ಸಮ್ಮಿಲನ 2024: ಸೇಕ್ರೆಡ್ ಹಾರ್ಟ್ ಕಾಲೇಜಿನ ಪರಂಪರೆಯನ್ನು ಸಾರುವ ಹಿರಿಯ ವಿದ್ಯಾರ್ಥಿಗಳ ಬಾಂಧವ್ಯದ ಹಬ್ಬ

0

ಬೆಳ್ತಂಗಡಿ: ಸೇಕ್ರೆಡ್ ಹಾರ್ಟ್ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಭವ್ಯವಾದ ಮತ್ತು ಬಹು ನಿರೀಕ್ಷಿತ ಪುನರ್ಮಿಲನ ಕಾರ್ಯಕ್ರಮ ಅ.13ರಂದು ಕಾಲೇಜು ಆವರಣದಲ್ಲಿ ನಡೆಯಿತು. ಹಿರಿಯ ವಿದ್ಯಾರ್ಥಿ ಸಂಘವು ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ವಿವಿಧ ಬ್ಯಾಚ್‌ಗಳ ಹಿರಿಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

ಕಾರ್ಯಕ್ರಮವನ್ನು ಅತ್ಯಂತ ಸಂತೃಪ್ತ ಮನೋಭಾವದಿಂದ ಉದ್ಘಾಟಿಸಿದ ಸೇಕ್ರೆಡ್ ಹಾರ್ಟ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ.ಡಾ. ಸ್ಟ್ಯಾನಿ ಗೋವಿಸ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಹೆಮ್ಮೆಯ ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮದ ಅತಿಥಿ ಸ್ಥಾನವನ್ನು ಅಲಂಕರಿಸಿದ್ದರು. ಮುಖ್ಯವಾಗಿ ಜಿಲ್ಲಾ ನ್ಯಾಯಾಧೀಶರು ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದ ಮಧ್ಯಸ್ಥಿಕೆ ಮತ್ತು ಸಂಧಾನ ಕೇಂದ್ರದ ನಿರ್ದೇಶಕ ದಿನೇಶ್ ಹೆಗ್ಡೆ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಹರೀಶ್ ಪೂಂಜಾ ಹಾಗು  ಶ್ರೀ ಅರುಣ್ ಫುರ್ಟಾಡೊ, ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪೈಸ್, ಪ್ರಾದೇಶಿಕ ನಿರ್ದೇಶಕರು, ಶ್ರೀ. ಕ್ಷೇ. ಧ. ಗ್ರಾ. ಯೋ. ರೊನಾಲ್ಡ್ ಸಿಲ್ವನ್ ಡಿ’ಸೋಜಾ, ಆಡಳಿತ ನಿರ್ದೇಶಕರು ಲೆಕ್ಸಾ ಲೈಟಿಂಗ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್, ಜೋನ್ ಗ್ರೇಸಿ ಲೋಬೋ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ಮತ್ತು ಬೆಳ್ತಂಗಡಿಯ ಚಾರ್ಟರ್ಡ್ ಅಕೌಂಟೆಂಟ್ ಸಿಎ ಗಾಯತ್ರಿ ರಾವ್. ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ಇವರೊಂದಿಗೆ ಪ್ರಾಂಶುಪಾಲ ಪ್ರೊ.ಅಲೆಕ್ಸ್ ಐವನ್ ಸಿಕ್ವೇರಾ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಲ್ಸನ್ ರೂಪೇಶ್ ಮೊರಾಸ್, ಕಾರ್ಯದರ್ಶಿ ರೊಜಿಟಾ ಸೆರಾ, ಕೋಶಾಧಿಕಾರಿ ಅಜಯ್ ಜೆ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಲ್ಸನ್ ರೂಪೇಶ್ ಮೊರಾಸ್ ಸ್ವಾಗತಿಸಿ, ರೊಜಿಟಾ ಸೆರಾ ವಂದಿಸಿ, ಹಿರಿಯ ವಿದ್ಯಾರ್ಥಿ ಸಂಘದ ನಿರ್ದೇಶಕ ನೆಲ್ಸನ್ ಮೋನಿಸ್‌ರವರು‌ ಕಾರ್ಯಕ್ರಮ ನಿರೂಪಿಸಿದರು. ಗೌರವಾನ್ವಿತ ಹಿರಿಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಮಂಗಳೂರಿನ ಸಂತ ಅಂತೋನಿ ಆಶ್ರಮದ ಸಹಾಯಕ ನಿರ್ದೇಶಕ ಸ್ಟೀವನ್ ನೆಲ್ಸನ್ ಪೆರಿಸ್ ಶ್ರದ್ಧಾಪೂರ್ವಕ ಪ್ರಾರ್ಥನೆಯನ್ನು ನಡೆಸಿ, ಸೇಕ್ರೆಡ್ ಹಾರ್ಟ್ ಕಾಲೇಜಿನ ಸಂಸ್ಥಾಪಕರನ್ನು ಗೌರವಿಸಿ, ಅಗಲಿದ ಆತ್ಮಗಳನ್ನು ಗೌರವದಿಂದ ಸ್ಮರಿಸಿದರು.

ಬಾಂಧವ್ಯ ಬೆಸೆದ ಈ ಕಾರ್ಯಕ್ರಮದಲ್ಲಿ ಅತಿಥಿ ಗಣ್ಯರು ಮತ್ತು ಹಿರಿಯ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದಿನಗಳ ಅಮೂಲ್ಯವಾದ ನೆನಪುಗಳನ್ನು ಹಂಚಿಕೊಂಡರು. ಸೇಕ್ರೆಡ್ ಹಾರ್ಟ್ ಕಾಲೇಜಿನ ಆ ದಿನಗಳು ಹೇಗೆ ತಮ್ಮನ್ನು ಇಂದಿನ ವ್ಯಕ್ತಿಗಳಾಗಿ ರೂಪಿಸಿತು ಎಂಬುದನ್ನು ನೆನಪಿಸಿಕೊಂಡರು. ಅಸಂಖ್ಯಾತ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾದ ಹಿರಿಯ ಉಪನ್ಯಾಸಕರನ್ನು ಪ್ರಶಂಸೆಯ ಸಂಕೇತವಾಗಿ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.

ಪ್ರಸ್ತುತ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದಿನವು ಮಿಂಚಿತು, ಸಭಾ ಕಾರ್ಯಕ್ರಮದ‌ ನಂತರ ಒಳಾಂಗಣ ಮತ್ತು ಹೊರಾಂಗಣ ಮನೋರಂಜನಾ ಆಟಗಳನ್ನು ಹಮ್ಮಿಕೊಳ್ಳಾಲಾಯಿತು. ಕಾರ್ಯಕ್ರಮದ‌ ಬಗ್ಗೆ ಎಲ್ಲಾ ಉಪನ್ಯಾಸಕ ವೃಂದದವರು,‌ ಹಿರಿಯ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here