಲ್ಲಿ ಕೊಡಗು, ಶಿವಮೊಗ್ಗ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಪಶ್ಚಿಮ ಘಟ್ಟದ ತಪ್ಪಲಿನ ಕಾಡು ಪ್ರದೇಶದಲ್ಲಿ ಹಲವು ಬಾರಿ ನಕ್ಸಲರ ಓಡಾಟ ಸದ್ದು ಮಾಡಿತ್ತು. ಅತ್ತ ನೆರೆಯ ಕೇರಳ ಹಾಗೂ ಆಂಧ್ರ ಪ್ರದೇಶದಲ್ಲಿ ನಕ್ಸಲರ ಚಟುವಟಿಕೆಯನ್ನು ಗಮನಾರ್ಹವಾಗಿ ಮಟ್ಟ ಹಾಕಿದ ಬಳಿಕ ಕರ್ನಾಟಕದಲ್ಲಿಯೂ ನಕ್ಸಲ್ ಚಟುವಟಿಕೆ ಕಡಿಮೆಯಾಗಿತ್ತು.

ನಕ್ಸಲ್ ನಾಯಕ ವಿಕ್ರಂ ಗೌಡ ಮತ್ತೆ ಆಕ್ಟಿವ್?: ನಕ್ಸಲರ ಪೈಕಿ ನಟೋರಿಯಸ್ ಎಂದೇ ಬಣ್ಣಿಸಲ್ಪಡುವ ವಿಕ್ರಂಗೌಡ ನೇತೃತ್ವದ ೬ ಮಂದಿ ಶರಣಾಗತಿಗೆ ಒಲವು ತೋರಿದ್ದಾರೆ ಎಂದು ಹೇಳಲಾಗುತ್ತಿತ್ತಾದರೂ ಇದೀಗ ಮತ್ತೆ ಅದೇ ವಿಕ್ರಂ ಗೌಡ ಬಣದ ನಕ್ಸಲರ ಹೆಜ್ಜೆ ಬೆಳ್ತಂಗಡಿ ಮತ್ತು ಕಾರ್ಕಳ ತಾಲೂಕಿನಲ್ಲಿ ಕಂಡು ಬರುತ್ತಿದೆಯೇ ಎಂದು ಪೊಲೀಸ್ ಇಲಾಖೆ ಮತ್ತು ನಕ್ಸಲ್ ನಿಗ್ರಹ ಪಡೆ ಶಂಕೆ ವ್ಯಕ್ತಪಡಿಸಿದೆ. ಈ ಹಿಂದೆ ಸರಕಾರ ಬಿಡುಗಡೆ ಮಾಡಿದ ನಕ್ಸಲರ ಪತ್ತೆಯ ಸೂಚನಾ ಫಲಕದಲ್ಲಿ ೨೨ ಮಂದಿಯ ಭಾವಚಿತ್ರಗಳಿದ್ದವು. ಅದರಲ್ಲಿ ಕೆಲವರು ಎನ್‌ಕೌಂಟರ್‌ಗೆ ಬಲಿಯಾಗಿದ್ದರೆ ಇನ್ನು ಕೆಲವರು ಶರಣಾಗಿದ್ದಾರೆ. ಈಗ ಇವರ ಸಂಖ್ಯೆ ಸುಮಾರು ೧೨ಕ್ಕೆ ಇಳಿದಿದ್ದು ೬ರಿಂದ ೮ ಮಂದಿ ಸಕ್ರಿಯರಾಗಿದ್ದಾರೆ. ಅವರಲ್ಲಿ ಬೆರಳೆಣಿಕೆಯ ಮಂದಿ ಕರ್ನಾಟಕ ರಾಜ್ಯದವರು. ಕೇರಳ, ಝಾರ್ಖಂಡ್ ಮತ್ತು ಛತ್ತೀಸ್‌ಘಡದಲ್ಲಿ ಸರಕಾರಗಳು ನಕ್ಸಲರನ್ನು ನಿಗ್ರಹಿಸಲು ಭಾರೀ ಕಾರ್ಯಾಚರಣೆ ನಡೆಸುತ್ತಿರುವುದು ಹಾಗೂ ಕೇರಳದಲ್ಲಿ ನಕ್ಸಲ್ ಗುಂಪಿನ ಆಂತರಿಕ ಭಿನ್ನಾಭಿಪ್ರಾಯ, ನಾಗರಿಕರಿಂದ ಬೆಂಬಲ ಕುಸಿತ ಮುಂತಾದ ಕಾರಣದಿಂದ ಶರಣಾಗತಿಗೆ ಯೋಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದ ವಿಕ್ರಂ ಗೌಡ ಬಣದ ನಕ್ಸಲರು ಮತ್ತೆ ಆಕ್ಟಿವ್ ಆಗಿದ್ದಾರೆ ಎಂಬ ಸಂಶಯದಲ್ಲಿ ಕಾರ್ಯಾಚರಣೆ ಮುಂದುವರಿಯುತ್ತಿದೆ. ರಾಜ್ಯದಲ್ಲಿ ಈವರೆಗೆ ೧೪ ಮಂದಿ ನಕ್ಸಲರು ಶರಣಾಗಿದ್ದಾರೆ. ಅಂಥವರಿಗೆ ಸರಕಾರ ಪ್ಯಾಕೇಜ್ ಘೋಷಿಸಿದೆ. ೨೦೧೦ರಲ್ಲಿ ವೆಂಕಟೇಶ್, ಜಯಾ, ಸರೋಜಾ, ಮಲ್ಲಿಕಾ, ೨೦೧೪ರಲ್ಲಿ ಸಿರಿಮನೆ ನಾಗರಾಜ್, ನೂರ್ ಜಲ್ಪಿಕರ್, ೨೦೧೬ರಲ್ಲಿ ಭಾರತಿ, ಫಾತಿಮಾ, ಪದ್ಮನಾಭ್, ಪರಶುರಾಮ್, ೨೦೧೭ರಲ್ಲಿ ಕನ್ಯಾಕುಮಾರಿ, ಶಿವು, ಚೆನ್ನಮ್ಮ ಅವರು ಜಿಲ್ಲಾಡಳಿತದ ಮೂಲಕ ಶರಣಾಗಿದ್ದರು. ಮಲೆನಾಡು, ಪಶ್ಚಿಮಘಟ್ಟ ಪ್ರದೇಶದಲ್ಲಿ ಮುಂಚೂಣಿಯಲ್ಲಿದ್ದ ಬಿ.ಜಿ. ಕೃಷ್ಣಮೂರ್ತಿ ಮತ್ತು ಸಾವಿತ್ರಿ ಬಂಧನದ ಬಳಿಕ ಮಲೆನಾಡಿನಲ್ಲಿ ನಕ್ಸಲ್ ನೆಲೆಗೆ ಕಡಿವಾಣ ಬಿದ್ದಿತ್ತು. ಇದೀಗ ಮತ್ತೆ ನಕ್ಸಲರು ಸುದ್ದಿಯಾಗಿದ್ದಾರೆ.

ಹಾಜಿಮಾ, ಪಾರ್ವತಿ, ವಸಂತ ಗೌಡ ಎನ್‌ಕೌಂಟರ್‌ಗೆ ಬಲಿಯಾಗಿದ್ದರು: ಕೇರಳ, ಝಾರ್ಖಂಡ್, ಛತ್ತೀಸ್‌ಗಢದಲ್ಲಿ ನಕ್ಸಲ್ ಚಟುವಟಿಕೆಯನ್ನು ಪರಿಣಾಮಕಾರಿಯಾಗಿ ಹತ್ತಿಕ್ಕುತ್ತಿರುವುದರಿಂದ ಅಲ್ಲಿನ ನಕ್ಸಲರು ಕರ್ನಾಟಕದ ಪಶ್ಚಿಮ ಘಟ್ಟವನ್ನು ಗುರಿಯಾಗಿಸಿಕೊಂಡಿದ್ದಾರೆಯೇ ಎಂದು ನಕ್ಸಲ್ ನಿಗ್ರಹ ಪಡೆ ಮತ್ತು ಪೊಲೀಸ್ ಇಲಾಖೆ ಶಂಕೆ ವ್ಯಕ್ತಪಡಿಸಿದೆ. ಪಶ್ಚಿಮಘಟ್ಟದಲ್ಲಿ ನಕ್ಸಲ್ ಇರುವಿಕೆ ೨೦೦೨ರಲ್ಲಿ ಗೋಚರವಾಗಿತ್ತು. ೨೦೦೩ರಲ್ಲಿ ಈದು ಗ್ರಾಮದ ಬೊಲ್ಲೊಟ್ಟುನಲ್ಲಿ ಹಾಜಿಮಾ ಮತ್ತು ಪಾರ್ವತಿ ಎಂಬ ಇಬ್ಬರು ನಕ್ಸಲರನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದರು. ಯಶೋದಾ ಎಂಬಾಕೆ ಗಾಯಗೊಂಡು ಆಸ್ಪತ್ರೆ ಸೇರಿದ್ದಳು. ದೇವೇಂದ್ರ ಯಾನೇ ವಿಷ್ಣು ಸಹಿತ ಇನ್ನುಳಿದವರು ಪರಾರಿಯಾಗಿದ್ದರು. ಅಲ್ಲಿಂದ ಈ ಭಾಗದಲ್ಲಿವ ಆರಂಭವಾದ ನಕ್ಸಲ್ ಚಟುವಟಿಕೆ ಇತ್ತೀಚೆಗೂ ಮುಂದುವರೆದಿದೆ. ೨೦೧೦ರ ಮಾ.೧ರಂದು ಮೈರೊಳ್ಳಿಯಲ್ಲಿ ನಕ್ಸಲ್ ವಸಂತ ಗೌಡನ ಎನ್ಕೌಂಟರ್ ಆಗಿತ್ತು. ಪೊಲೀಸ್ ಮಾಹಿತಿದಾರ ಎಂಬ ಕಾರಣಕ್ಕಾಗಿ ೨೦೧೧ರ ಡಿಸೆಂಬರ್ ತಿಂಗಳಲ್ಲಿ ತಿಂಗಳೆ ತೆಂಗುಮಾರ್ ಎಂಬಲ್ಲಿ ಗುಂಡಿ ಸದಾಶಿವ ಗೌಡರನ್ನು ನಕ್ಸಲರು ಹತ್ಯೆಗೈದಿದ್ದರು. ಆ ಬಳಿಕದ ದಿನಗಳಲ್ಲಿ ತಣ್ಣಗಾಗುತ್ತಾ ಸಾಗಿದ ನಕ್ಸಲ್ ಚಟುವಟಿಕೆ ಇದೀಗ ಮತ್ತೆ ಗರಿಗೆದರುತ್ತಿರುವ ಆತಂಕಕಾರಿ ಬೆಳವಣಿಗೆ ಪಶ್ಚಿಮಘಟ್ಟದ ತಪ್ಪಲಿನಲ್ಲಿ ಸುದ್ದಿಯಾಗುತ್ತಿದೆ. ನಕ್ಸಲರ ಚಟುವಟಿಕೆಗಳು ಕಡಿಮೆಗೊಂಡಿದೆ ಎನ್ನುವ ಕಾರಣಕ್ಕೆ ನಕ್ಸಲ್ ನಿಗ್ರಹ ದಳ ಕೂಬಿಂಗ್ ಕಾರ್ಯಾಚರಣೆ ಸಡಿಲಿಕೆ ಮಾಡಿದೆ. ಕಾರ್ಕಳದ ಪೇಟೆಯಲ್ಲಿ ಪ್ರತ್ಯೇಕವಾದ ಎಎನ್‌ಎಎಫ್ ಕೇಂದ್ರವಿದೆ. ಪಶ್ಚಿಮಘಟ್ಟದಲ್ಲಿ ಪ್ರತ್ಯೇಕ ತಂಡಗಳಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು. ಇದೀಗ ಹೆಚ್ಚಿನ ಅನುಭವಿ ಎಎನ್‌ಎಫ್ ಸಿಬ್ಬಂದಿಗಳನ್ನು ಮಾತೃ ಇಲಾಖೆಗೆ ವರ್ಗಾವಣೆಗೊಳಿಸಲಾಗಿದ್ದು ಹೊಸ ಸಿಬ್ಬಂದಿಗಳು ಎಎನ್‌ಎಫ್‌ಗೆ ನೇಮಕಗೊಂಡಿದ್ದಾರೆ. ನಕ್ಸಲರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆಯಿಂದ ನಡೆಯುತ್ತಿತ್ತು. ನಕ್ಸಲರ ಮಾಹಿತಿಯುಳ್ಳ ಭಿತ್ತಿಪತ್ರ ಹಾಗೂ ಜಾಗೃತಿ ಪತ್ರಗಳು ಕೂಡಾ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹಂಚುವ ಮೂಲಕ ಜಾಗೃತಿ ಮೂಡಿಸುತ್ತಿದ್ದರು. ಪ್ರಸ್ತುತ ಆ ಕಾರ್ಯಕ್ರಮಗಳು ಇಲಾಖೆಯಿಂದ ನಡೆಯುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

ಗದ್ದರ್ ಬಂದಿದ್ದರು: ೨೦೦೩ರಲ್ಲಿ ನಕ್ಸಲ್ ಕಾರ್ಯಾಚರಣೆಯಲ್ಲಿ ನಡೆಸಿದ ಎನ್‌ಕೌಂಟರ್ ವಿರುದ್ಧವಾಗಿ ನಡೆದ ಪ್ರತಿಭಟನೆಯಲ್ಲಿ ಆಂಧ್ರಪ್ರದೇಶದ ನಕ್ಸಲ್ ಪರ ಹೋರಾಟಗಾರ, ಕವಿ, ಗದ್ದರ್ ಭಾಗವಹಿಸಿದ್ದರು. ಅವರ ನೇತೃತ್ವದಲ್ಲಿ ಪ್ರಗತಿಪರರು ನಾರಾವಿ ಪರಿಸರದಲ್ಲಿ ಪ್ರತಿಭಟನಾ ಸಭೆ ನಡೆಸಿದ್ದರು. ೨೧ ವರ್ಷಗಳ ಹಿಂದೆ ನಡೆದ ನಕ್ಸಲ್ ಎನ್‌ಕೌಂಟರ್ ನೆನಪು ಇನ್ನೂ ಮಾಸಿಲ್ಲ. ಈಗ ಮತ್ತೆ ಈ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆ ಸದ್ದು ಮಾಡಿದೆ.

p>

LEAVE A REPLY

Please enter your comment!
Please enter your name here