ಪಟ್ರಮೆ: ಮಾದಕ ವಸ್ತು ಎನ್ನುವುದು ಮನುಷ್ಯ ಕುಲವನ್ನು ಹಂತ ಹಂತವಾಗಿ ನಾಶಗೊಳಿಸುವ ಒಂದು ವಿಷವಿದ್ದಂತೆ. ಮಾದಕ ವಸ್ತುಗಳು ನಮ್ಮನ್ನು ಬಲು ಬೇಗ ಆಕರ್ಷಿಸಿ ಬಿಡುತ್ತವೆ. ಒಮ್ಮೆ ಇದರ ಸೆಳೆತಕ್ಕೆ ಸಿಕ್ಕಿ ಬಿದ್ದರೆ ಹೊರ ಬರಲಾರದೆ ಜೀವನವನ್ನು ಹಾಳು ಮಾಡಿಕೊಂಡಂತೆ ಎಂದು ಧರ್ಮಸ್ಥಳ ಠಾಣಾಧಿಕಾರಿ ಸಮರ್ಥ ಆರ್ ಗಾಣಿಗೇರ ನುಡಿದರು.
ಜೂನ್ 26 ರಂದು ಪಟ್ರಮೆ ಗ್ರಾಮದ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ಪರಿಣಾಮದ ಕುರಿತು ಜನಜಾಗೃತಿ ಅಭಿಯಾನ ಅಂಗವಾಗಿ ಶಾಲಾ ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿದರು.
ವಿದ್ಯಾರ್ಥಿಗಳಿಗೆ, ಮಾದಕ ವ್ಯಸನದ ದುಷ್ಪರಿಣಾಮಗಳು ಹಾಗೂ ಮಾದಕ ವ್ಯಸನಿಯಾಗಿದ್ದರೆ ಅದಕ್ಕೆ ಸರಕಾರ ವಿಧಿಸುವ ಶಿಕ್ಷೆಗಳ ಬಗ್ಗೆ ಸವಿವರವಾಗಿ ಮಾಹಿತಿಯನ್ನು ನೀಡಿದರು.ವಿದ್ಯಾಸಂಸ್ಥೆಯ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ ಮಾತನಾಡಿ ಮಕ್ಕಳು ಸಂಸ್ಕಾರಯುತ ಶಿಕ್ಷಣ ಪಡೆದರೆ ಮಾದಕ ವ್ಯಸನಕ್ಕೆ ಬಲಿಯಾಗಲಾರರು ಎಂದು ತಿಳಿಸಿದರು.
ವೇದಿಕೆಯಲ್ಲಿ ಠಾಣಾ ಸಿಬ್ಬಂದಿ ಮಂಜುನಾಥ ಪಾಟೀಲ್ ಉಪಸ್ಥಿತರಿದ್ದರು.
ಈ ಸಂದರ್ಭ ವಿದ್ಯಾರ್ಥಿಗಳಿಗೆ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣದ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಶಿಕ್ಷಕಿ ಶುಭಲಕ್ಷ್ಮಿ ಸ್ವಾಗತಿಸಿ, ರೇಶ್ಮ ವಂದಿಸಿದರು. ಭವ್ಯ ಪಿ. ಡಿ. ನಿರೂಪಿಸಿದರು.