ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಮಾಸಿಕ ಸಭೆ- ತಾಲೂಕಿನಲ್ಲಿ ಮರಾಟಿ ವಧು-ವರರ ಸಮಾವೇಶ ಶೀಘ್ರದಲ್ಲಿ: ಅಧ್ಯಕ್ಷ ಸತೀಶ್ ಎಚ್‌.ಎಲ್

0

ಬೆಳ್ತಂಗಡಿ: ಸಮುದಾಯದ ಯುವಕ-ಯುವತಿಯರ ವಿವಾಹಕ್ಕೆ ಸೂಕ್ತ ವೇದಿಕೆ ಒದಗಿಸಿ ಅವರು ದಾಂಪತ್ಯ ಜೀವನಕ್ಕೆ ಅಡಿಯಿರಿಸಲು ನೆರವಾಗುವ ನಿಟ್ಟಿನಲ್ಲಿ ಹಾಗೂ ಪೋಷಕರ ಒತ್ತಡ ನಿವಾರಿಸುವ ಸಲುವಾಗಿ ತಾಲೂಕಿನಲ್ಲಿ ಮರಾಟಿ ವಧು – ವರರ ಸಮಾವೇಶ ಆಯೋಜನೆ ಮಾಡಲಾಗುವುದು. ಸಮುದಾಯದ ಜನತೆ ಅಭಿವೃದ್ಧಿ ಹೊಂದಲು ಇಂತಹ ಸಮುದಾಯ ಸ್ನೇಹಿ ಕಾರ್ಯ ಯೋಜನೆ ರೂಪಿಸಲಾಗುವುದು ಎಂದು ಬೆಳ್ತಂಗಡಿ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸತೀಶ್ ಎಚ್.ಎಲ್. ಭರವಸೆ ನೀಡಿದರು.ಅವರು ಬದ್ಯಾರು ಪ್ರಭಾಕರ ನಾಯ್ಕ್ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯ ನಡೆಸಲಾಗುವುದು. ಈ ಬಾರಿ ಉನ್ನತ ಶಿಕ್ಷಣದಲ್ಲಿ ಸಾಧನೆ ಮಾಡಿದ ಸಾಧಕರನ್ನೂ ಗುರುತಿಸಿ ಗೌರವಿಸುವ ಕಾರ್ಯ ಮಾಡಲಾಗುವುದು. ಅದೇ ರೀತಿ ಸಮುದಾಯಕ್ಕೆ ಸಂಬಂದಿಸಿದ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳಿಗೆ ಮನವಿ ನೀಡಲಾಗುವುದು. ಮಾಸಿಕ ಸಭೆ ನಡೆಸುವ ಸಂದರ್ಭ ಸಮಯ ಪಾಲನೆ ಮಾಡುವ ಮೂಲಕ ಪದಾಧಿಕಾರಿಗಳು ಶಿಸ್ತು ಕಾಪಾಡಬೇಕು ಎಂದು ಕಿವಿ ಮಾತು ಹೇಳಿದರು.ವಿವಿಧ ವಿಚಾರಗಳ ಕುರಿತು ಚರ್ಚೆ ನಡೆದು, ಪದಾಧಿಕಾರಿಗಳು ಸಲಹೆ ಸೂಚನೆಗಳನ್ನು ನೀಡಿದರು. ಪ್ರಭಾಕರ ನಾಯ್ಕ್ ಮನೆಯವರನ್ನು ಗೌರವಿಸಲಾಯಿತು.

ಗೌರವ ಸಲಹೆಗಾರರಾದ ಕುಮಾರಯ್ಯ ನಾಯ್ಕ್, ಗೌರವಾಧ್ಯಕ್ಷರಾದ ಕೊರಗಪ್ಪ ನಾಯ್ಕ್, ಉಪಾಧ್ಯಕ್ಷ ಪ್ರಭಾಕರ ನಾಯ್ಕ್, ಪ್ರಧಾನ ಕಾರ್ಯದರ್ಶಿ ತಾರನಾಥ ನಾಯ್ಕ್, ಕಾರ್ಯದರ್ಶಿ ಸುರೇಶ್ ಎಚ್.ಎಲ್., ಕೋಶಾಧಿಕಾರಿ ಹರೀಶ್ ಪೆರಾಜೆ, ಸಂಘಟನಾ ಕಾರ್ಯದರ್ಶಿ ಪ್ರಸಾದ್ ನಾಯ್ಕ್, ಕ್ರೀಡಾ ಕಾರ್ಯದರ್ಶಿ ರವಿ ನಾಯ್ಕ್ ಬಡಕೋಡಿ, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ್, ಪತ್ರಿಕಾ ಮಾಧ್ಯಮ ಕಾರ್ಯದರ್ಶಿ ಹರ್ಷಿತ್ ಪಿಂಡಿವನ, ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜೇಶ್ ನಾಯ್ಕ್, ಭಾಸ್ಕರ ನಾಯ್ಕ್, ರಜನೀಶ್, ವಿಶಾಲ ಉಪಸ್ಥಿತರಿದ್ದರು.

ಮೂಡಬಿದಿರೆಯಲ್ಲಿ ಸಮಾವೇಶ: ಜಿಲ್ಲಾ ಕೆ.ಡಿ.ಪಿ. ಸಮಿತಿ ಸದಸ್ಯ ಹಾಗೂ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಗೌರವ ಸಲಹೆಗಾರರಾದ ಸಂತೋಷ್ ಕುಮಾರ್ ಲಾಯಿಲಾ ಮಾತನಾಡಿ, ಮೂಡಬಿದಿರೆ ತಾಲೂಕು ಮರಾಟಿ‌ ಸಂಘದ ನೇತೃತ್ವದಲ್ಲಿ ಕರಾವಳಿ ಮರಾಟಿ ಸಮ್ಮೇಳನವನ್ನು ಅಕ್ಟೋಬರ್ 20ರಂದು ಮೂಡಬಿದಿರೆಯ ಆಳ್ವಾಸ್ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ. ವಿವಿಧ ಸಭೆ, ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದ್ದು, ಈ ಸಮ್ಮೆಳನಕ್ಕೆ ತಾಲೂಕಿನ ಸಮುದಾಯದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕಾಗಿದೆ ಎಂದರು.

p>

LEAVE A REPLY

Please enter your comment!
Please enter your name here