ಬೆಳ್ತಂಗಡಿ: ಬೆಂಗಳೂರಿನ ಡಾ.ರಾಜ್ ಕುಮಾರ್ ಕ್ರೀಡಾಂಗಣದಲ್ಲಿ ಜೂನ್ 2ರಂದು ನಡೆದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಬೆಂಗಳೂರು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಪ್ರಯುಕ್ತ ಏರ್ಪಡಿಸಲಾಗಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸ್ವಾತಿ ಎಂ. ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಉಜಿರೆ ಎಸ್.ಡಿ.ಎಂ. ಕಾಲೇಜಿನ ಪತ್ರಿಕೋದ್ಯಮದ ವಿಭಾಗದ ಹಳೆ ವಿದ್ಯಾರ್ಥಿನಿಯಾಗಿರುವ ಸ್ವಾತಿ ಎಂ. ಪೂಜಾರಿ ಅವರು ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ರೆಂಜ ನಿವಾಸಿಗಳಾದ ಮಾಧವ ಪೂಜಾರಿ ಮತ್ತು ಶ್ಯಾಮಲಾ ದಂಪತಿಯ ಪುತ್ರಿ. ಝೀ ಟಿ.ವಿ. ಕನ್ನಡ ವಾಹಿನಿಯ ಬೆಂಗಳೂರು ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಾತಿ ಎಂ. ಪೂಜಾರಿ ಅವರು ಯಕ್ಷಗಾನ ಮತ್ತು ಕಿರುಚಿತ್ರಗಳಲ್ಲಿ ಅಭಿನಯ ಮಾಡುತ್ತಿದ್ದು ಕಾರ್ಯಕ್ರಮ ನಿರೂಪಕರಾಗಿಯೂ ಗುರುತಿಸಿಕೊಂಡಿದ್ದಾರೆ.
ಯುವವಾಹಿನಿ ಬೆಂಗಳೂರು ಘಟಕದ ಅಧ್ಯಕ್ಷ ಮಿತೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಪದಗ್ರಗಣ ಕಾರ್ಯಕ್ರಮವನ್ನು ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಉದ್ಘಾಟಿಸಿದರು.
ಮಂಗಳೂರು ಕುದ್ರೋಳಿಯಲ್ಲಿರುವ ನಾರಾಯಣ ಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಬೆಳ್ತಂಗಡಿ ಅವರು ಪ್ರಧಾನ ಭಾಷಣ ಮಾಡಿದರು. ಸಾವಿರಾರು ಮಂದಿ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ವಾತಿ ಎಂ. ಪೂಜಾರಿ ನೀಡಿದ ಯಕ್ಷಗಾನ ಪ್ರದರ್ಶನ ಗಮನ ಸೆಳೆಯಿತು.