ಬೆಳಾಲು: ನಿವೃತ್ತ ಮುಖ್ಯಶಿಕ್ಷಕ ಬಾಲಕೃಷ್ಣ ಭಟ್ ಬರ್ಬರ ಕೊಲೆಹಾಡಹಗಲೇ ಕೃತ್ಯ, ಮನೆಯ ಅಂಗಳದಲ್ಲಿ ಶವ ಪತ್ತೆ

0

ಬೆಳಾಲು: ನಿವೃತ್ತ ಮುಖ್ಯೋ ಪಾಧ್ಯಾಯರೊಬ್ಬರನ್ನು ಹಾಡಹಗಲೇ ಅವರ ಮನೆಯ ಅಂಗಳದಲ್ಲೇ ಮಾರಕಾಸ್ತ್ರದಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಬೆಳಾಲಿನಲ್ಲಿ ಆ.೨೦ರಂದು ನಡೆದಿದೆ.
ಬೆಳಾಲಿನ ಹಳೆ ಸೊಸೈಟಿಯ ಎದುರು ಭಾಗದಲ್ಲಿರುವ ಎಸ್.ಪಿ.ಬಿ. ಕಾಂಪೌಂಡ್‌ನ ಮನೆಯಲ್ಲಿ ನೆಲೆಸಿದ್ದ ನಿವೃತ್ತ ಮುಖ್ಯ ಶಿಕ್ಷಕ ಎಸ್.ಪಿ. ಬಾಲಕೃಷ್ಣ ಭಟ್ ಬಡೆಕ್ಕಿಲ್ಲಾಯ (೮೩) ಕೊಲೆಯಾದವರು. ಅಂಗಳದಲ್ಲಿ ಬಟ್ಟೆ ಒಗೆಯುವ ಕಲ್ಲಿನ ಪಕ್ಕ ಶವ ಪತ್ತೆಯಾಗಿದ್ದು, ತಲೆಯ ಹಿಂಬದಿಗೆ ಕತ್ತಿಯ ಬಲವಾದ ಏಟು ಬಿದ್ದಿರುವುದು ಕಂಡುಬಂದಿದೆ. ಪುತ್ರ ಸುರೇಶ್ ನೀಡಿದ ದೂರಿನಂತೆ ಅ.ಕ್ರ.೬೨/೨೦೨೪ ಕಲಂ:೧೦೩ ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಧರ್ಮಸ್ಥಳ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಯಾರು ಕೊಲೆಗಾರ?: ಬಾಲಕೃಷ್ಣ ಭಟ್‌ರ ಮನೆಯ ಅಡುಗೆ ಕೋಣೆಯಲ್ಲಿ ಹೊಕೈ ನಡೆದಿರುವಂತೆ ಕಂಡುಬರುತ್ತಿದೆ. ಅಡುಗೆ ಕೋಣೆಯಲ್ಲಿರುವಾಗ ದುಷ್ಕರ್ಮಿಗಳು ಬಾಲಕೃಷ್ಣ ಭಟ್ ಮೇಲೆ ದಾಳಿ ಮಾಡಿದ್ದು, ಕೋಣೆಯಲ್ಲಿ ಪಾತ್ರೆ ಪಗಡೆಗಳು ಎಲ್ಲೆಡೆ ಬಿದ್ದಿವೆ. ರಕ್ತದ ಕಲೆಗಳು ಕಾಣುತ್ತಿದ್ದವು. ಕೋಣೆಯ ನಡುಭಾಗದಲ್ಲಿ ಚಾಕು ಬಿದ್ದಿದ್ದು, ಮನೆಯ ಒಳಭಾಗದಿಂದ ಮೆಟ್ಟಿಲಿನ ತನಕವೂ ರಕ್ತ ಬಿದ್ದಿದೆ. ದುಷ್ಕರ್ಮಿಗಳಿಂದ ಬಾಲಕೃಷ್ಣ ಭಟ್ ತಪ್ಪಿಸಿಕೊಂಡು ಓಡಿರುವಂತೆ ಕಂಡಿದ್ದು, ಅಂಗಳಕ್ಕಿಂತ ಹೆಚ್ಚು ಓಡಲು ಸಾಧ್ಯವಾಗದೆ ಬಾಲಕೃಷ್ಣ ಭಟ್ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ಪುತ್ತೂರಿಗೆ ಹೋಗಿದ್ದ ಪುತ್ರ: ಪುತ್ರ ಸುರೇಶ್(೪೮) ಮನೆಕೆಲಸ ಮುಗಿಸಿ ಬೆಳಗ್ಗೆ ಪುತ್ತೂರಿಗೆ ಹೋಗಿದ್ದು, ತಂದೆ ಮನೆಯಲ್ಲಿದ್ದರು. ಸಂಜೆ ವಾಪಸ್ ಬಂದಾಗ ಮನೆಯ ಬಾಗಿಲು ತೆರೆದುಕೊಂಡಿತ್ತು. ಮನೆಯ ಒಳಗಡೆ ಅಲ್ಲಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದವು. ಮನೆಯ ಪರಿಸರದಲ್ಲಿ ಹುಡುಕಿದಾಗ ಅಂಗಳದಲ್ಲಿ ತಂದೆ ಬಿದ್ದುಕೊಂಡಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದು, ರಕ್ತಸಿಕ್ತವಾಗಿದ್ದರು. ಪರಿಶೀಲಿಸಿದಾಗ ಮೃತಪಟ್ಟಿರುವುದು ದೃಢವಾಗಿತ್ತು ಎಂದು ಸುರೇಶ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸ್ಥಳಕ್ಕೆ ಎಸ್.ಪಿ. ಭೇಟಿ, ತನಿಖೆ ಚುರುಕು: ನಿವೃತ್ತ ಶಿಕ್ಷಕನ ಕೊಲೆ ಪ್ರಕರಣ ಸಂಬಂಧಿಸಿದಂತೆ ಮೊದಲು ಧರ್ಮಸ್ಥಳ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ನಂತರ ಘಟನಾ ಸ್ಥಳಕ್ಕೆ ದ.ಕ. ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಸೇರಿದಂತೆ ವಿವಿಧ ತಂಡ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯ ಪ್ರಸಾದ್, ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ, ಧರ್ಮಸ್ಥಳ ಠಾಣಾ ಸಬ್ ಇನ್ಸ್‌ಪೆಕ್ಟರ್‌ಗಳಾದ ಕಿಶೋರ್ ಪಿ, ಸಮರ್ಥ್ ಆರ್. ಗಾಣಿಗೇರ ಮತ್ತು ಸಿಬ್ಬಂದಿ, ಮಂಗಳೂರು ಬೆರಳಚ್ಚು ವಿಭಾಗದ ಡಿವೈಎಸ್ಪಿ ಗೌರೀಶ್, ಸಿಬ್ಬಂದಿ ಸಚಿನ್ ರೈ, ಉದಯ್, ಮಂಗಳೂರು ಎಫ್.ಎಸ್.ಎಲ್. ಸೋಕೋ ತಂಡದ ಅರ್ಪಿತಾ, ಮಂಗಳೂರು ಡಾಗ್ ಸ್ಕ್ವೇಡ್ ಮತ್ತು ತಂಡದ ಸಿಬ್ಬಂದಿ ದಿನೇಶ್, ಚಂದ್ರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳಗ್ಗೆ ೧೧.೪೫ರಿಂದ ಸಂಜೆ ೪.೩೦ರ ನಡುವೆ ಕೊಲೆ ನಡೆದಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಐ.ಜಿ. ಅಮಿತ್ ಸಿಂಗ್ ಭೇಟಿ
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರು ಘಟನಾ ಸ್ಥಳಕ್ಕೆ ಆ.೨೧ರಂದು ಭೇಟಿ ನೀಡಿ ಮಾಹಿತಿ ಪಡೆದರು. ಬಳಿಕ ತನಿಖಾ ತಂಡದ ಜೊತೆ ಐಜಿಪಿ ಚರ್ಚಿಸಿದರು.

ಆರೋಪಿಗಳನ್ನು ಪತ್ತೆ ಹಚ್ಚಲಾಗುತ್ತಿದೆ: ಎಸ್.ಪಿ.
ಕೊಲೆ ಪ್ರಕರಣದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಮೃತರ ಮನೆಯಲ್ಲಿ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ದರೋಡೆ, ಕಳ್ಳತನ ಇತ್ಯಾದಿ ವಿಚಾರಗಳು ಕಂಡು ಬಂದಿಲ್ಲ. ಯಾರು ಮಾಡಿದ್ದಾರೆ ಮತ್ತು ಯಾಕೆ ಕೊಲೆ ಮಾಡಿದ್ದಾರೆ ಎನ್ನುವ ವಿಚಾರ ಆರೋಪಿಗಳ ಪತ್ತೆಯ ಬಳಿಕ ಬಹಿರಂಗವಾಗಲಿದೆ ಎಂದು ಎಸ್‌ಪಿ ಯತೀಶ್ ಎನ್. ಅವರು ಪುತ್ತೂರಿನಲ್ಲಿ ಆ.೨೧ರಂದು ಸುದ್ದಿ ಬಿಡುಗಡೆಗೆ ತಿಳಿಸಿದ್ದಾರೆ.

ಕೃಷಿಕ, ಯೋಗಗುರು
ಬೆಳಾಲಿನ ಕೊಲ್ಪಾಡಿ ಕಿರಿಯ ಪ್ರಾಥಮಿಕ ಶಾಲೆ, ಕೊಯ್ಯೂರು, ಇಂದಬೆಟ್ಟು ಮೊದಲಾದ ಸರಕಾರಿ ಶಾಲೆಗಳಲ್ಲಿ ಬಾಲಕೃಷ್ಣ ಭಟ್ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಬೆಳಾಲಿನ ತೋಟದ ನಡುವಿನ ಎಸ್.ಪಿ.ಬಿ. ಕಾಂಪೌಂಡ್‌ನ ಮನೆಯಲ್ಲಿ ಹಿರಿಮಗ ಸುರೇಶ್ ಜತೆ ಬಾಲಕೃಷ್ಣ ಭಟ್ ವಾಸವಾಗಿದ್ದರು. ಬಾಲಕೃಷ್ಣ ಭಟ್‌ರ ಪತ್ನಿ ಲೀಲಾ ಮೂರು ವರ್ಷಗಳ ಹಿಂದೆ ವಿಧಿವಶರಾಗಿದ್ದರು. ಬಾಲಕೃಷ್ಣ ಭಟ್ ತನ್ನ ತೋಟ ನೋಡಿಕೊಳ್ಳುತ್ತಿದ್ದು, ಜೊತೆಗೆ ಹಲವು ಮಕ್ಕಳಿಗೆ ಯೋಗ ಪಾಠ ಮಾಡುತ್ತಿದ್ದರು. ಬಾಲಕೃಷ್ಣ ಭಟ್‌ರ ಒಬ್ಬ ಮಗ ಹರೀಶ್ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದು, ಮತ್ತೊಬ್ಬ ಮಗ ಸುರೇಶ್ ಲ್ಯಾಂಡ್ ಲಿಂಕ್ಸ್ ಇತ್ಯಾದಿ ವಹಿವಾಟು ಮಾಡುತ್ತಾ ತಂದೆಯ ಜೊತೆ ವಾಸವಿದ್ದರು.

LEAVE A REPLY

Please enter your comment!
Please enter your name here