ಶಾಸಕ ಹರೀಶ್ ಪೂಂಜರ ಮನೆಯಲ್ಲಿ ಹೈಡ್ರಾಮ- ನೋಟಿಸ್ ನೀಡಿದ ಬಳಿಕ ಕಾಲಾವಕಾಶ ಕೋರಿದ ಹರೀಶ್ ಪೂಂಜ- ಬಂಧಿಸದೇ ವಾಪಸಾದ ಪೊಲೀಸರು- ರಾತ್ರಿ ವೇಳೆ ವಿಚಾರಣೆಗಾಗಿ ಠಾಣೆಗೆ ಹಾಜರಾದ ಪೂಂಜ- ಶಾಸಕರ ಬೆಂಬಲಕ್ಕೆ ನಿಂತ ಸಾವಿರಾರು ಕಾರ್ಯಕರ್ತರು- ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿ ಗೋಬ್ಯಾಕ್ ಘೋಷಣೆ ಕೂಗಿದ ಬೆಂಬಲಿಗರು

0

ಬೆಳ್ತಂಗಡಿ: ಎರಡು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ಶಾಸಕ ಹರೀಶ್ ಪೂಂಜ ಅವರನ್ನು ಬಂಧಿಸಲು ಪೊಲೀಸ್ ಅಧಿಕಾರಿಗಳ ತಂಡ ತೆರಳಿದ್ದ ವೇಳೆ ಭಾರಿ ಹೈಡ್ರಾಮ ಮೇ ೨೨ರಂದು ನಡೆದಿದೆ. ಬೆಳಗ್ಗೆಯಿಂದ ರಾತ್ರಿಯವರೆಗೂ ಬಂಧನಕ್ಕೆ ಪ್ರಯತ್ನಿಸಿದ ಪೊಲೀಸರು, ಅಂತಿಮವಾಗಿ ಕಾನೂನಿನ ಅಂಶಗಳು ಹಾಗೂ ಕಾರ್ಯಕರ್ತರ ಅಪಾರ ಬೆಂಬಲವನ್ನು ಕಂಡ ಪೊಲೀಸ್ ಅಧಿಕಾರಿಗಳು ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡಿ ತೆರಳಿದರು. ಬಳಿಕದ ಬೆಳವಣಿಗೆಯಲ್ಲಿ ಶಾಸಕ ಹರೀಶ್ ಪೂಂಜರವರು ಮುಖಂಡರು ಮತ್ತು ವಕೀಲರೊಂದಿಗೆ ರಾತ್ರಿವೇಳೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾದರು. ಈ ಮಧ್ಯೆ ಹರೀಶ್ ಪೂಂಜರವರನ್ನು ಬಂಧಿಸುವ ಉದ್ದೇಶ ಪೊಲೀಸರಿಗೆ ಇರಲಿಲ್ಲ, ನೋಟೀಸ್ ನೀಡಿ ಸ್ಟೇಷನ್‌ಗೆ ವಿಚಾರಣೆ ಬರುವಂತೆ ಮಾಡುವುದೇ ಉzಶವಾಗಿತ್ತು. ಆದರೆ ಪೊಲೀಸರೊಂದಿಗೆ ಠಾಣೆಗೆ ಬರಲು ಶಾಸಕರು ನಿರಾಕರಿಸಿದ ಹಿನ್ನಲೆಯಲ್ಲಿ ಪೂಂಜರನ್ನು ಬಂಧಿಸಲಾಗುತ್ತಿದೆ ಎಂಬ ಅಭಿಪ್ರಾಯ ಹರಡಿ ಈ ಎಲ್ಲಾ ಬೆಳವಣಿಗೆಗಳು ನಡೆದಿದೆ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.
ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಜಿ. ಸುಬ್ಬಾಪೂರ ಮಠ್ ನೇತೃತ್ವದ ಪೊಲೀಸ್ ಅಧಿಕಾರಿಗಳು ಮತ್ತು ಶಾಸಕ ಹರೀಶ್ ಪೂಂಜ ಅವರ ಪರ ವಕೀಲರಾದ ಶಂಭು ಶರ್ಮ, ಸುಬ್ರಹ್ಮಣ್ಯ ಕುಮಾರ್ ಅಗರ್ತ ತಂಡದ ನಡುವೆ ಹರೀಶ್ ಪೂಂಜ ಅವರ ಗರ್ಡಾಡಿಯ ಮಿಥಿಲಾ ನಿವಾಸದಲ್ಲಿ ಭಾರಿ ವಾದ ಪ್ರತಿವಾದ ನಡೆದು ಕೊನೆಗೆ ಡಿವೈಎಸ್‌ಪಿ ವಿಜಯಪ್ರಸಾದ್ ಆಗಮಿಸಿ ಮಾತುಕತೆ ನಡೆಸಿದರೂ ಫಲಪ್ರದವೆನಿಸಲಿಲ್ಲ. ಕೊನೆಗೆ, ಎರಡೂ ಪ್ರಕರಣಗಳಲ್ಲಿ ಪೊಲೀಸರು ನೋಟಿಸ್ ನೀಡಿದ ಬಳಿಕ ಶಾಸಕ ಹರೀಶ್ ಪೂಂಜ ೫ ದಿನಗಳ ಕಾಲಾವಕಾಶ ಕೇಳಿದರು. ಇದಾದ ಬಳಿಕ ಮನೆಯ ಕಾಂಪೌಂಡ್‌ನಿಂದ ಹೊರಗಡೆ ಹೋಗಿದ್ದ ಪೊಲೀಸರು ಮತ್ತೆ ಬಂಧನಕ್ಕೆ ಆಗಮಿಸಿದರೂ, ವಕೀಲರು ಮುಂದಿಟ್ಟ ಕಾನೂನಿನ ಅಂಶಗಳು ಹಾಗೂ ಕಾರ್ಯಕರ್ತರ ಆಕ್ರೋಶವನ್ನು ಕಂಡು ಬಂಧಿಸದೆ ಇರುವ ನಿರ್ಧಾರಕ್ಕೆ ಬಂದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೊಂದಿಗೆ ಮಾತುಕತೆ ನಡೆಸಿದ ಬಳಿಕ ಹಿರಿಯ ಅಧಿಕಾರಿಗಳು ಶಾಸಕರನ್ನು ಬಂಧಿಸುವುದಿಲ್ಲ ಎಂದು ತಿಳಿಸಿ ವಿಚಾರಣೆಗೆ ಹಾಜರಾಗಲು ನೋಟೀಸ್ ಜಾರಿ ಮಾಡಿ ಸ್ಥಳದಿಂದ ತೆರಳಿದರು. ಮೇ.೨೩ರಂದು ಠಾಣೆಗೆ ಹಾಜರಾಗಲು ನಿರ್ಧರಿಸಿದ್ದ ಪೂಂಜರವರು ಮೇ.೨೨ರಂದು ರಾತ್ರಿ ೯.೩೦ಕ್ಕೆ ವಿಚಾರಣೆಗಾಗಿ ಠಾಣೆಗೆ ಹಾಜರಾದರು.
ಏನಿದು ಪ್ರಕರಣ?: ಮೇ ೧೮ರಂದು ರಾತ್ರಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಕ್ರಮ ಗಲ್ಲು ಗಣಿಗಾರಿಕೆ ನಡೆಸುತ್ತಿರುವ ಆರೋಪದಡಿ ಬಂಧಿತನಾಗಿರುವ ಗುರುವಾಯನಕೆರೆಯ ಶಶಿರಾಜ್ ಶೆಟ್ಟಿಯವರನ್ನು ಬಿಡುಗಡೆ ಮಾಡುವಂತೆ ಠಾಣಾಧಿಕಾರಿಗಳಿಗೆ ಒತ್ತಡ ಹಾಕಿ ಅವಾಚ್ಯವಾಗಿ ಬೈದು ಬೆದರಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪೊಲೀಸ್ ಇಲಾಖೆ, ಪೊಲೀಸ್ ಅಧಿಕಾರಿಗಳ ಬಗ್ಗೆ ಅಸಾಂವಿಧಾನಿಕ ಶಬ್ದಗಳಲ್ಲಿ ಮಾತನಾಡಿ ದುರ್ವರ್ತನೆ ತೋರಿದ (೩೫೩ ಮತ್ತು ೫೦೪ ಐಪಿಸಿ) ಹಾಗೂ ಮೇ ೨೦ರಂದು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಕಾನೂನುಬಾಹಿರವಾಗಿ ಬೆಳ್ತಂಗಡಿ ವಿಕಾಸ ಸೌಧದ ಮುಂಭಾಗದಲ್ಲಿ ಜನರನ್ನು ಗುಂಪು ಸೇರಿಸಿ ಪ್ರತಿಭಟನಾ ಸಭೆ ನಡೆಸಿ ಪ್ರಸ್ತುತ ಅರೆಸ್ಟ್ ಆಗಿರುವ ಕಾರ್ಯಕರ್ತರಿಗಾಗಿ ಪೊಲೀಸರ ಕಾಲರ್ ಹಿಡಿಯಲು ಸಿದ್ಧ ಎಂದೂ ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ. ಹಳ್ಳಿಯ ಪೊಲೀಸ್ ಠಾಣೆಗೆ ಆದ ಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆ ಎಂದೂ ಬೆದರಿಸಿ ಸಾರ್ವಜನಿಕ ನೌಕರರಾದ ಬೆಳ್ತಂಗಡಿ ಠಾಣಾ ಪೊಲೀಸ್ ನಿರೀಕ್ಷಕರಿಗೆ, ಇತರ ಪೊಲೀಸ್ ಅಧಿಕಾರಿಗಳಿಗೆ, ಪೊಲೀಸ್ ಇಲಾಖೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿ ಜೀವ ಬೆದರಿಕೆ ಒಡ್ಡಿ ತಾಲೂಕು ಕಚೇರಿಗೆ ತಮ್ಮ ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಹೋಗದಂತೆ ತಡೆಯೊಡ್ಡಿದ ಆರೋಪ (೧೪೩, ೧೪೭, ೩೪೧, ೫೦೪, ೫೦೬ ಜೊತೆಗೆ ೧೪೯ ಐ.ಪಿ.ಸಿ)ದಡಿ ಎರಡು ಪ್ರತ್ಯೇಕ ಕೇಸ್‌ಗೆ ಒಳಗಾಗಿರುವ ಶಾಸಕ ಹರೀಶ್ ಪೂಂಜ ಅವರನ್ನು ಬಂಧಿಸಲು ಬೆಳ್ತಂಗಡಿ ಠಾಣೆಯ ಇನ್ಸ್‌ಪೆಕ್ಟರ್ ಬಿ.ಜಿ.ಸುಬ್ಬಾಪೂರ್ ಮಠ್ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಮೇ ೨೨ರಂದು ಬೆಳಗ್ಗೆ ಹರೀಶ್ ಪೂಂಜ ಅವರ ಗರ್ಡಾಡಿಯ ಮಿಥಿಲಾ ನಿವಾಸಕ್ಕೆ ತೆರಳಿದ್ದ ವೇಳೆ ಭಾರಿ ಹೈಡ್ರಾಮ ನಡೆದಿದೆ.
ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ೨ನೇ ಅವಧಿಯಲ್ಲಿ ಶಾಸಕರಾಗಿರುವ ಹರೀಶ್ ಪೂಂಜ ಅವರ ಮನೆಗೆ ಬೆಳ್ತಂಗಡಿ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಜಿ. ಸುಬ್ಬಾಪೂರ್ ಮಠ್, ಎಸ್.ಐ. ಚಂದ್ರಶೇಖರ್ ಮತ್ತು ವೇಣೂರು ಪೊಲೀಸ್ ಠಾಣಾ ಎಸ್.ಐ. ಶ್ರೀಶೈಲ ಅವರ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ಹರೀಶ್ ಪೂಂಜ ಅವರನ್ನು ಬಂಧಿಸಲು ಮುಂದಾದ ವೇಳೆ ನೂರಾರು ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಚಕಮಕಿ ನಡೆಯಿತು. ಶಾಸಕರನ್ನು ಪೊಲೀಸರು ಬಂಧಿಸುತ್ತಾರಂತೆ ಎಂದು ಸುದ್ದಿ ಹರಡುತ್ತಿದ್ದಂತೆಯೇ ತಾಲೂಕಿನ ವಿವಿಧೆಡೆಯಿಂದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಹರೀಶ್ ಪೂಂಜ ಅವರ ನಿವಾಸಕ್ಕೆ ಭೇಟಿ ನೀಡಿದರು.
ಈ ವೇಳೆ ಶಾಸಕರ ನಿವಾಸದಿಂದ ನೇರಪ್ರಸಾರ ಮಾಡುತ್ತಿದ್ದ ಸುದ್ದಿ ನ್ಯೂಸ್ ಚಾನೆಲ್ ಮೂಲಕ ಮಾತನಾಡಿದ ಹಲವು ಮುಖಂಡರು ಮತ್ತು ಕಾರ್ಯಕರ್ತರು, ಹರೀಶ್ ಪೂಂಜ ಅವರನ್ನು ಬಂಧಿಸಲು ಮುಂದಾಗಿರುವ ಪೊಲೀಸರ ಕ್ರಮವನ್ನು ವಿರೋಧಿಸಿದರಲ್ಲದೆ ಕಾಂಗ್ರೆಸ್‌ನವರು ದಬ್ಬಾಳಿಕೆಯ ರಾಜಕಾರಣ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಈ ವೇಳೆ ಹರೀಶ್ ಪೂಂಜ ಅವರು ತಮ್ಮ ಮನೆಯೊಳಗಿದ್ದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್, ಮಂಡಲ ಬಿಜೆಪಿ ಅಧ್ಯಕ್ಷ ಶ್ರೀನಿವಾಸ ರಾವ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪೂವಾಜೆ ಕುಶಾಲಪ್ಪ ಗೌಡ, ಬಿಎಂಎಸ್ ಜಿಲ್ಲಾಧ್ಯಕ್ಷ ವಕೀಲ ಅನಿಲ್ ಕುಮಾರ್ ಯು. ಸಹಿತ ಹಲವಾರು ಮಂದಿ ಶಾಸಕ ಹರೀಶ್ ಪೂಂಜ ಅವರ ಪರ ನಿಂತು ಪೊಲೀಸರೊಂದಿಗೆ ಮಾತುಕತೆ ನಡೆಸಿದರು.
ಹರೀಶ್ ಪೂಂಜ ಬಂಧನಕ್ಕೆ ವಕೀಲರಿಂದ ಬಲವಾದ ಆಕ್ಷೇಪ-ಮೆಮೋ ನೀಡಲು ಆಗ್ರಹ: ಪೊಲೀಸ್ ಅಧಿಕಾರಿಗಳು ಶಾಸಕ ಹರೀಶ್ ಪೂಂಜ ಅವರನ್ನು ಬಂಧಿಸಲು ಮುಂದಾದಾಗ ಅವರ ಪರ ವಕೀಲರಾದ ಮಂಗಳೂರಿನ ಶಂಭು ಶರ್ಮ, ಅಜಯ್ ಸುವರ್ಣ, ಬೆಳ್ತಂಗಡಿಯ ಸುಬ್ರಹ್ಮಣ್ಯ ಕುಮಾರ್ ಅಗರ್ತ ಮತ್ತು ಯತೀಶ್ ಅವರು ಬಲವಾದ ಆಕ್ಷೇಪ ವ್ಯಕ್ತಪಡಿಸಿದರು. ವಿಚಾರಣೆಗೆ ಹಾಜರಾಗಲು ನೊಟೀಸ್ ನೀಡಬೇಕು. ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಯಾಗಬಹುದಾದ ಕೇಸ್‌ಗಳಲ್ಲಿ ನೊಟೀಸ್ ನೀಡದೆ ವಶಕ್ಕೆ ಪಡೆದುಕೊಳ್ಳುವಂತಿಲ್ಲ. ಒಂದು ಕೇಸ್‌ನಲ್ಲಿ ನೊಟೀಸ್ ನೀಡಿದ್ದೀರಿ. ಇನ್ನೊಂದು ಕೇಸ್‌ನಲ್ಲಿ ನೊಟೀಸ್ ಕೊಟ್ಟಿಲ್ಲ. ಬಂಧಿಸುವುದಾದರೆ ಮೆಮೋ ಕೊಡಿ ಎಂದು ವಕೀಲರು ಹೇಳಿದರು.
ಪೊಲೀಸ್ ಠಾಣೆಯಲ್ಲಿ ಮೆಮೋ ನೀಡುತ್ತೇವೆ ಎಂದು ಇನ್ಸ್‌ಪೆಕ್ಟರ್ ಜಿ. ಸುಬ್ರಾಪುರಮಠ್ ಅವರು ಹೇಳಿದರು. ಪೊಲೀಸ್ ಸ್ಟೇಷನ್‌ನಲ್ಲಿ ಮೆಮೋ ಕೊಡುವ ಕ್ರಮ ಇಲ್ಲ. ಯಾವ ಜಾಗದಿಂದ ಕರೆದುಕೊಂಡು ಹೋಗುತ್ತೀರಿ, ಅಲ್ಲಿಯೇ ಮೆಮೋ ನೀಡಬೇಕು ಎಂದು ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ ಹೇಳಿದರು. ಬಂಧಿಸುವುದಕ್ಕೆ ನಮ್ಮ ಆಕ್ಷೇಪ ಇಲ್ಲ. ಯಾರೂ ಗೊಂದಲ, ಗಲಭೆ ಮಾಡುವುದಿಲ್ಲ. ಕಾನೂನು ವ್ಯಾಪ್ತಿಯಲ್ಲಿ ಸಹಕಾರ ನೀಡುತ್ತೇವೆ ಎಂದು ಹೇಳಿದ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಬಂಧಿಸುವುದಾದರೆ ಅವರ ಸಂಬಂಧಿಕರಿಗೆ ಅಥವಾ ಸ್ನೇಹಿತರಿಗೆ ಮಾಹಿತಿ ನೀಡಬೇಕು ಎಂಬ ನಿಯಮ ಇದೆ ಎಂದು ಹೇಳಿದರು. ಅರೆಸ್ಟ್ ಮೆಮೋ ಕೊಡಿ, ಇಂತಹ ಕಡೆಯಿಂದ ಅವರ ಮನೆಯಿಂದ ಯಾವ ಸಮಯದಲ್ಲಿ ಯಾವ ಕೇಸ್‌ಗೆ ಸಂಬಂಧಿಸಿ ಕರೆದುಕೊಂಡು ಹೋಗುತ್ತೀರಿ ಎಂದು ಮೆಮೋದಲ್ಲಿ ತಿಳಿಸಿ ಕರೆದುಕೊಂಡು ಹೋಗುವುದಾದರೆ ನಮ್ಮ ಆಕ್ಷೇಪ ಇಲ್ಲ ಎಂದು ಸುಬ್ರಹ್ಮಣ್ಯ ಕುಮಾರ್ ಅಗರ್ತ ಹೇಳಿದರು. ಬಳಿಕ ಪರ ವಿರೋಧ ಚರ್ಚೆ ನಡೆಯಿತು ಹೊರತು ಯಾವುದೇ ನಿರ್ಧಾರ ಆಗಲಿಲ್ಲ.
ಡಿವೈಎಸ್‌ಪಿ ವಿಜಯಪ್ರಸಾದ್ ಭೇಟಿ-ಬಾಗಿಲು ಮುಚ್ಚಿ ಮಾತುಕತೆ: ಪೊಲೀಸ್ ಅಧಿಕಾರಿಗಳು, ವಕೀಲರು ಮತ್ತು ಕಾರ್ಯಕರ್ತರ ನಡುವೆ ಮಾತುಕತೆ ನಡೆಯುತ್ತಿದ್ದಂತೆಯೇ ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿ ವಿಜಯಪ್ರಸಾದ್ ಅವರು ಹರೀಶ್ ಪೂಂಜ ಮನೆಗೆ ಭೇಟಿ ನೀಡಿದರು. ಮನೆಯ ಬಾಗಿಲು ಮುಚ್ಚಿ ಡಿವೈಎಸ್‌ಪಿ ವಿಜಯ ಪ್ರಸಾದ್ ಮಾತುಕತೆ ನಡೆಸಿದರು. ಈ ವೇಳೆಯೂ ವಕೀಲರು ನೋಟೀಸ್ ನೀಡದೆ ಬಂಧನಕ್ಕೊಳಪಡಿಸುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮೆಮೋ ಕೊಡಿ ಬಂಧನ ಮಾಡಿ, ನಾವೂ ಸಹಕರಿಸುತ್ತೇವೆ. ಅದು ಬಿಟ್ಟು ಮೆಮೋ ಕೊಡದೆ ಕಾನೂನು ಉಲ್ಲಂಸಿ ಬಂಧಿಸಲು ಸಾಧ್ಯವಿಲ್ಲ ಎಂದು ವಕೀಲ ಶಂಭು ಶರ್ಮ ಹೇಳಿದರು.
ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿರುವ ದ.ಕ. ಕ್ಷೇತ್ರದ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಉಮಾನಾಥ್ ಕೋಟ್ಯಾನ್, ಭಾಗೀರಥಿ ಮುರುಳ್ಯ, ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಅವರೊಂದಿಗೆ ಡಿವೈಎಸ್‌ಪಿ ವಿಜಯಪ್ರಸಾದ್ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ನಡೆಸಿದರು. ಈ ವೇಳೆ ಅರೆಸ್ಟ್ ಮೆಮೋ ತರಲೇಬೇಕು, ಲೀಗಲ್ ಆಗಿ ಏನು ಆಗುತ್ತದೆಯೋ ನೋಡೋಣ ಎಂದು ವಕೀಲರು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಮನೆಯಿಂದ ಹೊರಬಂದ ಡಿವೈಎಸ್‌ಪಿ ವಿಜಯಪ್ರಸಾದ್ ಅವರು ಇನ್ಸ್‌ಪೆಕ್ಟರ್ ಜತೆ ಮಾತುಕತೆ ನಡೆಸಿದರು. ಹೊರಗಡೆ ಜಮಾಯಿಸಿದ್ದ ನೂರಾರು ಕಾರ್ಯಕರ್ತರು ಈ ವೇಳೆ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು.
೫ ದಿನಗಳ ಕಾಲಾವಕಾಶ ಕೋರಿಕೆ: ಶಾಸಕ ಹರೀಶ್ ಪೂಂಜ ಅವರ ವಿರುದ್ಧ ದಾಖಲಾಗಿರುವ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಪ್ರತ್ಯೇಕ ನೋಟಿಸ್‌ಗಳನ್ನು ನೀಡಿರುವ ಮಾಹಿತಿ ಲಭಿಸಿದೆ. ಒಂದು ನೋಟಿಸನ್ನು ಬೆಳಗ್ಗೆಯೇ ನೀಡಿದ್ದರು. ಇನ್ನೊಂದು ನೋಟಿಸ್ ಸಂಜೆ ನೀಡಿದ್ದಾರೆ. ಇದಕ್ಕೆ ಶಾಸಕರು, ೫ ದಿನಗಳ ಕಾಲಾವಕಾಶ ಕೋರಿದ್ದಾರೆ ಎಂದು ಸ್ಥಳದಲ್ಲಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನೋಟಿಸ್‌ನಲ್ಲೇನಿದೆ?: ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ. ೫೮/೨೦೨೪ ಕಲಂ: ೧೪೩, ೧೪೭, ೩೪೧, ೫೦೪, ೫೦೬ ಜೊತೆಗೆ ೧೪೯ ಐಪಿಸಿ ಪ್ರಕರಣದಲ್ಲಿ ಈ ಕೆಳಗೆ ಹೆಸರು ವಿಳಾಸ ನಮೂದಿಸಿದ ನೀವು ಆರೋಪಿಯಾಗಿರುತ್ತೀರಿ. ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಹಾಗೂ ತನಿಖಾಧಿಕಾರಿಯಾದ ಬಿ.ಬಿ.ಸುಬ್ಬಾಪೂರ್ ಮಠ್ ಆದ ನಾನು ಸದರಿ ಪ್ರಕರಣದಲ್ಲಿ ನಿಮ್ಮನ್ನು ವಿಚಾರಣೆಗೆ ಒಳಪಡಿಸಲು ಸಾಕಷ್ಟು ಸಾಕ್ಷ್ಯಾಧಾರ ಹಾಗೂ ಸನ್ನಿವೇಶಗಳು ಕಂಡುಬಂದಿದ್ದು, ಈ ನೋಟೀಸು ಸ್ವೀಕರಿಸಿದ ಕೂಡಲೇ ಯಾವುದೇ ವಿಳಂಬವಿಲ್ಲದೆ ತನಿಖಾಧಿಕಾರಿಯಾದ ನನ್ನೊಂದಿಗೆ ತನಿಖೆಗಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬರಲು ಹಾಗೂ ಸಹಕರಿಸಲು ತಿಳಿಯಪಡಿಸಲಾಗಿದೆ ಎಂದು ಬಿ.ಜಿ.ಸುಬ್ಬಾಪೂರ್ ಮಠ್ ಹೆಸರಿನಲ್ಲಿ ಶಾಸಕ ಹರೀಶ್ ಪೂಂಜರಿಗೆ ನೋಟಿಸ್ ನೀಡಲಾಗಿತ್ತು. ಈ ನೋಟೀಸ್‌ಗೆ ಉತ್ತರಿಸಲು ಪೂಂಜರು ಠಾಣೆಗೆ ರಾತ್ರಿಯೇ ಹಾಜರಾದರು.
ಪೊಲೀಸ್ ಸಿಬ್ಬಂದಿ ಹೊರಕ್ಕೆ: ಪೊಲೀಸ್ ಸಿಬ್ಬಂದಿ ಆನಂದ ಎಂಬವರು ಬೆಳಗ್ಗೆ ವಾಟ್ಸಾಪ್ ಸ್ಟೇಟಸ್‌ನಲ್ಲಿ ಶಾಸಕ ಹರೀಶ್ ಪೂಂಜ ಬಂಧನ ಸಾಧ್ಯತೆ ಎಂದು ಸಂದೇಶ ಹಾಕಿದ್ದಾರೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಶಾಸಕ ಹರೀಶ್ ಪೂಂಜರು ಹೋಗ ನೀನು ಹೊರಗೆ ಎಂದು ಪೊಲೀಸ್ ಸಿಬ್ಬಂದಿಯನ್ನು ಮನೆಯಿಂದ ಹೊರಗೆ ಕಳುಹಿಸುವಂತೆ ಸೂಚಿಸಿದರು.
ಇಡೀ ದಿನ ಮಾತುಕತೆ, ಗೊಂದಲ: ಬೆಳಗ್ಗೆಯಿಂದ ಪೊಲೀಸ್ ಅಧಿಕಾರಿಗಳು, ವಕೀಲರು ಮತ್ತು ಬಿಜೆಪಿ ನಾಯಕರ ನಡುವೆ ಸುದೀರ್ಘ ಮಾತುಕತೆ ನಡೆಯಿತು. ನೂರಾರು ಕಾರ್ಯಕರ್ತರು ಮನೆಯ ಹೊರಗಡೆ ಜಮಾಯಿಸಿದ್ದರು. ಮಳೆ ಬಂದರೂ ಕಾರ್ಯಕರ್ತರು ಜಗ್ಗಲಿಲ್ಲ. ಪೊಲೀಸ್ ಅಧಿಕಾರಿಗಳೂ ಸಮಸ್ಯೆ ಜಟಿಲವಾಗುತ್ತಾ ಹೋದ ಕಾರಣ ರಾತ್ರಿಯವರೆಗೂ ಶಾಸಕರ ಮನೆಯ ಆವರಣದಲ್ಲೇ ಉಳಿದರು.
ಎಲ್ಲಿ ನೋಡಿದರೂ ಬ್ಲಾಕ್, ಪೊಲೀಸರು, ಕಾರ್ಯಕರ್ತರು:
ಇಡೀ ದಿನ ವೇಣೂರು ಕ್ರಾಸ್‌ನಿಂದಲೇ ಅತ್ಯಧಿಕ ವಾಹನಗಳು ಕಂಡುಬಂದವು. ಗರ್ಡಾಡಿಯಲ್ಲಿ ಬೆಳಗ್ಗಿನಿಂದ ಸಂಜೆಯವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಶಾಸಕರ ಮನೆಯ ಮಾರ್ಗವಂತೂ ಕಾರ್ಯಕರ್ತರ ವಾಹನಗಳಿಂದ ತುಂಬಿ ಹೋಗಿತ್ತು. ಅಲ್ಲಲ್ಲಿ ಕಾರ್ಯಕರ್ತರು ತಮ್ಮ ಬೈಕು, ಕಾರುಗಳನ್ನು ರಸ್ತೆಗೆ ಅಡ್ಡವಾಗಿ ಇರಿಸಿದ್ದರು. ಪೊಲೀಸರ ಕಾರ್ಯಾಚರಣೆಗೆ ಇದೂ ಪ್ರಮುಖ ಅಡಚಣೆಯಾಗಿತ್ತು. ಸಾವಿರಾರು ಕಾರ್ಯಕರ್ತರು ಇದ್ದ ಕಾರಣ ಇಡೀ ದಿನ ಗರ್ಡಾಡಿಯಲ್ಲಿನ ಶಾಸಕ ಮನೆ ಮಿಥಿಲಾದಲ್ಲಿ ಗೊಂದಲ ಮನೆಮಾಡಿತ್ತು. ನಾಯಕರು, ಕಾರ್ಯಕರ್ತರ ಸಹಿತ ಎಲ್ಲರೂ ಊಟ, ತಿಂಡಿ ಬಿಟ್ಟು ತಮ್ಮ ನಾಯಕ ಪೂಂಜರ ರಕ್ಷಣೆಗೆ ನಿಂತಿರುವುದು ಕಂಡುಬಂತು.
ಶಾಸಕರ ಮನೆಗೆ ಕೋಟೆಯಾದ ಕಾರ್ಯಕರ್ತರು: ಸಾಯಂಕಾಲ ೬ ಗಂಟೆ ಹೊತ್ತಿಗೆ ನೋಟಿಸ್ ನೀಡಿದ ಪೊಲೀಸರು ಶಾಸಕರ ಮನೆಯ ಆವರಣದಿಂದ ಹೊರಗೆ ಹೋಗಿದ್ದರು. ಬಳಿಕ ಜಮಾಯಿಸಿದ್ದ ಸಾವಿರಾರು ಕಾರ್ಯಕರ್ತರು ಶಾಸಕ ಹರೀಶ್ ಪೂಂಜ ಅವರನ್ನು ಹೆಗಲಿನಲ್ಲಿ ಹೊತ್ತುಕೊಂಡು ಸಂಭ್ರಮಾಚರಣೆ ನಡೆಸಿದರು. ಹರೀಶ್ ಪೂಂಜ ಅವರಿಗೆ ಜೈಕಾರ ಕೂಗಿದರು. ಇದಾದ ನಂತರದ ಬೆಳವಣಿಗೆಯಲ್ಲಿ ನೂರಾರು ಪೊಲೀಸರು ಮತ್ತೆ ಪೂಂಜರ ಮನೆಯ ಆವರಣಕ್ಕೆ ಆಗಮಿಸಿದರು. ಈ ಬಾರಿ ಬಂಧಿಸಿಯೇ ತೀರುತ್ತೇವೆ ಎಂಬ ಉತ್ಸಾಹವೂ ಪೊಲೀಸರಲ್ಲಿ ಕಂಡುಬಂತು. ಆದರೆ, ಕಾರ್ಯಕರ್ತರು ಶಾಸಕ ಹರೀಶ್ ಪೂಂಜ ಅವರ ಬೆಂಗಾವಲಿಗೆ ನಿಂತರು. ಮನೆಯ ಆವರಣದಲ್ಲಿ ಸೇರಿದ್ದ ಕಾರ್ಯಕರ್ತರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು. ಕಾನೂನು ಪಾಲಿಸಿ, ಕಾಂಗ್ರೆಸ್ ಕೈಗೊಂಬೆ ಪೊಲೀಸ್ ಅಧಿಕಾರಿಗಳಿಗೇ ಧಿಕ್ಕಾರ ಎಂದು ಪೊಲೀಸರನ್ನು ಉದ್ದೇಶಿಸಿ ಘೋಷಣೆಗಳನ್ನು ಕೂಗಿದರು. ಶಾಸಕ ಹರೀಶ್ ಪೂಂಜರಿಗೂ ಜೈಕಾರ ಕೂಗಿದರು. ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರು, ಅಭಿಮಾನಿಗಳನ್ನು ಕಂಡ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಲಿಲ್ಲ. ಜತೆಗೆ, ವಕೀಲರು ಶಾಸಕ ಹರೀಶ್ ಪೂಂಜ ಅವರನ್ನು ಬಂಧಿಸಿದರೆ ಪೊಲೀಸರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯಗಳ ತೀರ್ಪುಗಳನ್ನು ಉಲ್ಲೇಖಿಸಿದರು. ಬಳಿಕ ಪೊಲೀಸರು ನೀಡಿರುವ ನೋಟೀಸ್‌ಗೆ ಉತ್ತರ ನೀಡಲು ಕಾಲಾವಕಾಶ ಕೇಳಿರುವುದರಿಂದ ಅಂತಿಮವಾಗಿ ಎಲ್ಲ ಪೊಲೀಸರು ಶಾಸಕ ಮನೆಯ ಆವರಣದಿಂದ ನಿರ್ಗಮಿಸಿದರು. ಅಲ್ಲಲ್ಲಿ ನಿಯೋಜಿಸಲಾಗಿದ್ದ ಪೊಲೀಸರನ್ನೂ ಹಿರಿಯ ಅಧಿಕಾರಿಗಳು ವಾಪಸ್ ಕರೆಸಿಕೊಂಡರು. ಈ ವೇಳೆ ಮತ್ತೆ ಶಾಸಕರ ಮನೆಯಲ್ಲಿ ಸಂಭ್ರಮದ ವಾತಾವರಣ ಕಂಡುಬಂತು.

ಪೂಂಜರನ್ನು ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ: ಎಸ್.ಪಿ. ರಿಷ್ಯಂತ್
ಶಾಸಕ ಹರೀಶ್ ಪೂಂಜರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದ್ದ ೨ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿತರಾದ ಹರೀಶ್ ಪೂಂಜರನ್ನು ವಿಚಾರಣೆಗಾಗಿ ಠಾಣೆಗೆ ಕರೆತರಲು ಬೆಳ್ತಂಗಡಿ ಠಾಣಾ ಪೊಲೀಸರು ಸದ್ರಿಯವರ ಮನೆಗೆ ತೆರಳಿರುತ್ತಾರೆ. ಈ ವೇಳೆ ಸ್ಥಳದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ನಳೀನ್ ಕುಮಾರ್ ಕಟೀಲ್‌ರವರು, ತಾನೇ ಖುದ್ದಾಗಿ ಹರೀಶ್ ಪೂಂಜಾರನ್ನು ವಿಚಾರಣೆಗೆ ಠಾಣೆಗೆ ಕಳುಹಿಸುವುದಾಗಿ ವಿನಂತಿಸಿಕೊಂಡಿರುತ್ತಾರೆ ಹಾಗೂ ಅದರಂತೆ ಸಂಸದರು ಆರೋಪಿತರಾದ ಹರೀಶ್ ಪೂಂಜಾರನ್ನು ಪೊಲೀಸರೊಂದಿಗೆ ಠಾಣೆಗೆ ಕಳುಹಿಸಿರುತ್ತಾರೆ. ಪ್ರಸ್ತುತ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹರೀಶ್ ಪೂಂಜಾರ ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್‌ಪಿ ರಿಷ್ಯಂತ್‌ರವರು ಪೊಲೀಸರು ಮತ್ತು ಮಾಧ್ಯಮದವರು ಇರುವ ವಾಟ್ಸಾಪ್ ಗ್ರೂಪ್‌ನಲ್ಲಿ ರಾತ್ರಿ ೧೦ ಗಂಟೆಗೆ ಸಂದೇಶ ರವಾನಿಸಿದ್ದಾರೆ.

ಪೊಲೀಸ್ ಠಾಣೆ ಸುಡುತ್ತೇವೆ ಎಂದು ಶಾಸಕರು ಬೆದರಿಕೆ ಹಾಕಿರುವುದಾಗಿ ಸ್ಪೀಕರ್‌ಗೆ ಮಾಹಿತಿ ನೀಡಿದ್ದ ಎಸ್‌ಪಿ ?: ಶಾಸಕ ಹರೀಶ್ ಪೂಂಜ ಅವರನ್ನು ಬಂಧಿಸುವ ಕುರಿತು ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರು ಮಾಹಿತಿ ನೀಡಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲಂತಬೆಟ್ಟು ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲುಗಣಿಗಾರಿಕೆ ಹಾಗೂ ಸದ್ರಿ ಗಣಿಗಾರಿಕೆಗಾಗಿ ಶೇಖರಿಸಲಾಗಿದ್ದ ಅಪಾಯಕಾರಿ ಸ್ಪೋಟಕಗಳ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮೋದ್ ಹಾಗೂ ಶಶಿರಾಜ್ ಶೆಟ್ಟಿ ಎಂಬವರುಗಳ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದಿನಾಂಕ ೧೮.೦೫.೨೦೨೪ ಅ.ಕ್ರ. ೫೬/೨೦೨೪ರಂತೆ ಕಲಂ ೯ಬಿ(೧)(ಬಿ) ಸ್ಫೋಟಕಗಳ ಕಾಯ್ದೆ ೧೮೮೪ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆ ಕಲಂ ೫ ೧೯೦೮ರಂತೆ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪೈಕಿ ಶಶಿರಾಜ್ ಶೆಟ್ಟಿ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಶಶಿರಾಜ್ ಪರವಾಗಿ ಶಾಸಕ ಹರೀಶ್ ಪೂಂಜರು ಇತರ ಕೆಲವು ಜನರೊಂದಿಗೆ ಮೇ ೧೮ರಂದು ರಾತ್ರಿ ಬೆಳ್ತಂಗಡಿ ಠಾಣೆಗೆ ಭೇಟಿ ನೀಡಿ ಆತನನ್ನು ಬಿಡುಗಡೆ ಮಾಡುವಂತೆ ಠಾಣಾಧಿಕಾರಿಗಳಿಗೆ ಒತ್ತಡ ಹಾಕಿ ಅವಾಚ್ಯವಾಗಿ ಬೈದು ಬೆದರಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪೊಲೀಸ್ ಇಲಾಖೆಯ ಬಗ್ಗೆ ಮತ್ತು ಪೊಲೀಸ್ ಅಧಿಕಾರಿಗಳ ಬಗ್ಗೆ ಅಸಂವಿಧಾನಿಕ ಶಬ್ದಗಳಲ್ಲಿ ಮಾತನಾಡಿ ದುರ್ವರ್ತನೆ ತೋರಿದ್ದಾರೆ. ಈ ಬಗ್ಗೆ ಶಾಸಕರಾದ ಹರೀಶ್ ಪೂಂಜರವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಅ.ಕ್ರ. ೫೭/೨೦೨೪ರಂತೆ ಕಲಂ ೩೫೩ ಮತ್ತು ೫೦೪ ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಅದಲ್ಲದೆ ಪ್ರಕರಣವೊಂದರ ಆರೋಪಿತ ಹಾಗೂ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಆಗಿರುವ ಶಶಿರಾಜ್ ಶೆಟ್ಟಿ ಎಂಬಾತನ ಬಂಧನ ವಿರೋಧಿಸಿ ಮೇ ೨೦ರಂದು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಕಾನೂನುಬಾಹಿರವಾಗಿ ಬೆಳ್ತಂಗಡಿ ವಿಕಾಸ ಸೌಧದ ಮುಂಭಾಗದಲ್ಲಿ ಶಾಸಕ ಹರೀಶ್ ಪೂಂಜ ಮತ್ತು ಇತರರು ಜನರನ್ನು ಗುಂಪು ಸೇರಿಸಿ ಪ್ರತಿಭಟನಾ ಸಭೆ ನಡೆಸಿದ್ದಾರೆ. ಸದ್ರಿ ಪ್ರತಿಭಟನಾ ಸಭೆಯಲ್ಲಿ ಹರೀಶ್ ಪೂಂಜ ಅವರು ಪ್ರಸ್ತುತ ಅರೆಸ್ಟ್ ಆಗಿರುವ ಕಾರ್ಯಕರ್ತರಿಗಾಗಿ ಪೊಲೀಸರ ಕಾಲರ್ ಹಿಡಿಯಲು ಸಿದ್ಧನೆಂದು ಹಾಗೂ ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ. ಹಳ್ಳಿಯ ಪೊಲೀಸ್ ಠಾಣೆಗೆ ಆದ ಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆಂದು ಬೆದರಿಸಿ ಸಾರ್ವಜನಿಕ ನೌಕರರಾದ ಬೆಳ್ತಂಗಡಿ ಠಾಣಾ ಪೊಲೀಸ್ ನಿರೀಕ್ಷಕರಿಗೆ ಮತ್ತು ಇತರೆ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಮಾನ ಮಾಡಿ ಜೀವ ಬೆದರಿಕೆ ಒಡ್ಡಿರುತ್ತಾರೆ. ತಾಲೂಕು ಕಚೇರಿಗೆ ತಮ್ಮ ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಹೋಗದಂತೆ ತಡೆಯೊಡ್ಡಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: ೫೮/೨೦೨೪, ಕಲಂ:೧೪೩, ೧೪೭, ೩೪೧, ೫೦೪, ೫೦೬ ಜೊತೆಗೆ ೧೪೯ ಐ.ಪಿ.ಸಿ.ನಂತೆ ಪ್ರಕರಣ ದಾಖಲಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಮಾಹಿತಿ ನೀಡಿದ್ದ ಎಸ್.ಪಿ. ರಿಷ್ಯಂತ್ ಅವರು ಶಾಸಕ ಹರೀಶ್ ಪೂಂಜ ಅವರು ಜನರನ್ನು ಪ್ರಚೋದಿಸಿರುವುದರಿಂದ ಗಲಭೆಯಾಗುವ ಸಾಧ್ಯತೆ ಇದೆ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಸಾರ್ವಜನಿಕ ಆಸ್ತಿಗೆ, ಜೀವಕ್ಕೆ ಹಾನಿ ಉಂಟು ಮಾಡುವ ಅಪಾಯ ಇದೆ. ಆದ್ದರಿಂದ ಹರೀಶ್ ಪೂಂಜ ಅವರ ಪೂರ್ವಾಪರ, ಹಿನ್ನಲೆ ವಿಚಾರಿಸಬೇಕಿದೆ. ಹಾಗಾಗಿ ಹರೀಶ್ ಪೂಂಜ ಅವರನ್ನು ಬಂಧಿಸಲು ಕಾನೂನಾತ್ಮಕವಾಗಿ ಅನುಮತಿ ಬೇಕಿದೆ ಎಂದು ಮನವಿ ಮಾಡಿದ್ದರು. ಇದಕ್ಕೆ ಸ್ಪೀಕರ್ ಖಾದರ್ ಅನುಮತಿ ನೀಡಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಈ ಕುರಿತು ಅಧಿಕೃತವಾಗಿ ಪ್ರಕಟಣೆ ಹೊರಬಿದ್ದಿಲ್ಲ.

ರಾತ್ರಿ ವೇಳೆ ಪೊಲೀಸ್ ಠಾಣೆಗೆ ಹಾಜರಾದ ಹರೀಶ್ ಪೂಂಜ: ಪೊಲೀಸ್ ಅಧಿಕಾರಿಗಳಿಂದ ವಿಚಾರಣೆಗೆ ಹಾಜರಾಗಲು ನೊಟೀಸ್ ಪಡೆದಿದ್ದ ಶಾಸಕ ಹರೀಶ್ ಪೂಂಜ ಅವರು ರಾತ್ರಿ ೯.೩೦ರ ವೇಳೆಗೆ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಶಾಸಕರಾದ ಸುನಿಲ್‌ಕುಮಾರ್, ವೇದವ್ಯಾಸ ಕಾಮತ್, ರಾಜೇಶ್ ನಾಕ್ ಉಳೇಪಾಡಿಗುತ್ತು, ಭಾಗೀರಥಿ ಮುರುಳ್ಯ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ವಕೀಲರಾದ ಶಂಭು ಶರ್ಮ, ಸುಬ್ರಹ್ಮಣ್ಯ ಕುಮಾರ್ ಅಗರ್ತ, ಅನಿಲ್ ಕುಮಾರ್ ಯು. ಮತ್ತು ಬೆಳ್ತಂಗಡಿಯ ಬಿಜೆಪಿ ಮುಖಂಡರೊಂದಿಗೆ ಠಾಣೆಗೆ ಹಾಜರಾದ ಹರೀಶ್ ಪೂಂಜ ಅವರು ಡಿವೈಎಸ್ಪಿ ವಿಜಯಪ್ರಸಾದ್ ಮತ್ತು ಇನ್ಸ್‌ಪೆಕ್ಟರ್ ಬಿ.ಜಿ. ಸುಬ್ರಾಪುರಮಠ್ ಎದುರು ತಮ್ಮ ಹೇಳಿಕೆ ದಾಖಲಿಸಿದ್ದಾರೆ. ರಾತ್ರಿಯಾದರೂ ತನ್ನ ಮನೆಯ ಬಳಿಯಿಂದ ಪೊಲೀಸ್ ಜೀಪು ತೆರಳದೇ ಇದ್ದ ಕಾರಣ ಠಾಣೆಗೆ ಹೋಗಬೇಕೇ ಬೇಡವೇ ಎಂದು ಜಿಜ್ಞಾಸೆಯಲ್ಲಿದ್ದ ಪೂಂಜ ಅವರು ಯಾವ ಕಾರಣಕ್ಕೆ ಮನೆಯ ಹತ್ತಿರ ಪೊಲೀಸ್ ಜೀಪು ಇರಿಸಲಾಗಿದೆ ಎಂದು ಜಿಜ್ಞಾಸೆಗೊಳಗಾಗಿದ್ದರು. ಪೊಲೀಸರು ತನ್ನನ್ನು ವಶಕ್ಕೆ ಪಡೆಯುವ ಉದ್ದೇಶವೇ, ರಕ್ಷಣೆ ಕೊಡುವ ಕಾರಣವೇ ಅಥವಾ ತನ್ನ ನಡೆಯ ಬಗ್ಗೆ ಮಾಹಿತಿ ಸಂಗ್ರಹವೇ ಎಂದು ವಕೀಲ ಶಂಭು ಶರ್ಮ ಮತ್ತು ನಾಯಕರೊಂದಿಗೆ ಚರ್ಚೆ ನಡೆಸಿದ ಪೂಂಜ ಅವರು ಬಳಿಕ ಠಾಣೆಗೆ ಹಾಜರಾಗಿ ಹೇಳಿಕೆ ದಾಖಲಿಸಲು ತೀರ್ಮಾನ ಕೈಗೊಂಡು ಠಾಣೆಗೆ ಹಾಜರಾದರು. ಇದಕ್ಕೆ ಮೊದಲು ಪ್ರತಾಪಸಿಂಹ ನಾಯಕ್ ಅವರ ಕಚೇರಿಗೆ ಮುಖಂಡರು ಭೇಟಿ ನೀಡಿದರು. ನಂತರ ಹರೀಶ್ ಪೂಂಜ ಅವರೂ ಅಲ್ಲಿಗೆ ಆಗಮಿಸಿ ಮಾತುಕತೆ ನಡೆಸಿದ ನಂತರ ಠಾಣೆಗೆ ತೆರಳಿದರು.

ಠಾಣೆಗೆ ವಿಚಾರಣೆಗೆ ಹಾಜರಾಗುವೆ: ಹರೀಶ್ ಪೂಂಜ
ಪೊಲೀಸರು ಎರಡು ಪ್ರಕರಣಗಳಲ್ಲಿ ನೋಟಿಸ್ ನೀಡಿದ್ದಾರೆ. ನಾನು ಇವತ್ತು ಅಥವಾ ನಾಳೆ ಪೊಲೀಸ್ ಠಾಣೆಗೆ ಹೋಗಿ ವಿಚಾರಣೆಗೆ ಸಹಕಾರ ನೀಡುತ್ತೇನೆ. ಕಾನೂನು ರೀತಿಯಲ್ಲಿ ಸಹಕರಿಸುತ್ತೇನೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.
ಮೇ ೨೨ರಂದು ರಾತ್ರಿ ಮನೆಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇವತ್ತು ರಾತ್ರಿ ಕಾಲಾವಕಾಶ ಸಿಕ್ಕಿದರೆ ನಮ್ಮ ಜನಪ್ರತಿನಿಧಿಗಳೊಂದಿಗೆ ಠಾಣೆಗೆ ಹೋಗುತ್ತೇನೆ. ನಾಳೆಯಾದರೆ ವಕೀಲರು ಮತ್ತಿತರರೊಂದಿಗೆ ಹೋಗುತ್ತೇನೆ. ಐದು ದಿನಗಳ ಕಾಲಾವಕಾಶ ಕೋರಿzನೆ ಎಂದರು.
ಅಮಾಯಕ ಕಾರ್ಯಕರ್ತನನ್ನು ಸಂಬಂಧವೇ ಇಲ್ಲದ ಪ್ರಕರಣದಲ್ಲಿ ಫಿಕ್ಸ್ ಮಾಡಿದಾಗ ನಾನು ಹೋರಾಟ ಮಾಡಿzನೆ. ಕಾರ್ಯಕರ್ತನನ್ನು ವಿನಾ ಕಾರಣ ಜೈಲಿಗೆ ಹಾಕಿದಾಗ ಜನಪ್ರತಿನಿಧಿಯಾಗಿ ಜೈಲು ಅಥವಾ ಪೊಲೀಸ್ ಠಾಣೆಯಲ್ಲಿ ವಿರೋಧ ವ್ಯಕ್ತಪಡಿಸುವುದು ನನ್ನ ಜವಾಬ್ದಾರಿ. ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿದ್ದು, ಈ ಸರಕಾರಕ್ಕೆ ಪೊಲೀಸರ ಮೂಲಕ ಎಚ್ಚರಿಕೆ ರವಾನೆಯಾಗಿದೆ ಎಂದರು.
ಕಾಂಗ್ರೆಸ್‌ಗೆ ನೈತಿಕತೆ ಇಲ್ಲ: ಕಾಂಗ್ರೆಸ್‌ನವರಿಗೆ ಪೊಲೀಸರ ಮೇಲಿನ ದೌರ್ಜನ್ಯದ ಕುರಿತು ಮಾತನಾಡುವ ನೈತಿಕತೆ ಇಲ್ಲ. ಅವರು ತುರ್ತು ಪರಿಸ್ಥಿತಿಯಿಂದ ಇದುವರೆಗೆ ದೌರ್ಜನ್ಯ ಮಾಡಿದವರು. ನಾನು ಅಧಿಕಾರಕ್ಕೋಸ್ಕರ ಪೊಲೀಸರಿಗೆ ಬೈದಿಲ್ಲ. ಸಿದ್ದರಾಮಯ್ಯ ಅಧಿಕಾರಕ್ಕೋಸ್ಕರ ಬಿದರಿಯವರ ಕಾಲರ್ ಪಟ್ಟಿ ಹಿಡಿದಿದ್ದರು ಎಂದು ಹರೀಶ್ ಪೂಂಜ ಹೇಳಿದರು.
ಪ್ರತಿಭಟನೆ ತಡೆಯಲು ಯತ್ನ: ಪೊಲೀಸ್ ಇಲಾಖೆ ಮೇಲೆ ಕಾಂಗ್ರೆಸ್ ಒತ್ತಡ ಹಾಕುವ ಮೂಲಕ ಪ್ರತಿಭಟನೆಗೆ ಅವಕಾಶ ಕೊಡಲಿಲ್ಲ. ಇದಕ್ಕೆ ನೀಡಿದ ಕಾರಣ ನೀತಿ ಸಂಹಿತೆ. ರೇವಣ್ಣ ಪೆನ್ ಡ್ರೈವ್ ವಿಷಯದಲ್ಲಿ ನೀತಿ ಸಂಹಿತೆ ಇರುವಾಗ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ಮಾಡಿದಾಗ ಯಾವ ಕಾನೂನು ಇತ್ತು? ಬಿಜೆಪಿ ಕಾರ್ಯಕರ್ತನಿಗೆ ಅನ್ಯಾಯವಾಗಿದೆ ಎಂದಾಗ ಹೀಗೆ ಮಾಡುತ್ತೀರಾ? ಜನರಿಗೆ ಬೆದರಿಕೆ ಹಾಕಿದರೂ ಪ್ರತಿಭಟನೆಗೆ ೧,೫೦೦ ಜನ ಬಂದರು. ಕೊನೆಗೆ ನನ್ನ ಮೇಲೆ ಸಿದ್ದರಾಮಯ್ಯ ಬಂದು ಹೋದ ಬಳಿಕ ಇನ್ನೊಂದು ಪ್ರಕರಣ ದಾಖಲಿಸಿದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೀವ ಇರುವವರೆಗೆ ಕಾರ್ಯಕರ್ತರ ಸೇವೆ: ಬೆಳಗ್ಗೆಯಿಂದ ಕಾರ್ಯಕರ್ತರು ಬಿಸ್ಕೆಟನ್ನು ಬಿರಿಯಾನಿ ರೀತಿ ತಿಂದು ಕುಳಿತಿದ್ದಾರೆಂದರೆ ಅದು ನಮ್ಮ ಸಾಮರ್ಥ್ಯ. ನಮ್ಮೆಲ್ಲ ನಾಯಕರು ಬೆಂಬಲವಾಗಿ ನಿಂತಿದ್ದಾರೆ. ಕಾರ್ಯಕರ್ತರಿಗೆ ಧನ್ಯವಾದ ಹೇಳಲು ಸಾಧ್ಯವಿಲ್ಲ. ಈ ಜೀವ ಇರುವವರೆಗೂ ನಿಮ್ಮ ಸೇವೆ ಮಾಡುತ್ತೇನೆ ಎಂದು ಭರವಸೆ ನೀಡುತ್ತೇನೆ ಎಂದು ಹರೀಶ್ ಪೂಂಜ ಹೇಳಿದರು.

ಹರೀಶ್ ಪೂಂಜ ಬಂಧನಕ್ಕೆ ಯತ್ನಿಸುತ್ತಿರುವುದು ಖಂಡನೀಯ: ವಿಜಯೇಂದ್ರ
ಪದೇಪದೆ ಬಿಜೆಪಿಗರ ಮೇಲೆ ದಬ್ಬಾಳಿಕೆ ಸಹಿಸಲಾಗದು. ಹರೀಶ್ ಪೂಂಜ ಬಂಧನಕ್ಕೆ ಯತ್ನಿಸುತ್ತಿರುವುದು ಖಂಡನೀಯ. ಪೂಂಜ ಭಾಷಣ ನೋಡಿದ್ದೇನೆ, ಅವರ ಜತೆ ಚರ್ಚಿಸಿದ್ದೇನೆ. ವಿಷಯ ಮರೆಮಾಚುವ ಕೆಲಸ ಪೊಲೀಸರು ಮಾಡುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪಿಸಿದ್ದಾರೆ. ಶಾಸಕರು ಉದ್ವೇಗದಲ್ಲಿ ಕೆಲವು ಮಾತುಗಳನ್ನು ಹೇಳಿದ್ದಾರೆ. ಅದು ಸರಿ ಅಲ್ಲ ಎಂಬುದು ಪೂಂಜರಿಗೂ ಕೂಡ ಗೊತ್ತಾಗಿದೆ. ಹಾಗೆಂದು ಪದೇಪದೆ ಬಿಜೆಪಿಗರ ಮೇಲೆ ದಬ್ಬಾಳಿಕೆ ಸಹಿಸಲು ಆಗಲ್ಲ. ಶಾಸಕರನ್ನು ಅರೆಸ್ಟ್ ಮಾಡುವ ದುಸ್ಸಾಹಸಕ್ಕೆ ಕೈಹಾಕಿದರೆ ಮುಂದಾಗುವುದಕ್ಕೆಲ್ಲ ಸರ್ಕಾರ, ಇಲಾಖೆ ಹೊಣೆ ಆಗಬೇಕಾಗುತ್ತದೆ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದರು. ಕಾನೂನು ಸುವ್ಯವಸ್ಥೆ ಹದಗೆಡಲು ನೀವೇ ಕುಮ್ಮಕ್ಕು ಕೊಡುತ್ತಿದ್ದೀರಿ. ಶಶಿರಾಜ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಶಾಸಕರ ಬಂಧನಕ್ಕೆ ಮುಂದಾಗುವುದನ್ನು ಕೈ ಬಿಡಬೇಕು. ಗೃಹ ಸಚಿವರು ಎಸ್ಪಿ ಜತೆ ಮಾತನಾಡಿ ಸೂಚನೆ ಕೊಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

ಕಾನೂನು ಹೋರಾಟ ಮಾಡುತ್ತೇವೆ ನಳಿನ್: ಶಾಸಕ ಹರೀಶ್ ಪೂಂಜ ಅವರನ್ನು ಬಂಧಿಸಲು ಪೊಲೀಸ್ ಇಲಾಖೆ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಇದಕ್ಕೆ ಕಾರಣ, ನಮ್ಮ ವಕೀಲರ ತಂಡ ಮತ್ತು ಕಾರ್ಯಕರ್ತರ ಬೆಂಬಲ. ಪೊಲೀಸರು ನೋಟಿಸ್ ನೀಡಿ ಹೋಗಿದ್ದು, ಈ ಕುರಿತು ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುತ್ತೇವೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಹರೀಶ್ ಪೂಂಜ ವಿರುದ್ಧ ನಾಲ್ಕು ಪ್ರಕರಣಗಳನ್ನು ದಾಖಲಿಸಿ, ನೋಟಿಸ್ ಕೊಡದೆ ಬಂಧನಕ್ಕೆ ಪ್ರಯತ್ನಿಸಲಾಗಿತ್ತು. ಇದಕ್ಕೆ ನಾವು ಅವಕಾಶ ನೀಡಿಲ್ಲ. ನಮ್ಮೆಲ್ಲ ನಾಯಕರು, ಕಾರ್ಯಕರ್ತರು, ಪೂಂಜರ ಅಭಿಮಾನಿಗಳು ಹೋರಾಟ ಮಾಡಿದ ಪರಿಣಾಮ, ನಮ್ಮ ವಕೀಲರ ಪರಿಶ್ರಮ, ಅಧಿಕಾರಿಗಳೊಂದಿಗೆ ಮಾತುಕತೆಯ ಬಳಿಕ ಬಂಧನ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದು ಮೊದಲ ಹಂತದ ಗೆಲುವು ಎಂದು ತಿಳಿಸಿದರು.ಕೇಸುಗಳು ಹೊಸದಲ್ಲ. ನಾವು ಕೇಸುಗಳನ್ನು ಹಾಕಿಸಿಕೊಂಡೇ ನಾಯಕರಾದವರು. ಕಾನೂನಿಗೆ ಗೌರವ ನೀಡುತ್ತೇವೆ. ನೋಟಿಸಿಗೆ ಉತ್ತರ ನೀಡುತ್ತೇವೆ. ಉತ್ತರವನ್ನು ಪೊಲೀಸ್ ಠಾಣೆಯಲ್ಲಿ ಕೊಡುತ್ತೇವೆ. ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುತ್ತೇವೆ. ಈ ಕುರಿತು ಎಸ್.ಪಿ.ಯವರಿಗೆ ತಿಳಿಸಿದ್ದೇವೆ. ಇದು ಬಂಧಿಸುವ ಪ್ರಕರಣವಲ್ಲ ಎಂದರು.

ನೋಟಿಸ್ ನೀಡದೆ ಶಾಸಕ ಹರೀಶ್ ಪೂಂಜರ ಬಂಧನ ಯತ್ನ-ವಕೀಲರ ಸಂಘ ಖಂಡನೆ: ಬೆಳ್ತಂಗಡಿ ವಕೀಲರ ಸಂಘದ ಸದಸ್ಯರಾಗಿರುವ ಶಾಸಕ ಹರೀಶ್ ಪೂಂಜ ವಿರುದ್ಧ ಬೆಳ್ತಂಗಡಿ ಪೊಲೀಸರು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ ಕಾನೂನು ಪ್ರಕಾರ ನೋಟಿಸ್ ನೀಡದೆ ಬಂಧನಕ್ಕೆ ಮುಂದಾಗಿದ್ದಾರೆ ಎಂದು ಬೆಳ್ತಂಗಡಿ ವಕೀಲರ ಸಂಘ ಖಂಡಿಸಿದೆ. ವಕೀಲ ಹಾಗೂ ಜನಪ್ರತಿನಿಧಿಯಾಗಿರುವ ಹರೀಶ್ ಪೂಂಜರ ಸಂವಿಧಾನಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸುವ ಪೊಲೀಸರ ಕ್ರಮ ಖಂಡನೀಯ. ಇಂಥ ಕಾನೂನು ಬಾಹಿರ ದಾಷ್ಟ್ಯದ ಕ್ರಮಗಳಿಗೆ ಪೊಲೀಸರು ಮುಂದಾಗದೆ ಸಂವಿಧಾನ ಮತ್ತು ಕಾನೂನಿಗೆ ಬದ್ಧವಾಗಿ ನಡೆಯಬೇಕು ಎಂದು ಸಂಘ ಆಗ್ರಹಿಸಿದೆ ಎಂದು ಸಂಘದ ಅಧ್ಯಕ್ಷ ವಸಂತ ಮರಕಡ ತಿಳಿಸಿದ್ದಾರೆ.

p>

LEAVE A REPLY

Please enter your comment!
Please enter your name here