ಪೆರಿಯಡ್ಕ: ಚಿಬಿದ್ರೆ ಗ್ರಾಮದ ಪೆರಿಯಡ್ಕ ಸಮೀಪದ ಮಾಕಳ ಎಂಬಲ್ಲಿ ಆನೆ ದಾಳಿ ಮಾಡಿ ಬೆಳೆ ಹಾನಿ ಮಾಡಿದೆ. ಸೆ.7ರಂದು ತಡರಾತ್ರಿ ಮರಿಯೊಂದಿಗೆ ದಾಳಿ ಮಾಡಿದ ಆನೆಯು, ರಾಮಣ್ಣ ಗೌಡ, ಸೋಮನಾಥ ಗೌಡ, ಲೋಕೇಶಗೌಡ, ಎಂ.ಟಿ.ಯತೀಶ್ ಅವರ ತೆಂಗು, ಬಾಳೆ, ಭತ್ತದ ಬೆಳೆಯನ್ನು ಧ್ವಂಸ ಮಾಡಿವೆ.ರಾಮಣ್ಣಗೌಡ ಅವರ ಭತ್ತದ ಗದ್ದೆಯಲ್ಲಿ ಓಡಾಡಿರುವ ಆನೆಗಳು ಸಸಿಗಳನ್ನು ತುಳಿದು ಧ್ವಂಸಗೊಳಿಸಿವೆ. ಫಲಭರಿತ 8 ತೆಂಗಿನ ಮರಗಳನ್ನು ಉರುಳಿಸಿವೆ. ತೋಟದಲ್ಲಿದ್ದ ಬಾಳೆಗಿಡಗಳನ್ನೂ ಸಂಪೂರ್ಣವಾಗಿ ಧ್ವಂಸಗೊಳಿಸಿವೆ.
ಲೋಕೇಶ್ ಗೌಡ ಅವರ ಎರಡು ತೆಂಗಿನ ಮರ, ಬಾಳೆಗಿಡ, ಸೋಮನಾಥ ಗೌಡ ಅವರ ಬಾಳೆಗಿಡ, ಯತೀಶ್ ಅವರ ಬಾಳೆತೋಟ ಸಂಪೂರ್ಣವಾಗಿ ನಾಶವಾಗಿವೆ.ಕೆಲ ದಿನಗಳ ಹಿಂದೆ ದಾಳಿ ಮಾಡಿದ್ದ ಆನೆ, ಮತ್ರಡ್ಕ ಕೃಷ್ಣಪ್ಪ ಗೌಡ, ಮಾಕಳ ಶ್ರೀನಿವಾಸ ಗೌಡ ಅವರ ಫಲಭರಿತ ಬಾಳೆ ತೋಟವನ್ನು ಧ್ವಂಸಗೊಳಿಸಿತ್ತು.
ಈ ಭಾಗದಲ್ಲಿ ಆನೆ ದಾಳಿ ಹೆಚ್ಚಾಗಿದ್ದು, ಬೆಳೆ ಹಾನಿಯಿಂದ ರೈತರು ಕಂಗೆಟ್ಟಿದ್ದಾರೆ. ಮರಿಯೊಂದಿಗಿರುವ ಆನೆಯು ಮತ್ತೆ ದಾಳಿ ಮಾಡುವ ಸಾಧ್ಯತೆ ಇದ್ದು, ಅರಣ್ಯ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ರೈತರು ಮನವಿ ಮಾಡಿದ್ದಾರೆ.