ಪುದುವೆಟ್ಟು: ಆರ್‌ಎಫ್ಒ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭೇಟಿ- ಮಡ್ಯದಲ್ಲಿ ರಸ್ತೆ ಒತ್ತುವರಿ ತೆರವು ಬಳಿಕ ಸ್ಥಳ ಪರಿಶೀಲನೆ

0

ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ಮಡ್ಯದಲ್ಲಿ ರಸ್ತೆ ಒತ್ತುವರಿ ತೆರವುಗೊಳಿಸಿರುವುದನ್ನು ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಧನಂಜಯ ಪರಿಶೀಲನೆ ನಡೆಸಿದ್ದಾರೆ.

ಮಡ್ಯದಿಂದ ಹೊಳೆಯವರೆಗಿನ ಪಂಚಾಯತ್ ರಸ್ತೆಯನ್ನು ಶ್ರೀಪತಿ ಹೆಬ್ಬಾರ್ ಎಂಬವರು ಅತಿಕ್ರಮಣ ಮಾಡಿದ್ದು, ತೆರವುಗೊಳಿಸಬೇಕೆಂದು ಗ್ರಾಮಸಭೆಯಲ್ಲಿ ನಿರ್ಣಯಿಸಿದಂತೆ ಸೆ.2ರಂದು ಪೊಲೀಸ್ ಭದ್ರತೆಯಲ್ಲಿ ಗ್ರಾಮ ಪಂಚಾಯತ್ ರಸ್ತೆಯನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಿತ್ತು.

ಈ ಕುರಿತು ಮಾಹಿತಿ ಪಡೆದ ಆರ್.ಎಫ್.ಒ. ತ್ಯಾಗರಾಜ್, ಸೆ.2ರಂದು ಸಂಜೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಇದು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ, ಈ ಕುರಿತು ಶೀಘ್ರದಲ್ಲೇ ತಹಶೀಲ್ದಾರ್ ಜತೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಡಿಆರ್‌ಎಫ್‌ಒ ರವಿಚಂದ್ರ ಜತೆಗಿದ್ದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭೇಟಿ: ಸೆ.3ರಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಧನಂಜಯ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ತಾಲೂಕು ಭೂನ್ಯಾಯ ಮಂಡಳಿಯ ಸದಸ್ಯ ಬೊಮ್ಮಣ್ಣ ಗೌಡ, ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷ ಪೂರ್ಣಾಕ್ಷ, ಅಭಿವೃದ್ಧಿ ಅಧಿಕಾರಿ ರವಿ ಬಸಪ್ಪನಗೌಡ, ಎಲ್ಲ ಸದಸ್ಯರು ಉಪಸ್ಥಿತರಿದ್ದರು.

ಸ್ಥಳದಿಂದ ಜೀಪು ತೆರವು: ಸೆ.2ರಂದು ಕಾರ್ಯಾಚರಣೆ ಸಂದರ್ಭ ಒಂದು ಟೈರು ಕಳಚಿದ ಸ್ಥಿತಿಯಲ್ಲಿ ಜೀಪೊಂದನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಲಾಗಿತ್ತು. ಕೇಳಿದಾಗ ಟೈರು ಪಂಕ್ಚರ್ ಆಗಿದೆ ಎಂದು ಕೆಲಸಗಾರರು ತಿಳಿಸಿದ್ದರು. ಆದರೆ, ಸಂಜೆಯ ಹೊತ್ತಿಗೆ ಜೀಪನ್ನು ಸ್ಥಳದಿಂದ ತೆರವುಗೊಳಿಸಲಾಗಿದೆ. ಸೆ.3ರಂದು ಪಂಚಾಯತ್ ಸ್ಥಳ ಪರಿಶೀಲನೆ ನಡೆಸಿದ್ದು, ರಸ್ತೆಯು ಯಥಾಸ್ಥಿತಿಯಲ್ಲಿದೆ ಎಂದು ತಿಳಿಸಿದೆ.

p>

LEAVE A REPLY

Please enter your comment!
Please enter your name here