ಬೆಳ್ತಂಗಡಿ: ಕುತ್ಲೂರು ಸಂಪರ್ಕ ಸೇತುವೆ ಕಡಿತ, ಗ್ರಾಮಸ್ಥರಿಂದ ಪ್ರತಿಭಟನೆ

0

ಬೆಳ್ತಂಗಡಿ: ಕುತ್ಲೂರು ಗ್ರಾಮದ ಅಲಂಬಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮುರಿದು ಬಿದ್ದು ಎರಡು ವರ್ಷಗಳಾದರೂ ಸೇತುವೆ ದುರಸ್ತಿ ಅಥವಾ ಹೊಸ ಸೇತುವೆಯ ನಿರ್ಮಾಣ ಕಾರ್ಯ ಮಾಡದಿರುವ ಸರಕಾರದ ಅಧಿಕಾರಿಗಳ ನೀತಿಯನ್ನು ಖಂಡಿಸಿ, ಈ ಸೇತುವೆಯನ್ನು ಅವಲಂಬಿಸಿರುವ ಆದಿವಾಸಿಗಳು ಹಾಗೂ ಸ್ಥಳೀಯರು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಕುತ್ಲೂರಿನ ಮುರಿದ ಸೇತುವೆಯ ಮೇಲೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಸಿಪಿಐಎಂ ಮುಖಂಡ ಮುನೀರ್ ಕಾಟಿಪಳ್ಳ ಆದಿವಾಸಿಗಳು ಸೇರಿದಂತೆ ನೂರಾರು ಜನರು ಪ್ರತಿನಿತ್ಯ ಉಪಯೋಗಿಸುವ ಸೇತುವೆ ಮುರಿದು ಬಿದ್ದು ಎರಡು ವರ್ಷಗಳೇ ಕಳೆದರೂ ಇನ್ನೂ ಅಧಿಕಾರಿಗಳು, ಸರಕಾರ ಎಚ್ಚೆತ್ತುಕೊಳ್ಳದಿರುವುದು ದುರಂತವಾಗಿದೆ. ಅರಣ್ಯದಲ್ಲಿ ವಾಸಿಸುವ ಆದಿವಾಸಿ ಕುಟುಂಬಗಳ ಬಗ್ಗೆ ಸರಕಾರ ಯಾವ ನೀತಿಯನ್ನು ಅನುಸರಿಸುತ್ತಿದೆ ಎಂಬುದನ್ನು ಇದರಿಂದ ತಿಳಿಯಲು ಸಾಧ್ಯ. ಶಾಸಕ ಹರೀಶ್ ಪೂಂಜರಿಗೆ ರಾಜ್ಯದ ದೇಶದ ವಿಚಾರದ ಬಗ್ಗೆ ಮಾತನಾಡಲು ಸಮಯವಿದೆ. ಆದರೆ ತನ್ನ ಕ್ಷೇತ್ರದ ಜನರ ಈ ರೀತಿಯ ಸಮಸ್ಯೆಗಳಿಗೆ ಸ್ಪಂದಿಸಲು ಸಮಯ ಇಲ್ಲ ಎಂದು ಆರೋಪಿಸಿದರು. ಸರಕಾರ ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತು ಕೊಂಡು ಸೇತುವೆಯ ಮರು ಮಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನಾರಾವಿ ಗ್ರಾಮಪಂಚಾಯತ್ ಎದುರು ಬೆಳ್ತಂಗಡಿ ತಾಲೂಕು ಕಚೇರಿಯ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿ.ಪಿ.ಐ.ಎಂ ತಾಲೂಕು ಕಾರ್ಯದರ್ಶಿ ಬಿ‌.ಎಂ ಭಟ್ ಕುತ್ಲೂರಿನ ಅಲಂಬ ಪರಿಸರದ ಜನತೆ ಕಳೆದ ಎರಡು ವರ್ಷಗಳಿಂದ ಸೇತುವೆ ಕುಸಿದ ಕಾರಣ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಸರಕಾರದ ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ಇದೀಗ ಹೋರಾಟದ ಹಾದಿಯನ್ನು ಹಿಡಿಯಬೇಕಾದ ಅನಿವಾರ್ಯತೆ ಬಂದಿದೆ ಎಂದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಂಚಾಯತಿ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಇಂಜಿನಿಯರ್ ಹರ್ಷಿತ್ ಪ್ರತಿಭಟನಾಕಾರರೊಂದಿಗೆ ಮಾತನಾಡಿ ಈಗಾಗಲೇ ಸೇತುವೆಗೆ 1.90ಕೋಟಿ ಅಂದಾಜು ಪಟ್ಟಿಯನ್ನು ಸಲ್ಲಿಸಲಾಗಿದೆ. ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಮಳೆ ಹಾನಿಯಲ್ಲಿಯೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಕೇವಲ ಪ್ರಸ್ತಾವನೆ ಸಲ್ಲಿಸಿರುವುದರಿಂದ ಯಾವುದೇ ಪ್ರಯೋಜನವಿಲ್ಲ ಅನುದಾನ ತರಿಸುವ ನಿಟ್ಟಿನಲ್ಲಿ ಶಾಸಕರು ಹಾಗೂ ಜನಪ್ರತಿನಿಧಿಗಳು ಪ್ರಯತ್ನಿಸುತ್ತಿಲ್ಲ ಎಂದು ಈ‌ ಸಂದರ್ಭದಲ್ಲಿ ಪ್ರತಿಭಟನಾಕಾರರು ಆಕ್ರೋಶವನ್ನು ವ್ಯಕ್ತಪಡಿಸಿದರು. ಹೋರಾಟಗಾರರು ತಮ್ಮ ಅಳಂಬ ಪರಿಸರದ ತಮ್ಮ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಮನವಿ ಸಲ್ಲಿಸಿದರು. ಹೋರಾಟಗಾರರಿಂದ ಮನವಿ ಸ್ವೀಕರಿಸಿದ ಅಧಿಕಾರಿಗಳು ತಮ್ಮ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.

ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿದರು. ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯೆ ಯಶೋದಾ ಹಾಗೂ ಇತರರು ಆಗಮಿಸಿ ಸಮಸ್ಯೆಯ ತೀವ್ರತೆಯ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ಪ್ರತಿಭಟನೆಯ ನೇತೃತ್ವವನ್ನು ದಲಿತ ಹಕ್ಕುಗಳ ಹೋರಾಟ ಸಮಿತಿಯ ಮುಖಂಡರುಗಳಾದ ಸುಕುಮಾರ ದಿಡುಪೆ, ಪೂವಪ್ಪ ಮಲೆಕುಡಿಯ ಕುತ್ಲೂರು, ಈಶ್ವರಿ, ಸುಧಾಕರ ಮಲೆಕುಡಿಯ, ಶಶಿಧರ, ಚೀಂಕ್ರ, ಸುಜಾತ, ಜಯಶ್ರೀ, ಜಯರಾಮ‌ ಮಯ್ಯ ಹಾಗೂ ಇತರರು ಇದ್ದರು.

p>

LEAVE A REPLY

Please enter your comment!
Please enter your name here