ಉಜಿರೆ: ಹೊಸ ಜವಾಬ್ದಾರಿಗಳನ್ನು ಸ್ವೀಕರಿಸುವುದಕ್ಕಿಂತಲು, ಪದಾಧಿಕಾರಿಗಳಾದ ಬಳಿಕ ಜವಾಬ್ದಾರಿಗಳನ್ನು ಹೇಗೆ ಶಿಸ್ತು ಬದ್ಧವಾಗಿ ನಿರ್ವಹಿಸುತ್ತೇವೆ ಎಂಬುದು ಬಹುಮುಖ್ಯ. ಕ್ಲಬ್ ನ ಪ್ರತಿಯೊಂದು ಚಟುವಟಿಕೆಗಳು ಸಮಾಜದ ಜೊತೆ ನಾವುಗಳು ಬೆರೆಯಲು ಸಹಕಾರಿಯಾಗಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ ಅಭಿಪ್ರಾಯಪಟ್ಟರು.
ಇವರು ಉಜಿರೆಯ ಎಸ್.ಡಿ.ಎಂ ತಾಂತ್ರಿಕ ವಿದ್ಯಾಲಯದಲ್ಲಿ ನಡೆದ ಬೆಳ್ತಂಗಡಿ ರೋಟರಿ ಕ್ಲಬ್ ನ ಭಾಗವಾದ ಇಂಟರಾಕ್ಟ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆಜೊತೆಗೇ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವುದರಿಂದ ಬೌದ್ಧಿಕ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಡಿಸ್ಟ್ರಿಕ್ಟ್ ಇಂಟರಾಕ್ಟ್ ಕ್ಲಬ್ ಚೇರ್ಮನ್ ರೋ.ಜಯಕುಮಾರ್ ಶೆಟ್ಟಿ ಮಾತನಾಡಿ, ನೂತನ ಪದಾಧಿಕಾರಿಗಳಿಗೆ ಪದವಿ ಹಸ್ತಾಂತರ ಮಾಡಿದರು. ಎಸ್.ಡಿ.ಎಂ ಸಿಬಿಎಸ್ಇ ಶಾಲೆಯ ಪ್ರಾಂಶುಪಾಲ, ಮನಮೋಹನ್ ನಾಯ್ಕ್ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿ ವಿಧ್ಯಾರ್ಥಿಗಳಿಗೆ ಶುಭಾಶಯಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಜಿರೆಯ ಎಸ್.ಡಿ.ಎಂ ಸ್ಟೇಟ್ ಆಂಗ್ಲ ಮಾಧ್ಯಮ ಶಾಲೆ, ಎಸ್.ಡಿ.ಎಂ ಸಿಬಿಎಸ್ಇ ಶಾಲೆ, ಎಸ್.ಡಿ.ಎಂ ಸೆಕೆಂಡರಿ ಶಾಲೆ, ಬೆಳ್ತಂಗಡಿ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆ, ಬೆಳಾಲು ಎಸ್.ಡಿ.ಎಂ ಕನ್ನಡ ಮಾಧ್ಯಮ ಶಾಲೆ, ಬದನಾಜೆ ಅನುದಾನಿತ ಸರ್ಕಾರಿ ಪ್ರೌಢ ಶಾಲೆ ಹಾಗು ಅರಸಿನಮಕ್ಕಿ ಅನುದಾನಿತ ಸರ್ಕಾರಿ ಪ್ರೌಢ ಶಾಲೆ ಸೇರಿದಂತೆ ಒಟ್ಟು ಎಂಟು ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡು ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಇಂಟರಾಕ್ಟ್ ಕ್ಲಬ್ ಚೇರ್ಮನ್ ರೋ.ಶ್ರೀನಾಥ್, ರೋ.ಪ್ರಕಾಶ್ ಪ್ರಭು, ರೋ. ಆದರ್ಶ್ ಕಾರಂತ್ ಮತ್ತು ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. ಇಂಟರಾಕ್ಟ್ ಕ್ಲಬ್ ಸದಸ್ಯೆ ವಿದ್ಯಾರ್ಥಿನಿ ಶ್ರೇಯಾ ಪ್ರಾರ್ಥನೆ ಹಾಡಿದರು. ಕಾರ್ಯಕ್ರಮವನ್ನು ತೃಪ್ತ ಜೈನ್ ನಿರೂಪಿಸಿ, ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್ ವಂದಿಸಿದರು.