ನೆರಿಯ: ಸಿಯೋನ್ ಆಶ್ರಮ ಟ್ರಸ್ಟ್ (ರಿ.), ಗಂಡಿಬಾಗಿಲು ಇಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬ ಆಚರಣೆಯನ್ನು ನ. 01ರಂದು ಸಂಭ್ರಮದಿಂದ ಆಚರಿಸಲಾಯಿತು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ನೆರಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಭಾಕಾರ್ಯಕ್ರಮದ ಅಧ್ಯಕ್ಷಸ್ಥಾನವನ್ನು ಅಲಂಕರಿಸಿದ್ದ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟೀಯವರಾದ ಡಾ.ಯು.ಸಿ.ಪೌಲೋಸ್ರವರು ಕನ್ನಡ ನಾಡಿನ ಸೊಬಗನ್ನು ವರ್ಣಿಸಿ, ನಮ್ಮ ನಾಡಿನಲ್ಲಿ ಯಾವುದೇ ಜಾತಿ-ಮತ, ಭೇದ-ಭಾವವಿಲ್ಲದೆ ಒಂದಾಗಿ ಬಾಳೋಣ ಹಾಗೂ ಬೆಳಕಿನ ಹಬ್ಬ ದೀಪಾವಳಿಯು ನಾಡಿನ ಸಮಸ್ತ ಜನರ ಅಂಧಕಾರದ ಕತ್ತಲೆ ಸರಿದು ಜ್ಞಾನದ ಜ್ಯೋತಿ ಮನೆ ಮನಗಳಲ್ಲಿ ಬೆಳಗಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗಂಡಿಬಾಗಿಲು ಸೈಂಟ್ ತೋಮಸ್ ಚರ್ಚ್ನ ಧರ್ಮಗುರುಗಳಾದ ರೆ.ಫಾ.ಜೋಸ್ ಅಯಾಂಕುಡಿಯವರು ಕನ್ನಡ ನಾಡಿನ ಸ್ವಚ್ಛಂದ ಮನೋಭಾವಗಳ ಸಂಸ್ಕೃತಿಯ ನಾಡನ್ನು ಕೊಂಡಾಡಿ, ದೀಪಾವಳಿ ಹಬ್ಬದ ಶುಭ ಹಾರೈಸಿ, ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಕನ್ನಡದ ಉಗಮ, ಕನ್ನಡದ ಏಕೀಕರಣ, ನಮ್ಮ ನಾಡಿನ ಕಲೆ, ಸಂಸ್ಕೃತಿ, ಭಾಷೆ, ಪರಂಪರೆ, ಕವಿಗಳು ಹಾಗೂ ಕನ್ನಡದ ಹಿರಿಮೆಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಸುರೇಂದ್ರ ಮಾತನಾಡಿ, ಕರುನಾಡಿನ ಕಲೆ, ಸಾಹಿತ್ಯದ ಬಗ್ಗೆ ಚುಟುಕಾಗಿ ವಿವರಿಸಿದರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಸಿಯೋನ್ ಆಶ್ರಮದ ಆಪ್ತ ಸಂಬಂಧವನ್ನು ವಿವರಿಸಿ ಶುಭಾಶಯ ಕೋರಿದರು. ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ನಮಿತಾ ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಜೀವನದಲ್ಲೂ ಬೆಳಕು ತರಲಿ ಹಾಗೂ ಕನ್ನಡದ ಕಂಪು ಎಲ್ಲೆಡೆ ಪಸರಿಸಲಿ ಎಂದರು. ಮಂಡಲ ಪಂಚಾಯತ್ ಮಾಜಿ ಅಧ್ಯಕ್ಷ ನಂದಕುಮಾರ್ ಮಾತನಾಡಿ, ಕನ್ನಡ ಸಂಸ್ಕೃತಿ ಮತ್ತು ಕರುನಾಡ ಸೌಂದರ್ಯವನ್ನು ವರ್ಣಿಸಿ, ದೀಪಾವಳಿಯ ಶುಭಹಾರೈಸಿದರು. ಸಂಸ್ಥೆಯ ಟ್ರಸ್ಟಿ ಸದಸ್ಯರಾದ ಮೇರಿ ಯು.ಪಿ., ಬೆಳ್ತಂಗಡಿ ತಾಲೂಕು ನಿವೃತ್ತ ವೈದ್ಯಾಧಿಕಾರಿ ಡಾ.ಕಲಾಮಧುರವರು, ಸಂಸ್ಥೆಯ ವೈದ್ಯರಾದ ಡಾ.ಶಿವಾನಂದ ಸ್ವಾಮಿ, ಹಿತೈಷಿಗಳಾದ ಜೋಸೆಫ್ ಪಿ.ಪಿ., ಆಶ್ರಮ ನಿವಾಸಿಗಳಾದ ಲಿಂಗರಾಜು ಮತ್ತು ಭವಾನಿ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾಕಾರ್ಯಕ್ರಮದ ನಂತರ ಸೈಂಟ್ ತೋಮಸ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ, ಆಶ್ರಮ ನಿವಾಸಿಗಳಿಂದ, ಸಿಬ್ಬಂದಿ ವರ್ಗದವರಿಂದ ವಿವಿಭ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸೈಂಟ್ ತೋಮಸ್ ಪ್ರೌಢಶಾಲೆಯ ಶಿಕ್ಷಕಿಯರು, ನೆರಿಯ ಗ್ರಾಮಸ್ಥರು, ಹಿತೈಷಿಗಳು, ಟ್ರಸ್ಟೀ ಕುಟುಂಬಸ್ಥರು, ಸಂಸ್ಥೆಯ ಆಡಳಿತ ಮಂಡಳಿಯವರು, ಸಿಬ್ಬಂದಿ ವರ್ಗದವರು, ಆಶ್ರಮ ನಿವಾಸಿಗಳೆಲ್ಲರೂ ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿ ದಿನವತಿಯವರು ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ವೈದ್ಯರಾದ ಡಾ.ಶಿವಾನಂದ ಸ್ವಾಮಿ ಸ್ವಾಗತಿಸಿ, ಸಿಬ್ಬಂದಿ ಸಿಂಧು ವಿ,ಜೆ.ಯವರು ಧನ್ಯವಾದ ಸಲ್ಲಿಸಿದರು.