ಕನ್ಯಾಡಿ II: ಧರ್ಮಸ್ಥಳ ದ.ಕ.ಜಿ.ಪ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಸಭೆ

0

ಕನ್ಯಾಡಿ II: ಧರ್ಮಸ್ಥಳ ದ.ಕ.ಜಿ.ಪ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಸಾಮಾಜಿಕ ಪರಿಶೋಧನಾ ಹಾಗೂ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಇದರ ಶಾಲಾ ಪೋಷಕರ ಸಭೆಯು ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಬೆಳ್ತಂಗಡಿ ತಾಲ್ಲೂಕಿನ ಅತ್ಯುತ್ತಮ ಸರಕಾರಿ ಶಾಲೆಗಳಲ್ಲಿ ಒಂದಾಗಿರುವ ಕನ್ಯಾಡಿ ಶಾಲೆಯಲ್ಲಿ ಒಂದನೇ ತರಗತಿಯಿಂದ ಎಂಟನೇ ತರಗತಿಯ ತನಕ ಒಟ್ಟು 250 ಮಕ್ಕಳು ಕಲಿಯುತ್ತಿದ್ದಾರೆ.ಸಭೆಯಲ್ಲಿ ಬಹುತೇಕ ಪೋಷಕರು ಅತ್ಯಂತ ಉತ್ಸಾಹದಲ್ಲಿ ಭಾಗವಹಿಸಿ ತಮ್ಮ ಸಲಹೆ ಸೂಚನೆ ನೀಡಿದರು.

ವಿಶೇಷವಾಗಿ ಗ್ರಾಮೀಣ ಪ್ರದೇಶದ ಉತ್ತಮ ಸ್ಥಿತಿಯಲ್ಲಿ ಇರುವ ಕನ್ಯಾಡಿ ಶಾಲೆಗೆ ಕಳೆದ ಒಂದೂವರೆ ವರ್ಷಗಳಿಂದ ಮುಖ್ಯೋಪಾಧ್ಯಾಯರು ಇಲ್ಲ ಹಾಗೂ ಖಾಯಂ ಶಿಕ್ಷಕರ ಕೊರತೆ ಇದೆ ಇದನ್ನು ಆದ್ಯತೆಯ ನೆಲೆಯಲ್ಲಿ ಆದಷ್ಟು ಬೇಗ ಪೂರ್ತಿ ಮಾಡಬೇಕು ಎಂದು ಪೋಷಕರಿಂದ ಅಭಿಪ್ರಾಯ ಬಂದಿದೆ.ಶಾಲೆಯ ದೈಹಿಕ ಶಿಕ್ಷಕರ ವರ್ಗಾವಣೆ ಆಗುತ್ತಿರುವ ಬಗ್ಗೆ ಪೋಷಕರು ವಿರೋಧ ವ್ಯಕ್ತಪಡಿಸಿದರು.

ಈ ವರ್ಷ ಮಳೆ ಅಧಿಕವಾಗಿ ಬರುತ್ತಿರುವುದರಿಂದಾಗಿ ಶಾಲೆಯ ಕೆಲವು ಕೊಠಡಿಗಳ ನೆಲ ಹೆಚ್ಚಾಗಿ ಒದ್ದೆಯಾಗುತ್ತಿದೆ ನಲಿ-ಕಲಿ ಮಕ್ಕಳಿಗೆ ನೆಲದಲ್ಲಿ ಕುಳಿತುಕೊಳ್ಳಲು ಸೂಕ್ತ ಆಸನದ ವ್ಯವಸ್ಥೆ ಮಾಡಬೇಕು ಹಾಗೂ ಕೆಲವು ಕೊಠಡಿಗಳು ತೀರ ಹಳೆಯದಾಗಿದ್ದು ಮುಂದಿನ ದಿನಗಳಲ್ಲಿ ಶಾಲೆಗೆ ಹೊಸ ಆರ್.ಸಿ.ಸಿ ಕೊಠಡಿಗಳ ಅವಶ್ಯಕತೆ ಇದೆ ಎಂದು ಸಲಹೆ ಬಂದಿತು.

ಶಾಲೆಯಲ್ಲಿ ಮಕ್ಕಳಿಗೆ ತೋಟಗಾರಿಕೆ ಶಿಕ್ಷಣದ ನಿಟ್ಟಿನಲ್ಲಿ ತರಕಾರಿ ಗಿಡಗಳನ್ನು ನೆಟ್ಟು ಬೆಳೆಸಿದರೆ ಉತ್ತಮ ಎಂದು ಸಲಹೆ ನೀಡಿದರು.ಶಾಲೆಯ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಪೋಷಕರು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಶಾಲೆಯಲ್ಲಿ ಸಲಹಾ ಪೆಟ್ಟಿಗೆ ಇಡುವಂತೆ ಅಭಿಪ್ರಾಯ ವ್ಯಕ್ತವಾಯಿತು.ನೂರಕ್ಕೂ ಹೆಚ್ಚು ಮಕ್ಕಳು ವಾಹನದ ಮೂಲಕ ಶಾಲೆಗೆ ಬರುತ್ತಿದ್ದು ಸೂಕ್ತವಾದ ವಾಹನದ ವ್ಯವಸ್ಥೆ ಇಲ್ಲದಿರುವುದರಿಂದ ಮುಂದಿನ ದಿನಗಳಲ್ಲಿ ಶಾಲೆಗೆ ಬಸ್ ವ್ಯವಸ್ಥೆ ಮಾಡಬೇಕು ಎಂದು ಬೇಡಿಕೆ ಬಂದಿದೆ.ಪಿಎಂಶ್ರೀ ಯೋಜನೆಯ ಆಯ್ಕೆಗೆ ಹಾಗೂ ಮುಂದಿನ ವರ್ಷದಿಂದ ಎಲ್ ಕೆಜಿ,ಯಕೆಜಿ ತರಗತಿ ಆರಂಭಿಸುವ ಪ್ರಯತ್ನ ನಡೆಯುತ್ತಿದೆ ಎಂದು ಮುಖ್ಯೋಪಾಧ್ಯಾಯರು ಮಾಹಿತಿ ನೀಡಿದರು.

ನೋಡಲ್ ಅಧಿಕಾರಿ ರಂಜಿತ್ ಕುಮಾರ್ ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ಬೆಳ್ತಂಗಡಿ ಇವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸೂರ್ಯಕಾಂತ್, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು, ಸಾಮಾಜಿಕ ಪರಿಶೋಧನಾ ಘಟಕ, ವಿಮಲ ಪರಮೇಶ್ವರ್, ಅಧ್ಯಕ್ಷರು ಧರ್ಮಸ್ಥಳ ಗ್ರಾಮ ಪಂಚಾಯತ್ ಮರಿಯಪ್ಪ ಗೌಡ, ಮುಖ್ಯೋಪಾಧ್ಯಾಯರು, ಪ್ರತಿಮಾ, ಸಮೂಹ ಸಂಪನ್ಮೂಲ ವ್ಯಕ್ತಿ ನಿಡ್ಲೆ ಮತ್ತು ಉಜಿರೆ, ನಂದ ಕುಮಾರ್ ಭಟ್, ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ, ಗೌರವ ಸಲಹೆಗಾರರಾದ ರಾಜೇಂದ್ರ ಆಜ್ರಿ,ಸುಂದರ ಗೌಡ ಪುಡ್ಕೆತ್ ಹಾಗೂ ಸುಜಿತ್ ಶಾಲಾ ನಾಯಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಶಿಕ್ಷಕಿ ಪುಷ್ಪಾ ಅವರು ಸ್ವಾಗತಿಸಿ, ಶಿಕ್ಷಕಿ ಅರ್ಚನಾ ಅವರು ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here