ಬೆಳ್ತಂಗಡಿ: ಬೆಂಗಳೂರು ಬ್ಯಾಂಬೊ ಸೊಸೈಟಿ ಆಫ್ ಇಂಡಿಯಾ ಹಾಗೂ ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ ಉಜಿರೆ ಇವರ ಸಹಯೋಗದೊಂದಿಗೆ ಪ್ರಗತಿಪರ ಕೃಷಿಕ ರಾಧಾಕೃಷ್ಣ ಹೆಬ್ಬಾರ್ ಇವರ ಸಹಕಾರದಲ್ಲಿ ಜೂ. 01ರಂದು ನೆರಿಯ ಶ್ರೀ ಉಮಾ ಪಂಚಲಿಂಗೇಶ್ವರ ದೇವಸ್ಥಾನ ಅಪ್ಪೆಲ ಬಯಲು ಇಲ್ಲಿ ಬಿದಿರು ಕೃಷಿ ಮಾಹಿತಿ ಸಭೆ ಜರುಗಿತು.
ಬ್ಯಾಂಬೊ ಸೊಸೈಟಿ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಎ.ನಾರಾಯಣ ಮೂರ್ತಿ (IFS Rtd.) ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಬಿದಿರು ಕೃಷಿ ಮಾಡುವ ವಿಧಾನ ಮತ್ತು ಬಿದಿರು ಉತ್ಪನ್ನಗಳಿಗೆ ಇರುವ ಜಾಗತಿಕ ಬೇಡಿಕೆ ಬಗ್ಗೆ ಸೇರಿದ ಕೃಷಿಕರಿಗೆ ಮಾಹಿತಿ ನೀಡಿದರು. ಬ್ಯಾಂಬೊ ಸೊಸೈಟಿಯ ಅಧ್ಯಕ್ಷ ಪುನತಿ ಶ್ರೀಧರ್ (IFS Rtd.) ಇವರು ಬಿದಿರು ಕೃಷಿಯ ಅವಶ್ಯಕತೆಗಳು ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ ಮಾದರಿ ಬಿದಿರು ಕೃಷಿ ಪ್ರದೇಶವನ್ನು ಮಾಡುವ ಉದ್ದೇಶ ಬ್ಯಾಂಬೊ ಸೊಸೈಟಿಗಿದ್ದು, ಆಸಕ್ತ ಕೃಷಿಕರಿಗೆ ಉಚಿತ ಬಿದಿರು ಸಸಿಗಳ ಜೊತೆಗೆ ಪ್ರೋತ್ಸಾಹವನ್ನು ರಬ್ಬರು ಸೊಸೈಟಿ ಮೂಲಕ ನೀಡುವುದಾಗಿ ತಿಳಿಸಿದರು.
ಬಿದಿರು ಕೃಷಿಯಲ್ಲಿ ತೊಡಗಿಕೊಂಡಿರುವಂತಹ ನೆರಿಯಾದ ಶ್ರೀಯುತ ರಾಧಾಕೃಷ್ಣ ಹೆಬ್ಬಾರ್ ಇವರು ಕೃಷಿಯನ್ನು ಮಾಡುವ ಸಂದರ್ಭದಲ್ಲಿ ಇರುವ ಸವಾಲುಗಳು ಹಾಗೂ ಕೃಷಿಯ ವಿಧಾನಗಳನ್ನು ತಮ್ಮ ಬಿದಿರು ತೋಟದ ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಸಹಾಯಕ ಅಧೀಕ್ಷಕ ಶ್ರೀಧರ್ ಇವರು ಬಿದಿರು ಕೃಷಿಗೆ ಇಲಾಖೆಯಿಂದ ಸಿಗಬಹುದಾದ ಪ್ರೋತ್ಸಾಹದ ಬಗ್ಗೆ ತಿಳಿಸಿದರು.ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಯವರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ ಭಿಡೆ ಯವರು ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ರಬ್ಬರ್ ಸೊಸೈಟಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ರಾಜು ಶೆಟ್ಟಿ ಇವರು ನಿರ್ವಹಿಸಿದ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಎಂ.ಅನಂತ ಭಟ್ ಇವರು ಧನ್ಯವಾದ ಸಮರ್ಪಿಸಿದರು.