ಬೆಳ್ತಂಗಡಿ: ಕರ್ನಾಟಕ ರಾಜ್ಯದ ಅಂಗನವಾಡಿ ಕಾರ್ಯಕರ್ತೆ ಅಥವಾ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಉರ್ದು ಭಾಷೆಯನ್ನು ಆಯ್ಕೆ ಮಾಡದಿದ್ದರೆ ಅರ್ಜಿಯ ಮುಂದಿನ ಪ್ರಕ್ರಿಯೆ ಮಾಡಲು ಸಾಧ್ಯವಿಲ್ಲ. ಈ ಮೂಲಕ ಕರ್ನಾಟಕ ಸರ್ಕಾರ ಕ್ರೈಸ್ತರಿಗೆ ಹಾಗೂ ಹಿಂದುಗಳಿಗೆ ಒಂದು ರೀತಿಯಲ್ಲಿ ಅನ್ಯಾಯ ಮಾಡುತ್ತಿರುವುದು ಸ್ಪಷ್ಟ ಗಮನಕ್ಕೆ ಬರುತ್ತದೆ. ಕನ್ನಡವೇ ರಾಜ್ಯ ಭಾಷೆ. ಈ ರೀತಿ ಉರ್ದು ಭಾಷೆಗೆ ಕಡ್ಡಾಯ ಮಾಡಿ ಕನ್ನಡಿಗರನ್ನು ಸಹ ಅವಮಾನ ಮಾಡಿರುವುದು ಕಂಡುಬರುತ್ತದೆ. ಈ ಹುದ್ದೆಯನ್ನು ಪಡೆಯಬೇಕಾದರೆ ಉರ್ದು ಕಲಿಯುವ ಅನಿವಾರ್ಯತೆಯನ್ನು ಮಾಡಿ ಉರ್ದು ಭಾಷೆ ವೈಭವೀಕರಣವನ್ನು ಮಾಡುವ ಪ್ರಯತ್ನ ನಡೆಯುತ್ತಿದೆಯಾ ಎನ್ನುವಂತಹ ಪ್ರಶ್ನೆಯು ಮೂಡುತ್ತದೆ. ಅಷ್ಟೇ ಅಲ್ಲದೆ ಕೇವಲ ಉರ್ದು ಭಾಷಿಕ ಮಹಿಳೆಯರೇ ಇನ್ನು ಅಂಗನವಾಡಿ ಕೇಂದ್ರಗಳನ್ನು ನಡೆಸಲು ಅವಕಾಶ ನೀಡಲಾಗುತ್ತಿದೆಯೇ? ಜೊತೆಗೆ ಈ ಹುದ್ದೆ ಇನ್ನು ಕೇವಲ ಅವರಿಗೆ ಮಾತ್ರ ಸೀಮಿತವೇ ಎಂಬ ಭೀತಿ ಈಗ ಜನರಲ್ಲಿ ನಿರ್ಮಾಣವಾಗಿದೆ ಹಾಗಾಗಿ ಸಮಸ್ತ ಹಿಂದೂಗಳು ಇದರ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಆದುದರಿಂದ ಇಲಾಖೆಯು ಈ ಆದೇಶವನ್ನು ಕೂಡಲೇ ಹಿಂಪಡೆದು ಜಾಲತಾಣದಲ್ಲಿ ಅವಶ್ಯಕ ಬದಲಾವಣೆ ಮಾಡಬೇಕೆಂದು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಇವರಿಗೆ ಹಿಂದೂ ಜಾಗೃತಿ ಸಮಿತಿ ವತಿಯಿಂದ ಮನವಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ವಕೀಲ ಉದಯ ಬಿ.ಕೆ, ಬಳಂಜ ಶ್ರೀ ನಾಗಬ್ರಹ್ಮ ದೇವಸ್ಥಾನ ಮೋಕ್ತೆಸರ ಜಯ ಸಾಲಿಯಾನ್ , ಸಂಜೀವ ಶೆಟ್ಟಿ ಉಜಿರೆ, ಶಿವರಾಮ್ ಉಜಿರೆ, ವಸಂತ ಬಂಗೇರ, ಶಶಿಧರ ಪೆರಿಯಡ್ಕ, ಯಂ. ಹರೀಶ್ ಜಿ. ಉಪಸ್ಥಿತರಿದ್ದರು.