ಕೊಕ್ಕಡ: ವ್ಯಕ್ತಿಯೊಬ್ಬರ ರಬ್ಬರ್ ತೋಟದಲ್ಲಿದ್ದ ಮರವೊಂದು ವಿದ್ಯುತ್ ಕಂಬ ಹಾಗೂ ತಂತಿಯ ಮೇಲೆ ಬಿದ್ದು ವಿದ್ಯುತ್ ತಂತಿ ಹಾಗೂ ಕಂಬ ನೆಲಕ್ಕೆ ಉರುಳಿದ ಘಟನೆ ಶಿಶಿಲ ಗ್ರಾಮದ ಅಡ್ಡಹಳ್ಳ ಎಂಬಲ್ಲಿ ಏ.25ರಂದು ನಡೆದಿತ್ತು.
ಸುಮಾರು ನಾಲ್ಕರಿಂದ ಐದು ಮನೆಗಳಿಗೆ ವಿದ್ಯುತ್ ಸಂಪರ್ಕಿಸುವ ಈ ಕಂಬವನ್ನು ದುರಸ್ತಿಗೊಳಿಸುವಂತೆ ಸ್ಥಳೀಯರು ಕೊಕ್ಕಡ ಮೆಸ್ಕಾಂನ ಅಧಿಕಾರಿಗಳಿಗೆ ದೂರವಾಣಿಯ ಮೂಲಕ ತಿಳಿಸಿದರು. ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಮೆಸ್ಕಾಂ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಮರವನ್ನು ತೆರವುಗೊಳಿಸುವುರೊಂದಿಗೆ ವಿದ್ಯುತ್ತಿನ ದುರಸ್ತಿಗೊಳಿಸುವಲ್ಲಿ ಸಹಕರಿಸಿದರು.
ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಸಣ್ಣ ಪ್ರಮಾಣದ ವಿದ್ಯುತ್ತಿನ ತೊಂದರೆ ಉಂಟಾದರೂ ದಿನಗಟ್ಟಲೆ ಸರಿಪಡಿಸದೆ ಇರುವ ಉದಾಹರಣೆಗಳ ಮಧ್ಯೆ ಕೊಕ್ಕಡ ಮೆಸ್ಕಾಂನ ಕ್ಷಿಪ್ರ ಕಾರ್ಯಾಚರಣೆಗೆ ವ್ಯಾಪಕ ಶ್ಲಾಘನೆ ಉಂಟಾಗಿದೆ.
ಅಲ್ಲದೆ ಬೇಸಿಗೆ ಕಾಲವಾದ್ದರಿಂದ ನೀರು ಹಾಯಿಸಲು ವಿದ್ಯುತ್ ಅನಿವಾರ್ಯವಾದ ಸಂದರ್ಭದಲ್ಲಿ ಮೆಸ್ಕಂನ ಕಾರ್ಯಕ್ಕೆ ಸ್ಥಳೀಯರಾದ ಯೋಗಿಶ ದಾಮಲೆ ಹಾಗೂ ಮತ್ತಿತರರು ಕೃತಜ್ಞತೆ ಸಲ್ಲಿಸಿದ್ದಾರೆ.