ಹೊಸಂಗಡಿ: ಪ್ರಕೃತಿ ಹಚ್ಚ ಹಸಿರಾಗಿದ್ದರೆ ಮಾನವನಿಗೆ ಉಸಿರು. ಮನುಷ್ಯ ಮತ್ತು ಪ್ರಕೃತಿಯ ನಡುವೆ ಪರಸ್ಪರ ಕೊಡುಕೊಳ್ಳುವಿಕೆ ಇದ್ದರೆ ಬದುಕು ಹಸನಾಗುತ್ತದೆ. ಪ್ರಕೃತಿಯ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಆ ನಿಟ್ಟಿನಲ್ಲಿ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಸಸ್ಯ ಶ್ಯಾಮಲಾ ಎಂಬ ಘೋಷ ವಾಕ್ಯದಡಿ ಮೂಡುಬಿದಿರೆಯಿಂದ ವೇಣೂರಿನವರಗೆ ವಿವಿಧ ತಳಿಗಳ ಒಂದು ಸಾವಿರ ಸಸ್ಯಗಳನ್ನು ನೆಡುವ ಸಂಕಲ್ಪವನ್ನು ತೊಟ್ಟು ಈಗಾಗಲೇ ಕಾರ್ಯತತ್ಪರವಾಗಿದೆ. ಇಂದು ನೆಡುವ ಗಿಡ ಸಾವಿರ ಜನರಿಗೆ ಆಶ್ರಯವಾಗಬೇಕು. ಸಮಾಜದಲ್ಲಿ ಪರಿಸರ ಜಾಗೃತಿ ಮೂಡಬೇಕು.
ವಿದ್ಯಾರ್ಥಿಗಳಲ್ಲಿ ಪ್ರಕೃತಿ ಪ್ರೇಮವು ಅರಳಿ ಪರಿಸರ ಸಂರಕ್ಷಣೆಯ ಹೊಣೆಗಾರಿಕೆ ಮೂಡಬೇಕು. ಕಾರ್ಯಕ್ರಮದ ಉzಶ ಸಫಲವಾಗಬೇಕು ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ನುಡಿದರು.
ಅವರು ಹೊಸಂಗಡಿ ಗ್ರಾಮ ಪಂಚಾಯಿತಿ ಸಮೀಪದ ಬಡಕೋಡಿ ಕಿರಿಂಬಿ ಕೆರೆಯ ಹತ್ತಿರ ಸಸ್ಯ ಶ್ಯಾಮಲಾ ಘೋಷವಾಕ್ಯದಡಿ ಒಂದು ಸಾವಿರ ಗಿಡ ನೆಡುವ ಬೃಹತ್ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಸ್ಯ ಶ್ಯಾಮಲಾ ಸಂಕಲ್ಪಕ್ಕೆ ಗ್ರಾಮ ಪಂಚಾಯಿತಿ ಹೊಸಂಗಡಿ, ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಮತ್ತು ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಪದಾಧಿಕಾರಿಗಳು ಸಹಯೋಗ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಗದೀಶ್ ಹೆಗ್ಡೆ ವಹಿಸಿದ್ದರು.ಎ ಜೀವಂಧರ್ ಕುಮಾರ್, ಆನುವಂಶೀಯ ಆಡಳಿತ ಮೊಕ್ತೇಸರರು, ಶ್ರೀ ಕ್ಷೇತ್ರ ಪಡ್ಯಾರಬೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಿದ್ದಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಅಧ್ಯಕ್ಷರಾದ ರೋ. ಶಿವಯ್ಯ ಎಸ್ ಎಲ್, ಟೆಂಪಲ್ ಟೌನ್ ಮೂಡುಬಿದಿರೆ ರೋಟರಿ ಅಧ್ಯಕ್ಷ ಪೂರ್ಣಚಂದ್ರ ಜೈನ್, ಪ್ರಗತಿಪರ ಕೃಷಿಕರಾದ ವಿದ್ಯಾನಂದ ಜೈನ್ ಬಡಕೋಡಿ, ರೋ. ರಾಘವೇಂದ್ರ ಭಟ್ ನಿಕಟಪೂರ್ವ ಸಹಾಯಕ ಗವರ್ನರ್ ರೋಟರಿ ಜಿಲ್ಲಾ 3181 ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕ ತೇಜಸ್ವೀ ಭಟ್ ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.