ಪದ್ಮುಂಜ: ನೆಟ್ ವರ್ಕ್ ಸಮಸ್ಯೆ ಎದುರಿಸುತ್ತಿರುವ ಏರ್ಟೆಲ್ ಮೊಬೈಲ್ ಗ್ರಾಹಕರಿಗೆ ಗಗನಕ್ಕೇರುತ್ತಿರುವ ಮೊಬೈಲ್ ರೀಚಾರ್ಜ್ ದರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಏರ್ಟೆಲ್ ಮೊಬೈಲ್ ಗ್ರಾಹಕರು ನೆಟ್ ವರ್ಕ್ ಇಲ್ಲದೆ ಪರದಾಡುತ್ತಿದ್ದು ನೂರಾರು ಬಾರಿ ಸಂಬಧಿಸಿದ ಏಜೆನ್ಸಿಗಳಿಗೆ ಕಂಪನಿಗಳಿಗೆ ಫೋನ್ ಮೂಲಕ ದೂರು ನೀಡಿದ್ದರೂ ಯಾವುದೇ ಪರಿಹಾರ ಸಿಕ್ಕಿಲ್ಲ. ಇದೀಗ ಆಗಿಂದಾಗ ರೀ ಚಾರ್ಜ್ ದರ ಏರಿಸುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೆಲವು ತಿಂಗಳ ಹಿಂದೆಯಷ್ಟೇ ರೀ ಚಾರ್ಜ್ ದರ ಏರಿಸಿದ್ದ ಮೊಬೈಲ್ ಕಂಪನಿಯವರು ಇದೀಗ ತಿಂಗಳೊಂದರ ರೀ ಚಾರ್ಜ್ ದರ ತಲಾ ಐವತ್ತು ರೂಪಾಯಿ ಏರಿಸಿರುವುದು ಮೊಬೈಲ್ ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ.
ಸರಕಾರಿ ಅಧೀನದಲ್ಲಿರುವ ಬಿ ಎಸ್.ಎನ್.ಎಲ್. ಟವರುಗಳು ನಿಷ್ಕ್ರಿಯ ಗೊಂಡಿರುವುದು ಖಾಸಗಿ ಕಂಪನಿಗಳು ಮನಸ್ಸಿಗೆ ತೋಚಿದಂತೆ ದರ ಏರಿಕೆ ಮಾಡಲು ಕಾರಣ ಎಂದು ಮೊಬೈಲ್ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಬಿ.ಎಸ್.ಎನ್.ಎಲ್ ಮೊಬೈಲ್ ಟವರಿಗೆ ಶಕ್ತಿ ನೀಡಿದಲ್ಲಿ ಖಾಸಗಿ ಕಂಪನಿಗಳ ಹಗಲು ದರೋಡಡಯಿಂದ ಪಾರಾಗಬಹುದು ಎಂಬುದು ಮೊಬೈಲ್ ಗ್ರಾಹಕರ ಅಭಿಪ್ರಾಯವಾಗಿದೆ.