ಉಜಿರೆ: ಹಳೆಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡದ ಖ್ಯಾತ ಚಿತ್ರನಟ ರಮೇಶ್ ಅರವಿಂದ್ ಅವರು ಶಾಲಾ ಮಕ್ಕಳು ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜು, ಉಜಿರೆಯ ಎನ್. ಎಸ್.ಎಸ್. ಸ್ವಯಂಸೇವಕರೊಂದಿಗೆ ಸಂವಾದ ನಡೆಸಿದರು.
ಕನ್ನಡ ಶಾಲೆಗಳು ಮರೆಯಾಗುತ್ತಿವೆ, ಬಾಗಿಲು ಮುಚ್ಚುತ್ತಿವೆ.ಈ ದಿನಗಳಂತು ಸರಕಾರಿ ಶಾಲೆಗಳ ಅಭಿವೃದ್ಧಿಗೆ, ಕಟ್ಟಡ ನಿರ್ಮಾಣದಂತಹ ಕಾರ್ಯಗಳಿಗೆ ನೆರವು ನೀಡಲು ಹಿಂದೇಟು ಹಾಕುವವರೇ ಹೆಚ್ಚು . ಇಂತಹ ಸಂದರ್ಭದಲ್ಲಿ ಫೆ.4ರಂದು 100 ಕ್ಕೂ ಹೆಚ್ಚು ಎನ್.ಎಸ್.ಎಸ್. ಸ್ವಯಂ ಸೇವಕರು ಹಳೆಪೇಟೆಯ ಕನ್ನಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಪೂರ್ತಿ ದಿನ ಕಾರ್ಯನಿರ್ವಹಿಸಿದ್ದರು.
ಶಾಲೆಗೆ ಭೇಟಿ ನೀಡಿದಂತಹ ರಮೇಶ್ ಅರವಿಂದ್ ಅವರು ಕಟ್ಟಡ ನಿರ್ಮಾಣದ ಕಾಮಗಾರಿಯನ್ನು ವೀಕ್ಷಿಸಿ, ಏನ್.ಎಸ್.ಎಸ್. ಸ್ವಯಂಸೇವಕರು ‘ಬದುಕು ಕಟ್ಟೋಣ ಬನ್ನಿ’ ತಂಡದ ಮಾರ್ಗದರ್ಶನದೊಂದಿಗೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳೊಂದಿಗೆ ಸೇರಿ ಇಂತಹ ಮಹತ್ತರವಾದ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಪ್ರಶಂಶಿಸಿದರು.
ವಿಧಾನ ಪರಿಷತ್ತಿನ ಶಾಸಕ ಕೆ.ಪ್ರತಾಪ್ ಸಿಂಹ ನಾಯಕ್, ‘ಬದುಕು ಕಟ್ಟೋಣ ಬನ್ನಿ’ ತಂಡದ ಸಂಚಾಲಕ ಮೋಹನ್ ಕುಮಾರ್, ರಾಜೇಶ್ ಪೈ, ಯೋಜನಾಧಿಕಾರಿಗಳಾಗಿರುವ ಪ್ರೊ.ದೀಪಾ ಆರ್.ಪಿ , ಡಾ. ಮಹೇಶ್ ಕುಮಾರ್ ಶೆಟ್ಟಿ.ಹೆಚ್ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.