ಮಡಂತ್ಯಾರು: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಮಾದಕದ್ರವ್ಯ ವಿರೋಧಿ ಕೋಶ ಇದರ ಜಂಟಿ ಆಶ್ರಯದಲ್ಲಿ ತಂಬಾಕು ಮುಕ್ತ ಯುವ ಜನತೆ ಎಂಬ ಧ್ಯೇಯ ವಾಕ್ಯದೊಂದಿಗೆ ತಂಬಾಕು ಮತ್ತು ಮಾದಕ ದ್ರವ್ಯದ ದುಷ್ಪರಿಣಾಮದ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಅ.23ರಂದು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀ.ಕ್ಷೇ.ಧ.ಗ್ರಾ. ಯೋಜನೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ತಂಬಾಕಿನ ದುಷ್ಪರಿಣಾಮಗಳು, ಮಾನಸಿಕ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ವಿವರಿಸಿ, ಆರೋಗ್ಯಕರ ಸಮುದಾಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಯುವಜನರ ಪಾತ್ರದ ಮಹತ್ವವನ್ನು ವಿವರಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಅಲೆಕ್ಸ್ ಐವನ್ ಸಿಕ್ವೇರಾ ಯುವಕರು ತಂಬಾಕು ಮುಕ್ತ ಜೀವನವನ್ನು ಆಯ್ಕೆ ಮಾಡಲು ಪ್ರೇರಣೆ ನೀಡುವ ವಿಷಯಗಳಲ್ಲಿ ತೊಡಗಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಯೋಜನಾಧಿಕಾರಿಗಳಾದ ಪ್ರಶಾಂತ್ ಎಂ., ಜೀವ ವಿ. ಸಿ., ಮಾದಕದ್ರವ್ಯ ವಿರೋಧಿ ಕೋಶದ ಸಂಯೋಜನಾಧಿಕಾರಿ ಲೆಫ್ಟಿನೆಂಟ್ ಆಲ್ವಿನ್ ಕೆ.ಜಿ., ಕಾಲೇಜಿನ ಪ್ರಾಧ್ಯಾಪಕ ವೃಂದ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಎಲ್ಲಾ ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸ್ವಯಂಸೇವಕ ವಿಲಾಸ್ ನಿರೂಪಿಸಿದರು. ಸ್ವಯಂಸೇವಕಿ ಸಂಚಿತಾ ಸ್ವಾಗತಿಸಿ, ಪ್ರಣಮ್ಯಾ ವಂದಿಸಿದರು.