ಬೆಳ್ತಂಗಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉಲ್ಲೇಖಿಸಿ ‘ಕಲೆಕ್ಷನ್ ಮಾಸ್ಟರ್’ ಎಂದು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ ಎಂಬುದು ಕೇವಲ ವದಂತಿ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕಲೆಕ್ಷನ್ ಮಾಸ್ಟರ್ ಎಂದು ಕಿಚಾಯಿಸಿ ಅವರ ಭಾವಚಿತ್ರದೊಂದಿಗೆ ಶಾಸಕ ಹರೀಶ್ ಪೂಂಜರವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿ.ಪಂ. ಮಾಜಿ ಸದಸ್ಯರಾದ ಕಾಂಗ್ರೆಸ್ ಮುಖಂಡ ಶೇಖರ್ ಕುಕ್ಕೇಡಿ ನೀಡಿದ್ದ ದೂರಿನಂತೆ 26-10-2023ರಂದು ಹರೀಶ್ ಪೂಂಜ ವಿರುದ್ಧ ಐಪಿಸಿ 504 ಮತ್ತು 505(2)ರಡಿ ಬೆಳ್ತಂಗಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ತನಿಖೆ ಪೂರ್ಣಗೊಳಿಸಿದ ಪೊಲೀಸರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹರೀಶ್ ಪೂಂಜ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ ಎಂದು ವಿವಿಧ ವೆಬ್‌ಸೈಟ್ ಸಹಿತ ಸಾಮಾಜಿಕ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದೆ. ಆದರೆ, ಇದು ಸತ್ಯಕ್ಕೆ ದೂರವಾದ ಮಾಹಿತಿ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿದೆ.
ಪ್ರಕರಣದ ತನಿಖಾಧಿಕಾರಿಯಾಗಿರುವ ಬೆಳ್ತಂಗಡಿ ಪೊಲೀಸ್ ಠಾಣಾ ಎಸ್.ಐ. ಮುರಳೀಧರ ಅವರು ಹರೀಶ್ ಪೂಂಜರ ವಿರುದ್ಧದ ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿಸುತ್ತಿದ್ದಾರೆ. ಅಲ್ಲದೆ ಫೇಸ್‌ಬುಕ್‌ನಲ್ಲಿ ಹರೀಶ್ ಪೂಂಜ ಅವರು ಅಪ್ರೋಡ್ ಮಾಡಿರುವ ಬರಹ ಹಾಗೂ ಭಾವಚಿತ್ರಗಳ ಕುರಿತು ಮಾಹಿತಿ ನೀಡುವಂತೆ ತನಿಖಾಧಿಕಾರಿಯವರು ಫೇಸ್‌ಬುಕ್ ಪಂಪನಿಗೆ ನೊಟೀಸ್ ಜಾರಿಗೊಳಿಸಿ ಮಾಹಿತಿ ಕೋರಿದ್ದಾರೆ. ಹೊರತು ಚಾರ್ಚ್‌ಶೀಟ್ ಸಲ್ಲಿಕೆ ಆಗಿಲ್ಲ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಶಾಸಕರ ವಿರುದ್ಧ ಈಗಾಗಲೇ 3 ಚಾರ್ಜ್‌ಶೀಟ್ ಸಲ್ಲಿಕೆ: ಶಾಸಕ ಹರೀಶ್ ಪೂಂಜ ಅವರ ವಿರುದ್ಧ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಈಗಾಗಲೇ ೩ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಅಕ್ರಮ ಗಣಿಗಾರಿಕೆ ಮತ್ತು ಸ್ಫೋಟಕ ಕಾಯ್ದೆಯಡಿ ಬಂಧಿತರಾಗಿದ್ದ ತಾಲೂಕು ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿಯವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮೇ 18ರಂದು ರಾತ್ರಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಿ ಪೊಲೀಸರನ್ನು ನಿಂದಿಸಿ ಬೆದರಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ(ಐಪಿಸಿ 143, 147, 341, 353, 506) ಮತ್ತು ಶಶಿರಾಜ್ ಶೆಟ್ಟಿ ಬಂಧನ ಖಂಡಿಸಿ ಮೇ ೨೦ರಂದು ತಾಲೂಕು ಆಡಳಿತ ಸೌಧದಲ್ಲಿ ಪ್ರತಿಭಟನೆ ನಡೆಸಿ ಪೊಲೀಸರನ್ನು ನಿಂದಿಸಿ ಬೆದರಿಸಿದ ಆರೋಪ(ಐಪಿಸಿ 143, 147, 341, 504 ಮತ್ತು 506) ಹಾಗೂ ಕಳೆಂಜದಲ್ಲಿ ಲೋಲಾಕ್ಷ ಎಂಬವರು ನಿರ್ಮಿಸಿದ್ದ ಮನೆಯನ್ನು ಅರಣ್ಯ ಇಲಾಖೆಯವರು ತೆರವು ಮಾಡಲು ಮುಂದಾಗಿದ್ದಾಗ ಅದರ ವಿರುದ್ಧ ಪ್ರತಿಭಟನೆ ನಡೆಸುವ ವೇಳೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಕೆ.ಕೆ. ಜಯಪ್ರಕಾಶ್ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಬೆದರಿಸಿದ ಆರೋಪದಡಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್(ಐಪಿಸಿ 143, 353, 504 ಮತ್ತು 149)ಗೆ ಸಂಬಂಧಿಸಿ ಈಗಾಗಲೇ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಚ್‌ಶೀಟ್ ಸಲ್ಲಿಸಲಾಗಿದೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಕಲೆಕ್ಷನ್ ಮಾಸ್ಟರ್ ಎಂದು ಫೇಸ್‌ಬುಕ್‌ನಲ್ಲಿ ಹೀಯಾಳಿಸಿದಕ್ಕಾಗಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ (ಐಪಿಸಿ 504ಮತ್ತು 505(2) ಎಫ್‌ಐಆರ್‌ನಲ್ಲಿಯೂ ಚಾರ್ಚ್‌ಶೀಟ್ ಸಲ್ಲಿಕೆಯಾಗಿದೆ ಎಂದು ವದಂತಿ ಹರಡಿದೆ. ಆದರೆ, ಈ ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ ಹೊರತು ಚಾರ್ಚ್‌ಶೀಟ್ ಸಲ್ಲಿಕೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿದೆ.