ಮೇ ದಿನ ಕಾರ್ಮಿಕ ವರ್ಗಕ್ಕೆ ಹಕ್ಕು, ಶಕ್ತಿ ತುಂಬಿದ ದಿನ: ಮುನೀರ್ ಕಾಟಿಪಳ್ಳ

0

ಬೆಳ್ತಂಗಡಿ: ಮೇ ದಿನ ಎಲ್ಲ ದಿನದಂತಲ್ಲ. ಜಗತ್ತಿನ ಅತ್ಯಂತ ದೊಡ್ಡ ಶಕ್ತಿಯಾದ ದುಡಿಯುವ ಜನರ ದಿನವಾಗಿದ್ದು, ಕಾರ್ಮಿಕ ವರ್ಗಕ್ಕೆ ಹಕ್ಕು, ಶಕ್ತಿ ತುಂಬಿದ ದಿನ ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಹೇಳಿದರು.

ಮೇ.1ರಂದು ಬೆಳ್ತಂಗಡಿಯ ಜಮಾಯಿತುಲ್ ಫಲಾಹ್ ಸಭಾ ಭವನದಲ್ಲಿ ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ನಡೆದ ಮೇ ದಿನಾಚರಣೆಯ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದರು.

ಕಾರ್ಮಿಕ ವರ್ಗದ ತ್ಯಾಗ, ಬಲಿದಾನಗಳಿಂದ ಕೆಂಬಾವುಟ ಹಿಡಿದು ತಂದ ಕಾರ್ಮಿಕ ವರ್ಗದ ಹಕ್ಕು ಸವಲತ್ತುಗಳನ್ನು ಕಿತ್ತೆಸೆಯುತ್ತಿರುವ ಕೇಂದ್ರದ ಬಿಜೆಪಿ ಸರಕಾರದ ನಡೆ ಖಂಡನೀಯ. ಇದು ಬಿಜೆಪಿ ಕಾರ್ಮಿಕ ವರ್ಗಕ್ಕೆ ಮಾಡುವ ಮಹಾದ್ರೋಹ ಎಂದರು.

ಕಳೆದ 6 ವರ್ಷಗಳಿಂದ ಬಿಜೆಪಿಗೆ 6 ಶಾಸಕರನ್ನು ನೀಡಿದ್ದರೂ, ಕಳೆದ 33 ವರ್ಷಗಳಿಂದ ಬಿಜೆಪಿ ಎಂಪಿಯನ್ನೇ ಗೆಲ್ಲಿಸಿದ್ದರೂ ಇಲ್ಲಿಯ ಬೀಡಿ ಕಾರ್ಮಿಕರ ದುಡಿದ ವೇತನ ಕೊಡಿಸಲಾಗದ ಇವರಿಂದ ಜಿಲ್ಲೆಗೆ ಇನ್ನೇನು ಪ್ರಯೋಜನ ದೊರೆತೀತು ಹೇಳಿ? ಇಂತಹ ಕಾರ್ಪರೇಟ್ ಪರ, ಕಾರ್ಮಿಕ ವರ್ಗದ, ರೈತ ವರ್ಗದ ವಿರುದ್ಧ ಇರುವ ಸರಕಾರದ ವಿರುದ್ಧ ಸಮರಶೀಲ ಹೋರಾಟಗಳು ನಡೆಯಬೇಕು ಎಂದರು.

ರೈತ ಮುಖಂಡ ಶ್ಯಾಮರಾಜ್ ಮಾತಾಡಿ, ಚಾಲಕ ರಸ್ತೆಯಲ್ಲಿ ಸರಿಯಾಗಿ ವಾಹನ ಓಡಿಸದಿದ್ದರೆ ಜನ ಕೂರಲು ಹೇಗೆ ಒದ್ದಾಡುತ್ತಾ, ಚಾಲಕನಿಗೆ ದಬಾಯಿಸುತ್ತಾರೋ, ಅದೇ ರೀತಿ ದೇಶದ ಚಾಲಕ ದೇಶವನ್ನು ಗುಂಡಿಗಳಿಗೆ ಹಾಕುತ್ತಾ, ನಾಶದತ್ತ ಚಲಾಯಿಸುವಾಗ ಮೌನವಾಗಿದ್ದರೆ ಬದುಕೇ ನಾಶವಾದೀತು, ಎಚ್ಚರದಿಂದ ಮುನ್ನಡೆಯೋಣ ಎಂದರು.

ಸಿಪಿಐಎಂ ತಾಲೂಕು ಮುಖಂಡರಾದ ನೆಬಿಸಾ, ಈಶ್ವರಿ, ಕಾರ್ಮಿಕ ಮುಖಂಡರಾದ ರಝಾಕ್ ಬಿ.ಎ., ಜೆ.ಎಂ.ಎಸ್.ನ ಕಿರಣಪ್ರಭಾ, ಕುಮಾರಿ, ಯುವಜನ ನಾಯಕ ಶ್ರೀನಿವಾಸ ಲ್ಯಾಲ, ವಿದ್ಯಾರ್ಥಿ ನಾಯಕ ವಿನುಶರಮಣ, ಪುಷ್ಪಾ, ರಾಮಚಂದ್ರ, ಅಶ್ವಿತ, ಅಭಿಷೇಕ್, ಜಯರಾಮ ಮಯ್ಯ, ಫಾರೂಕ್ ಮಡಂಜೋಡಿ, ವಿಶ್ವನಾಥ ಶಿಬಾಜೆ, ಪ್ರದೀಪ್, ಡಾಗಯ ಗೌಡ ಕಳೆಂಜ, ಜನಾರ್ದನ ಆಚಾರ್ಯ ಕಳೆಂಜ, ಮೊದಲಾದವರು ಉಪಸ್ಥಿತರಿದ್ದರು. ಶ್ಯಾಮರಾಜ್ ಸ್ವಾಗತಿಸಿದರು. ಜಯಶ್ರೀ ವಂದಿಸಿದರು.

ಕಾರ್ಮಿಕ ವಿರೋಧಿ ಸರಕಾರದ ವಿರುದ್ಧ ಹೋರಾಟ: ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ನಾಯಕ ಬಿ.ಎಂ.ಭಟ್ ಮಾತನಾಡಿ, 1886ರಂದು 8 ಗಂಟೆಯ ಕೆಲಸ. 8 ಗಂಟೆ ವಿಶ್ರಾಂತಿ, 8 ಗಂಟೆ ಮನೋರಂಜನೆ ಎಂಬ ಘೋಷಣೆಯಡಿ ಚಿಕಾಗೋದಲ್ಲಿ ಕಾರ್ಮಿಕರ ತ್ಯಾಗ ಬಲಿದಾನದ ಹೊರಾಟಕ್ಕೆ ಸಿಕ್ಕಜಯದಿಂದ ಇಂದು ನಾವು ಬದುಕುತ್ತಿದ್ದೇವೆ. ಆದರೆ ಇಂದು ನರೇಂದ್ರ ಮೋದಿ ಸರಕಾರ ದುಡಿಯುವ ಜನರ ಹಕ್ಕು ಸವಲತ್ತುಗಳ ಕಿತ್ತೆಸೆಯುವುದನ್ನು ನೋಡುತ್ತಾ ಸುಮ್ಮನೆ ಕೂತರೆ ಇದು ನಾವು ನಮ್ಮ ಹಿರಿಯರಿಗೆ ಮಾಡುವ ದ್ರೋಹ ಮಾತ್ರವಲ್ಲ, ನಮ್ಮ ಪೀಳಿಗೆಗೆ ಮಾಡುವ ವಂಚನೆಯೂ ಆಗಿದೆ. ಕಾರ್ಮಿಕ ವರ್ಗದ ರೈತ ವರ್ಗದ ವಿರೋಧಿ ಸರಕಾರದ ವಿರುದ್ಧ ಸಮರಶೀಲ ಹೋರಾಟಕ್ಕೆ ಸಿದ್ಧರಾಗಲು ನಮಗೆ ಈ ಮೇ ದಿನ ಸ್ಫೂರ್ತಿ ಸಹಕಾರಿಯಾಗಲಿ ಎಂದು ಹೇಳಿದರು.

p>

LEAVE A REPLY

Please enter your comment!
Please enter your name here