ಕೊಕ್ಕಡ: ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಗೆ ಒಳಪಟ್ಟ, ಹತ್ಯಡ್ಕ ಗ್ರಾಮದ ಪಲಸ್ತಡ್ಕ ಎಂಬಲ್ಲಿ ಸರ್ಕಾರಿ ರಕ್ಷಿತಾರಣ್ಯದಿಂದ ವ್ಯಾಪಕವಾಗಿ ಮರಗಳ ಮಾರಣಹೋಮ ನಡೆಯುತ್ತಿದೆ ಎಂದು ಸ್ಥಳೀಯ ಗ್ರಾಮಸ್ಥರು ಕರ್ನಾಟಕ ಸರ್ಕಾರದ ಅರಣ್ಯ ಸಚಿವರ ಸಹಿತ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಗೆ ಒಳಪಟ್ಟ ಹತ್ಯಡ್ಕ ಗ್ರಾಮದ ಪಲಸ್ತಡ್ಕ ಎಂಬಲ್ಲಿ ರಕ್ಷಿತಾರಣ್ಯದಿಂದ ಉತ್ತಮ ಜಾತಿಯ ನೂರಾರು ಮರಗಳನ್ನು ಕಡಿದು ಅಲ್ಲೇ ಸಿಗಿದು ಸೈಜುಗಳನ್ನಾಗಿ ಮಾಡಿ ಸಾಗಾಟ ಮಾಡಿರುವುದು ಕಂಡು ಬರುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಈ ಕೃತ್ಯದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಗಾಢ ಮೌನ ತಾಳಿದ್ದಾರೆ. ಅರಣ್ಯ ಸಂಪತ್ತು ಲೂಟಿ ಮಾಡುವ ಮರಕಳ್ಳರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಸಚಿವರನ್ನು ಆಗ್ರಹಿಸಿದ್ದಾರೆ.
ಪಲಸ್ತಡ್ಕದಲ್ಲಿ ರಕ್ಷಿತಾರಣ್ಯಕ್ಕೆ ತಾಗಿಕೊಂಡಂತೆ ಇರುವ 2 ಮನೆಯ ವ್ಯಕ್ತಿಗಳು ಇದರಲ್ಲಿ ನೇರ ಭಾಗಿಗಳಾಗಿದ್ದು, ಕೊಕ್ಕಡ-ಅರಸಿನಮಕ್ಕಿ ರಸ್ತೆ ಬದಿಯಲ್ಲಿ, ಬೃಹದಾಕಾರವಾಗಿ ಬೆಳೆದು ನಿಂತಿದ್ದ ಮರಗಳನ್ನು ಯಂತ್ರದ ಮೂಲಕ ತುಂಡರಿಸಿ, ಸಿಗಿದು ಸೈಜುಗಳನ್ನಾಗಿ ಮಾಡಿ ಟಿಪ್ಪರ್ ಮತ್ತು ಪಿಕ್ಅಪ್ ಮೂಲಕ ಬಂಟ್ವಾಳ, ಮಂಗಳೂರು ಕಡೆಗೆ ರಾಜಾರೋಷವಾಗಿ ಸಾಗಾಟ ಮಾಡಲಾಗುತ್ತದೆ. ಅದಾಗ್ಯೂ ಸೈಜು ಮಾಡಲಾಗಿ ಉಳಿದ ಕಟ್ಟಿಗೆಗಳನ್ನು ಪಿಕ್ಅಪ್ ಲೋಡು ಒಂದಕ್ಕೆ 7 ಸಾವಿರ ರೂಪಾಯಿಯಂತೆ ಹೊಟೇಲ್ಗಳಿಗೆ ಸಾಗಾಟ ನಡೆಯುತ್ತಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.
ಪಲಸ್ತಡ್ಕ ಪರಿಸರದಲ್ಲಿ ನೂರಾರು ಮರಗಳ ತುದಿ ಕತ್ತರಿಸಿ ಮುಂದಿನ ಕಾರ್ಯಾಚರಣೆಗೆ ಸಿದ್ಧಪಡಿಸಿ ಇಡಲಾಗಿದೆ ಹಾಗೂ ಅರಣ್ಯ ಒತ್ತುವರಿ ಮಾಡಲಾಗಿ ಕೋಳಿ ಸಾಕಾಣಿಕೆಗೆ ಆಗುವ ರೀತಿಯಲ್ಲಿ ಶೆಡ್ ಒಂದನ್ನು ನಿರ್ಮಿಸಲಾಗಿದೆ. ರಕ್ಷಿತಾರಣ್ಯದೊಳಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕೃತ್ಯಗಳು ನಡೆಯುತ್ತಿದ್ದರೂ ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಮೌನ ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಸಂಶಯಗಳಿಗೆ ಕಾರಣವಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷತನದಿಂದಾಗಿ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶ ಕಾಡು ಪ್ರಾಣಿಗಳ ಬೇಟೆಗಾರರಿಗೆ ಮತ್ತು ಮರಗಳ್ಳರಿಗೆ ವರದಾನವಾಗಿ ಪರಿಣಮಿಸಿದೆ. ಹಾಡುಹಗಲಿನಲ್ಲಿ ಕಾಡು ಕೋಣ ಬೇಟೆಯಾಡಿದ ಕೃತ್ಯ ಮತ್ತು ಮಗನ ಹುಟ್ಟುಹಬ್ಬದ ಔತಣ ಕೂಟಕ್ಕೆ ಕಡವೆ ಬೇಟೆಯಾಡಿದ ಪ್ರಕರಣ ದಾಖಲಾಗಿ ತಿಂಗಳು ಆಗುತ್ತಾ ಬಂದಿದ್ದರೂ ಇನ್ನೂ ಕೂಡಾ ಆರೋಪಿಗಳನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಒಟ್ಟಿನಲ್ಲಿ ಅರಣ್ಯ ಸಂಪತ್ತು ಸಂಪೂರ್ಣ ಲೂಟಿಯಾಗಿ ಕಾಡು ಬೋರು ಗುಡ್ಡೆಯಾಗುವ ಮುನ್ನ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಕೃತ್ಯ ಎಸಗುವವರಿಗೆ ಕಡಿವಾಣ ಹಾಕುವಂತೆ ಪರಿಸರ ಪ್ರೇಮಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುತ್ತೇನೆ-ಆರ್.ಎಫ್.ಒ.
ರಕ್ಷಿತಾರಣ್ಯ ವ್ಯಾಪ್ತಿಯ ಒಳಗೆ ಮರ ಕಡಿದಿದ್ದಲ್ಲಿ, ಅದರ ಹೊರತಾಗಿ ಪಟ್ಟಾ ಜಾಗದಲ್ಲಿ ಇದ್ದರೂ ಅನುಮತಿ ಪಡೆಯದೆ ಮರ ಕಡಿದಿದ್ದರೂ ಅಪರಾಧ ಆಗುತ್ತದೆ. ಆದ ಕಾರಣ ಮರ ಕಡಿದಿರುವ ಜಾಗದ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇನೆ.
-ರಾಘವೇಂದ್ರ, ವಲಯ ಅರಣ್ಯಾಧಿಕಾರಿ, ಉಪ್ಪಿನಂಗಡಿ.