ನವದೆಹಲಿ: ಕುತ್ಲೂರಿಗೆ ಅತ್ಯುತ್ತಮ ಪ್ರವಾಸೋದ್ಯಮ ಹಳ್ಳಿ ಪ್ರಶಸ್ತಿ ಪ್ರದಾನ- ಪ್ರಶಸ್ತಿ ಸ್ವೀಕರಿಸಿದ ಕುತ್ಲೂರಿನ ಹರೀಶ್ ಡಾಕಯ್ಯ, ಶಿವರಾಜ್

0

ಬೆಳ್ತಂಗಡಿ: ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಏರ್ಪಡಿಸಿದ್ದ ಅತ್ಯುತ್ತಮ ಪ್ರವಾಸೋದ್ಯಮ ಹಳ್ಳಿ ಸ್ಪರ್ಧೆ -2024ರ ಸಾಹಸಮಯ ಪ್ರವಾಸಿ ತಾಣ (ಅಡ್ವೆಂಚರ್ ಟೂರಿಸಂ) ವಿಭಾಗದಲ್ಲಿ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮಕ್ಕೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಸೆ.27ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಭಾಗವಹಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಪ್ರಶಸ್ತಿ ಪ್ರದಾನ ಮಾಡಿದರು. ಕುತ್ಲೂರಿನ ಹರೀಶ್ ಡಾಕಯ್ಯ ಪೂಜಾರಿ, ಶಿವರಾಜ್ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಶ್ರೀನಿವಾಸ್ ಪ್ರಶಸ್ತಿ ಸ್ವೀಕರಿಸಿದರು.

ಗ್ರಾಮದ ಯುವಕರ ಶ್ರಮದ ಫಲ: ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಗ್ರಾಮದ ಹರೀಶ್ ಡಾಕಯ್ಯ ಪೂಜಾರಿ ಹಾಗೂ ಕತಾರ್ ಉದ್ಯೋಗಿ ಸಂದೀಪ್ ಕುತ್ಲೂರು ಈ ಸಾಧನೆಯ ಹಿಂದಿನ ರೂವಾರಿಗಳು. ಇವರಿಗೆ ಶಿವರಾಜ್ ಎಂಬುವವರೂ ಸಹಕರಿಸಿದ್ದಾರೆ. ಕುತ್ಲೂರು ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಈ ಮೂವರು ಸೇರಿಕೊಂಡು ಗ್ರಾಮದ ಪ್ರವಾಸೋದ್ಯಮ ಅವಕಾಶಗಳ ಕುರಿತು ಸಮಗ್ರ ವಿವರಗಳನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದರು. ಸುದೀರ್ಘವಾದ ಈ ಪ್ರಕ್ರಿಯೆಯು ವಿಡಿಯೋ, ಫೋಟೋ, ಪಿಪಿಟಿ ಸಹಿತ ಹಲವು ಸುತ್ತುಗಳನ್ನು ಒಳಗೊಂಡಿತ್ತು. ಆನ್‌ಲೈನ್ ಮೂಲಕವೇ ಎಲ್ಲ ಪ್ರಕ್ರಿಯೆಗಳು ನಡೆದಿದ್ದವು.

ಕುತ್ಲೂರಿನಲ್ಲಿ ಅಂಥದ್ದೇನಿದೆ?: ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಕುತ್ಲೂರು ಗ್ರಾಮ ಪ್ರಾಕೃತಿಕ ಸೌ೦ದರ್ಯವನ್ನೇ ಹೊದ್ದು ಮಲಗಿದೆ. ಗ್ರಾಮದಲ್ಲಿ ಅರ್ಬಿ ಫಾಲ್ಸ್ ಎಂದು ಸ್ಥಳೀಯರು ಕರೆಯುವ ಅದ್ಭುತವಾದ ಜಲಪಾತವಿದ್ದು, ವರ್ಷದ ಏಳೆಂಟು ತಿಂಗಳು ತುಂಬಿ ಹರಿಯುತ್ತಿರುವುದನ್ನು ವೀಕ್ಷಿಸುವುದೇ ಸೊಬಗು. ಇಲ್ಲಿನ ಬೆಟ್ಟದಲ್ಲಿ ಹಲವರು ಟ್ರೆಕ್ಕಿಂಗ್ ಮಾಡುತ್ತಿದ್ದು, ಚಾರಣಪ್ರಿಯರಿಗೆ ಹೇಳಿ ಮಾಡಿಸಿದ ಜಾಗ. ಬೆಟ್ಟದಲ್ಲಿ ಬೈಕ್‌ಗಳಲ್ಲಿ ಸಾಹಸ ಕ್ರೀಡೆಗಳೂ ನಡೆಯುತ್ತವೆ. ಪಕ್ಕದಲ್ಲೇ ನದಿ ಇದ್ದು, ಫಿಶಿಂಗ್ ಮಾಡಬಹುದು. ಕುತ್ಲೂರಿನ 50 ಕಿ.ಮೀ. ಆಸುಪಾಸಿನಲ್ಲಿ ಧರ್ಮಸ್ಥಳ, ಕಾರ್ಕಳ, ಮೂಡುಬಿದಿರೆ, ಮಂಗಳೂರು ಮತ್ತಿತರ ಜನಪ್ರಿಯ ಪ್ರವಾಸಿ ತಾಣ, ಬೀಚ್, ದೇವಸ್ಥಾನ, ತೀರ್ಥಕ್ಷೇತ್ರಗಳಿವೆ. ಇವೆಲ್ಲ ಮಾಹಿತಿಯನ್ನು ಯುವಕರ ತಂಡ ಪ್ರವಾಸೋದ್ಯಮ ಇಲಾಖೆಗೆ ಅಚ್ಚುಕಟ್ಟಾಗಿ ಫೋಟೋ, ವಿಡಿಯೋ ಸಹಿತ ದಾಖಲೆಗಳಲ್ಲಿ ಒಪ್ಪಿಸಿದೆ.

LEAVE A REPLY

Please enter your comment!
Please enter your name here