ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕಾನೂನು ಸೇವೆಗಳ ಸಮಿತಿ, ಬೆಳ್ತಂಗಡಿ ವಕೀಲರ ಸಂಘ ಹಾಗೂ ಬೆಳ್ತಂಗಡಿ ಸಂತ ತೆರೇಸಾ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಸಂತ ತೆರೇಸಾ ಪ್ರೌಢಶಾಲೆಯ ಸಭಾಂಗಣದಲ್ಲಿ ಅ.29ರಂದು ಕಾನೂನು ಅರಿವು ಕಾರ್ಯಕ್ರಮ ನಡೆಯಿತು.
ಬೆಳ್ತಂಗಡಿ ತಾಲೂಕಿನ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಸದಸ್ಯ ಕಾರ್ಯದರ್ಶಿಯಾಗಿರುವ ಸಂದೇಶ ಕೆ. ಕಾರ್ಯಕ್ರಮದ ಉದ್ಘಾಟಕರಾಗಿ ಶುಭಹಾರೈಸಿ ಸಂಸ್ಥೆಯ ಮುಖ್ಯಸ್ಥರನ್ನು ವಂದಿಸಿದರು. ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಭಗಿನಿ ಲೀನಾ ಡಿ’ಸೋಜಾ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ, ಪ್ರಧಾನ ಸಿವಿಲ್ ನ್ಯಾಯಧೀಶರ ಉಪಸ್ಥಿತಿಯನ್ನು ಸ್ಮರಿಸಿದರು. ಸಂಪನ್ಮೂಲ ವ್ಯಕ್ತಿ, ಬೆಳ್ತಂಗಡಿ ವಕೀಲೆ ಸ್ವರ್ಣಲತಾ ಎ. ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚಾರಣೆಯ ಕುರಿತು ಮಾಹಿತಿ ನೀಡಿ, ಹೆಣ್ಣುಮಕ್ಕಳ ಶಿಕ್ಷಣ, ಸಮಾನ ಕಾನೂನು ವ್ಯವಸ್ಥೆ, ಆಧುನಿಕ ಸಮಾಜದಲ್ಲಿ ಮೊಬೈಲ್ ಬಳಕೆಯಿಂದ ಆಗುವಂತಹ ಅನೇಕ ದುಷ್ಪರಿಣಾಮಗಳಲ್ಲಿ ಒಂದು ಉದಾಹರಣೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ ನಾವು ಹೇಗೆ ಜಾಗೃತರಾಗಬೇಕು ಎಂಬ ಸೂಕ್ತ ಮಾಹಿತಿಯನ್ನು ನೀಡಿ, ಬೆಳ್ತಂಗಡಿ ನ್ಯಾಯಾಲಯವೇ ಇಂದು ನ್ಯಾಯಧೀಶರ ಉಪಸ್ಥಿತಿಯಿಂದ ನಿಮ್ಮ ಶಾಲೆಗೆ ಬಂದಿದೆ ಎಂದು ಉಲ್ಲೇಖಿಸಿದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಪ್ರಧಾನ ಕಾರ್ಯದರ್ಶಿ ನವೀನ್ ಬಿ.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆಲವು ವಕೀಲರು ಸ್ವಯಂ ಸೇವಕರಾಗಿ, ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಭಗಿನಿ ಜೆಸಿಂತಾ ಸರ್ವರನ್ನು ಪ್ರೀತಿಯಿಂದ ಸ್ವಾಗತಿಸಿದರು. ವಿದ್ಯಾರ್ಥಿ ತಂಡ ಪ್ರಾರ್ಥನಾ ಗೀತೆಯೊಂಗಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು. ಶಿಕ್ಷಕಿ ಥಿಯೋಫಿಲಾ ಕಾರ್ಯಕ್ರಮವನ್ನು ನಿರೂಪಿಸಿದರು.